ಪ್ರಕೃತಿ ಸಂರಕ್ಷಣೆಯೇ ಇವರ ಉಸಿರು…

449

ಇವತ್ತು ಪರಿಸರ ದಿನಾಚರಣೆ. ಇವತ್ತೊಂದು ದಿನ ಪರಿಸರದ ಬಗ್ಗೆ ಕಾಳಜಿ ತೋರಿಸಿ ಮಾತ್ನಾಡುವ ಜನರ ಸಂಖ್ಯೆ ಹೆಚ್ಚಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಪ್ರತಿಯೊಬ್ಬರು ಸಲಹೆ ಕೊಡ್ತಾರೆ. ಹೀಗೆ ಸಲಹೆ ನೀಡುವ ಜನರಲ್ಲಿ ಎಷ್ಟು ಜನ ತಮ್ಮ ಜೀವನದಲ್ಲಿ ಪ್ರಕೃತಿ ಬಗ್ಗೆ ನಿಜವಾದ ಕಾಳಜಿ ತೋರಿಸ್ತಿದ್ದಾರೆ ಅನ್ನೋ ಪ್ರಶ್ನೆ ಇದೆ. ಯಾಕಂದ್ರೆ, ಪ್ರಕೃತಿಗೆ ಮನುಷ್ಯ ಅನಿವಾರ್ಯವಲ್ಲ. ಆದ್ರೆ, ಮನುಷ್ಯನಿಗೆ ಪ್ರಕೃತಿ ಅನಿವಾರ್ಯ. ಇದನ್ನ ಅರ್ಥ ಮಾಡಿಕೊಂಡವರು ಮಾತ್ರ ಇವರ ತರಹ ಕೆಲಸ ಮಾಡಲು ಸಾಧ್ಯ.

ಯೆಸ್, ಅರಣ್ಯ ಇಲಾಖೆಯ ಕಲಘಟಗಿ ವಲಯದಲ್ಲಿ ಅರಣ್ಯ ಪ್ರೇರಕರಾಗಿ ಸೇವೆ ಸಲ್ಲಿಸುತ್ತಿರುವ ಜಯವಂತ ಬಾಂಬುಲೆ ನಿಜವಾದ ಪರಿಸರ ಪ್ರೇಮಿ. ತಮ್ಮ ಬದುಕನ್ನ ಎಷ್ಟು ಪ್ರೀತಿಸ್ತಾರೋ ಅಷ್ಟೇ ತಮ್ಮ ಸುತ್ತಲಿನ ನಿಸರ್ಗದ ಬಗ್ಗೆ ಒಲವು, ಪ್ರೀತಿ, ಕಾಳಜಿ ಇದೆ. ತಮ್ಮ ದುಡಿಮೆಯ ಹಣದಲ್ಲಿ ಜನರಿಗೆ ಸಸಿ ವಿತರಿಸಿ ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸ್ತಿದ್ದಾರೆ. ಈ ಪರೋಪಕಾರಿ ಕಾಯಕ್ಕೆ ಬರೋಬ್ಬರಿ 33 ವರ್ಷಗಳಾಗಿವೆ.

50 ಸಾವಿರ ಸಸಿ ನೆಟ್ಟ ಪರಿಸರ ಪ್ರೇಮಿ

ಜಯಂತ್ ಬಾಂಬುಲೆ ಅವರು ಕಲಘಟಗಿ ತಾಲೂಕಿನ ವಿವಿಧ ಹಳ್ಳಿಗಳ ರೈತರಿಗೆ, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸ್ತಿದ್ದಾರೆ. ಇದರ ಜೊತೆಗೆ 50 ಸಾವಿರಕ್ಕೂ ಹೆಚ್ಚು ಸಸಿ ನೆಟ್ಟಿದ್ದಾರೆ. ಇಷ್ಟು ಮಾಡಿ ಕೈತೊಳೆದುಕೊಂಡಿಲ್ಲ. ಬದಲಾಗಿ ನೆಟ್ಟ ಸಸಿಗಳಿಗೆ ನೀರುಣಿಸುತ್ತಾ ಅವುಗಳನ್ನ ಪೋಷಿಸಿಕೊಂಡು ಬರ್ತಿದ್ದಾರೆ. ಅರಣ್ಯ ಪ್ರೇರಕರಾಗಿ ಕೆಲಸ ಮಾಡುತ್ತಿರುವ ಅವರಿಗೆ ಗೌರವ ರೂಪದಲ್ಲಿ ಒಂದಿಷ್ಟು ಹಣ ಬರುತ್ತೆ. ಅದರಲ್ಲಿಯೇ ಜೀವನ ಸಾಗಿಸ್ತಾ, ಈ ನೆಲದ ಋಣ ತೀರಿಸುವ ಕೆಲಸ ಮಾಡ್ತಿದ್ದಾರೆ.

ಹಲವಾರು ವರ್ಷಗಳಿಂದ ಜಯಂತ್ ಬಾಂಬುಲೆ ಅವರು ಪರಿಸರದ ಜಾಗೃತಿ ಕಾರ್ಯಗಳನ್ನ ಮಾಡಿಕೊಂಡು ಬರ್ತಿದ್ದಾರೆ. ಈ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ. ಸರ್ಕಾರ ಇಂಥಾ ನಿಜವಾದ ಪರಿಸರ ಪ್ರೇಮಿಯ ನೌಕರಿಯನ್ನ ಖಾಯಂಗೊಳಿಸಿ, ಆರ್ಥಿಕ ಭದ್ರತೆಯನ್ನ ನೀಡಬೇಕು.

ಅಶೋಕ ದುಮ್ಮಾಳ, ಸ್ಥಳೀಯರು, ಧಾರವಾಡ

ಇನ್ನು ಬಿಡುವಿನ ಸಮಯದಲ್ಲಿ ಗ್ರಾಮೀಣ ಶಾಲೆಗಳಳಿಗೆ ಭೇಟಿ ನೀಡಿ, ಮಕ್ಕಳಲ್ಲಿ ಪರಿಸರ ಜಾಗೃತಿ ಕುರಿತು ಪಾಠ ಮಾಡ್ತಾರೆ. ಪರಿಸರದ ಬಗ್ಗೆ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿ, ವಿಜೇತ ಮಕ್ಕಳಿಗೆ ಬಹುಮಾನ ಸಹ ನೀಡುಕೊಂಡು ಬರ್ತಿದ್ದಾರೆ. ಇಷ್ಟೆಲ್ಲ ಸಮಾಜಮುಖಿ ಕಾರ್ಯ ಮಾಡ್ತಿರುವ ಜಯಂತ್ ಗೆ ನೌಕರಿಯ ಭದ್ರತೆ ಇಲ್ಲ.

ಭದ್ರತೆ ಇಲ್ಲದ ನೌಕರಿ

ಕೆಳೆದ 33 ವರ್ಷಗಳಿಂದ ಕಲಘಟಗಿ ವಲಯದಲ್ಲಿ ಅರಣ್ಯ ಪ್ರೇರಕರಾಗಿ ಜಯಂತ್ ಕಾರ್ಯನಿರ್ವಹಿಸ್ತಿದ್ದಾರೆ. ಆದ್ರೆ, ಇಂದಿಗೂ ನೌಕರಿ ಮಾತ್ರ ಖಾಯಂ ಆಗಿಲ್ಲ. ನೌಕರಿ ಖಾಯಂ ಮಾಡುವಂತೆ ಜಯಂತ್ ಬಾಂಬುಲೆ ಅವರು 5 ಬಾರಿ ಸಿಎಂ, 5 ಬಾರಿ ಅರಣ್ಯ ಸಚಿವರಿಗೆ ಹಾಗೂ ಉಪ ಅರಣ್ಯ ಸಂರಕ್ಷಣಾಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ. ಆದ್ರೆ, ಜನಪ್ರತಿನಿಧಿಗಳು ಇದಕ್ಕೆ ಕ್ಯಾರೆ ಅಂತಿಲ್ಲ. ನಿಜವಾಗಿ ಸೇವೆ ಸಲ್ಲಿಸುತ್ತಿರುವವರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಅನ್ನೋದು ಇದರಿಂದ ತಿಳಿದು ಬರುತ್ತೆ.

ನನಗೆ ಸಿಗುವ ಗೌರವದ ಹಣದಲ್ಲಿಯೇ ಒಂದಿಷ್ಟು ಪರಿಸರದ ಸೇವೆ ಮಾಡುತ್ತಿದ್ದೇನೆ. ಸರ್ಕಾರ ನನ್ನ ನೌಕರಿಯನ್ನ ಖಾಯಂ ಮಾಡುವ ಮೂಲಕ ನನ್ನ ಈ ಕಾರ್ಯಕ್ಕೆ ಪ್ರೋತ್ಸಾಹಿಸಬೇಕೆಂದು ಅವರಲ್ಲಿ ಕೇಳಿಕೊಳ್ಳುತ್ತೇನೆ.

ಜಯಂತ ಬಾಂಬಲೆ, ಅರಣ್ಯ ಪ್ರೇರಕ, ಕಲಘಟಗಿ

ಜಯಂತ್ ಗೆ ಸಂದ ಪ್ರಶಸ್ತಿ ಪುರಸ್ಕಾರ

ಜಯವಂತ ಬಾಂಬುಲೆ ಅವರ ಪರಿಸರ ಸೇವೆಯನ್ನ ಪರಿಗಣಿಸಿ ಹತ್ತಾರು ಸಂಘ-ಸಂಸ್ಥೆಗಳು ಪ್ರಶಿಸ್ತಿ ನೀಡಿ ಗೌರವಿಸಿವೆ. ಪರಿಸರ ಮಿತ್ರ, ಪರಿಸರ ರಕ್ಷಕ ಸೇರಿ ಸುಮಾರು 50ಕ್ಕೂ ಹೆಚ್ಚು ಪ್ರಶಸ್ತಿಗಳನ್ನ ನೀಡಲಾಗಿದೆ. ಇನ್ನು ಇತ್ತೀಚೆಗಷ್ಟೇ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾನ ಭಾರತಿ ವತಿಯಿಂದ 10 ಸಾವಿರ ನಗದು ನೀಡಿ ಸನ್ಮಾನಿಸಲಾಗಿದೆ.

ಇದು ನಮ್ಮ ಸುತ್ತಲಿನ ಪರಿಸರದ ಬಗ್ಗೆ ತೋರಿಸುವ ಕಾಳಜಿ. ಬರೀ ಭಾಷಣ, ಸೋಷಿಯಲ್ ಮೀಡಿಯಾದಲ್ಲಿ ಬೇರೆಯವರಿಗೆ ಬುದ್ಧಿವಾದ ಹೇಳುವ ಬದ್ಲು, ನಾವೆಲ್ಲ ನಮ್ಮ ಬದುಕಿನ ನಿತ್ಯ ಕ್ರಿಯೆಗಳಲ್ಲಿ ಅದನ್ನು ಅಳವಡಿಸಿಕೊಳ್ಳೋಣ. ಜಯಂತ್ ಬಾಂಬುಲೆ ಅವರ ರೀತಿ ನಾವೆಲ್ಲ ನಿಜವಾದ ಪರಿಸರ ಪ್ರೇಮವನ್ನ ಬೆಳಸಿಕೊಳ್ಳೋಣ.


TAG


Leave a Reply

Your email address will not be published. Required fields are marked *

error: Content is protected !!