ಸಮಾನತೆಯ ಈದುಲ್ ಫಿತ್ರ್…

424

ಬೆಂಗಳೂರಿನಲ್ಲಿ ವಾಸಿಸ್ತಿರುವ ಕೊಪ್ಪಳ ಮೂಲದ ಶಬ್ಬೀರ್ ಎಂ.ಸೂಡಿ ಅವರು ರಂಜಾನ್ ನಿಮಿತ್ತ ಬರೆದ ವಿಶೇಷ ಲೇಖನ ಪ್ರಜಾಸ್ತ್ರದಲ್ಲಿ…

ಇಂದು ದೇಶದಾದ್ಯಂತ ರಂಜಾನ್ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದೆ. ಜೂನ್ 5 ಹಾಗೂ 6 ರಂದು ಈದುಲ್ ಫಿತ್ರ್ ಆಚರಿಸಲಿದ್ದಾರೆ ಮುಸ್ಲಿಂ ಬಾಂಧವರು. ಒಂದು ತಿಂಗಳ ಕಾಲ ಉಪವಾಸ, ಪ್ರಾರ್ಥನೆ, ಅಲ್ಲಾಹುನ ಕುರಿತಾದ ನಾಮಸ್ಮರಣೆ ಮಾಡ್ತಾ ಆತ್ಮಶುದ್ಧಿ ಅನ್ನೋ ಅಧ್ಯಾತ್ಮದಲ್ಲಿ ತೊಡಗಿಸಿಕೊಂಡಿದ್ರು. ಇಂದು ಅದರ ನಿಮಿತ್ತ ಹಬ್ಬವನ್ನ ಆಚರಣೆ ಮಾಡಲಾಗುತ್ತೆ. ಹೀಗಾಗಿ ಬೆಳಗ್ಗೆಯಿಂದಲೇ ಮಸೀದಿ, ಈದ್ಗಾ ಮೈದಾನಗಳಲ್ಲಿ ನಾಮಾಜ್ ಸಲ್ಲಿಸುವ ಕ್ರಿಯೆ ನಡೆಯುತ್ತೆ. ಬಳಿಕ ಒಬ್ಬರಿಗೊಬ್ಬರು ಆಲಂಗಿಸಿಕೊಂಡು ಈದ್ ಮುಬಾರಕ್ ಸಲ್ಲಿಸ್ತಾರೆ.

ಹೀಗೆ ನಮಾಜ್ ಸಲ್ಲಿಸುವಾಗ ಯಾವ ಭೇದಭಾವ ಇರೋದಿಲ್ಲ. ಇಲ್ಲಿ ಎಲ್ಲರೂ ಸಮಾನರು. ಹೀಗಾಗಿ ಮುಸ್ಲಿಂ ಸಹೋದರರು ಒಟ್ಟಾಗಿ ಸೇರಿ ಅಲ್ಲಾಹುನ ಪ್ರಾರ್ಥನೆ ಮಾಡ್ತಾರೆ. ಇದಕ್ಕೂ ಮೊದ್ಲು ತಕ್ಬೀರ್ ಮೊಳಗುತ್ತೆ. ಅಂದ್ರೆ, ಅಲ್ಲಾಹು ಅಕ್ಬರ್ ಅನ್ನೋದು. ಹೀಗೆಂದ್ರೆ ದೇವರು ದೊಡ್ಡವನು ಅಂತಾ ಹೇಳೋದು. ಬಳಿಕ ನಮಾಜ್ ಮಾಡಲಾಗುತ್ತೆ. ಇದಾದ್ಮೇಲೆ ಖುತ್ಬಾ ನಡೆಯುತ್ತೆ. ಅಂದ್ರೆ, ಧಾರ್ಮಿಕ ಮುಖಂಡರು ಪ್ರವಚನ ನೀಡ್ತಾರೆ. ಇದೆಲ್ಲ ಮುಗಿದ ಮೇಲೆ ಒಬ್ಬರಿಗೊಬ್ಬರು ಆಲಿಂಗಿಸಿಕೊಂಡು ಹಬ್ಬದ ಶುಭಾಶಯವನ್ನ ವಿನಿಮಯ ಮಾಡಿಕೊಳ್ತಾರೆ.

ಬಳಿಕ ಕಬರ್ಸ್ತಾನ್ ಕ್ಕೆ ಹೋಗಿ ಹಿರಿಯರ ಸಮಾಧಿಗೆ ಪೂಜೆ ಮಾಡಿಕೊಂಡು ಬರುವುದು. ಈ ವೇಳೆ ಹೂವುಗಳನ್ನ, ಊದಿನ ಕಡ್ಡಿ, ಸಕ್ಕರೆಯನ್ನ ತೆಗೆದುಕೊಂಡು ಹೋಗಿ ಅರ್ಪಿಸ್ತಾರೆ. ಈ ಪ್ರಕ್ರಿಯೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ನಡೆದುಕೊಂಡು ಬರುತ್ತಿದೆ.

ಪ್ರಾರ್ಥನೆ ಮುಗಿದ್ಮೇಲೆ, ತಮ್ಮ ಕೈಲಾದ ಸಹಾಯವನ್ನ ಇತರರಿಗೆ ಮಾಡ್ತಾರೆ. ದಾನದ ರೂಪದಲ್ಲಿ ದವಸ ಧಾನ್ಯಗಳನ್ನ, ಬಟ್ಟೆ ಬರೆಗಳನ್ನ, ಹಣವನ್ನ ನೀಡ್ತಾರೆ. ಬಡವರಿಗೆ ಕೈಲಾದ ಸಹಾಯ ಮಾಡಬೇಕು ಅಂತಾ ಇಸ್ಲಾಂ ಆದೇಶಿಸಿದೆ. ಹೀಗಾಗಿ ಇದೊಂದು ಕಡ್ಡಾಯ ದಾನವಾಗಿದೆ. ಇದನ್ನ ಫಿತ್ರ್ ಝಕಾತ್ ಎಂದು ಕರೆಯಲಾಗುತ್ತೆ. ಹೀಗಾಗಿ ಕೆಲವರು ಇದಕ್ಕಾಗಿ ವರ್ಷಪೂರ್ತಿ ಸ್ವಲ್ಪ ಸ್ವಲ್ಪ ಹಣವನ್ನ, ದವಸ ಧಾನ್ಯಗಳನ್ನ ಸಂಗ್ರಹಣೆ ಮಾಡಿಕೊಂಡು ಬಂದಿರ್ತಾರೆ. ಇದನ್ನ ಬಡವರಿಗೆ ಕೊಡುವ ಮೂಲಕ, ಎಲ್ಲರೊಂದಿಗೆ ಹಂಚಿಕೊಂಡು ತಿನ್ನುವುದಾಗಿದೆ. ನಾನು, ನನ್ನದು ಅನ್ನೋ ಸ್ವಾರ್ಥವಿಲ್ಲದೆ, ಇರೋದ್ರದಲ್ಲಿ ಒಂದಿಷ್ಟು ಬೇರೆಯವರಿಗೆ ಕೊಟ್ಟು ಖುಷಿ ಪಡುವುದಾಗಿದೆ. ಹೀಗಾಗಿ ರಂಜಾನ್ ಅನ್ನೋದು ಸಮಾನತೆಯ ಸಂಕೇತವಾಗಿದೆ.

ಈ ಹಬ್ಬದ ಹಿಂದಿರುವ ಉದ್ದೇಶ, ಸಂಬಂಧವನ್ನ ಗಟ್ಟಿಗೊಳಿಸುವುದು. ಒಬ್ಬರನೊಬ್ಬರು ಪ್ರೀತಿಸುವುದು. ಹೆತ್ತವರು, ಸಂಬಂಧಿಕರು, ಸ್ನೇಹಿತರನ್ನ ಆತ್ಮೀಯವಾಗಿ ಕಾಣುವುದಾಗಿದೆ. ಹೀಗಾಗಿ ಇಂದು ಮನೆಗಳಿಗೆ ಬಂಧುಗಳನ್ನ, ಸ್ನೇಹಿತರನ್ನ ಕರೆದು ಊಟ ಮಾಡಿಸ್ತಾರೆ. ಇದರಲ್ಲಿ ‘ಸುರಕುಂಬ’ ವಿಶೇಷ. ಕೀರ, ಪಾಯಸ ಅಂತಾನೂ ಕರೆಯುತ್ತಾರೆ. ಹಾಲು, ತುಪ್ಪ, ಗೊಡಂಬಿ, ಒಣದಾಕ್ಷಿ, ಏಲಕ್ಕಿ, ಕೊಬ್ಬರಿ, ಶಾವಗಿ ಸೇರಿದಂತೆ ನಾನಾ ಪದಾರ್ಥಗಳನ್ನ ಹಾಕಿ ಮಾಡಿದ ಸಿಹಿ ತಿನಿಸು ಮೊದಲು ನೀಡ್ತಾರೆ. ನಂತರ ಊಟದ ವ್ಯವಸ್ಥೆ ಮಾಡಲಾಗುತ್ತೆ. ಇದರಲ್ಲಿ ಬಿರಿಯಾನಿ ಸ್ಪೆಷಲ್ ಆಗಿರ್ತಾರೆ. ಇದು ರಂಜಾನ್ ಹಬ್ಬದ ಹಿಂದಿರುವ ಉದ್ದೇಶ ಮತ್ತು ವಿಶೇಷತೆ.




Leave a Reply

Your email address will not be published. Required fields are marked *

error: Content is protected !!