ಸ್ತ್ರೀ ಅಂದರೆ ಅಷ್ಟೆ ಸಾಕೇ…

767

ಮೊದಲಿಗೆ ಎಲ್ಲರಿಗೂ ವಿಶ್ವ ಮಹಿಳಾ ದಿನಚಾರಣೆ ಶುಭಾಶಯಗಳು… ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಅನ್ನೋ ಮಾತು ನೂರಕ್ಕೆ ನೂರರಷ್ಟು ಸತ್ಯ. ಇವತ್ತು ಪ್ರತಿಯೊಂದು ಕ್ಷೇತ್ರದಲ್ಲಿ ಹೆಣ್ಮಕ್ಕಳು ದಾಪುಗಾಲು ಇಡುವ ಮೂಲಕ, ತಾವು ಯಾರಿಗೂ ಕಡಿಮೆಯಿಲ್ಲ ಅಂತಿದ್ದಾರೆ. ಅಂತವರಿಗೆ ಮಾರ್ಚ್ 8 ಅರ್ಪಣೆಯ ದಿನ. ಓದು ಬರಹ ಗೊತ್ತಿರುವ, ಉದ್ಯೋಗಸ್ಥ ಮಹಿಳೆಯರಿಗೆ ಇದು ಗೊತ್ತು. ಆದ್ರೆ, ಶಾಲೆ ಮುಖ ನೋಡದೆ ಇರುವ ಅದೆಷ್ಟೋ ಸ್ತ್ರೀಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಬಗ್ಗೆ ಗೊತ್ತಿಲ್ಲ.

ಹೊಲದಲ್ಲಿ ಬೆವರು ಸುರಿಸಿ ದುಡಿಯುವ, ಬಿಸಿಲಲ್ಲಿ ಹಣ್ಣು, ತರಕಾರಿ, ಹೂ ಮಾರುವ, ಮನೆಗೆಲಸ ಮಾಡುವ, ಹೋಟೆಲ್ ಗಳಲ್ಲಿ ಶ್ರಮಪಡುವ, ಸಣ್ಣಪುಟ್ಟ ಅಂಗಡಿಗಳಿಂದ ಐಟಿಬಿಟಿ ಕಂಪನಿಯಲ್ಲಿ ಕಸ ಗುಡಿಸೋ ಮಹಿಳೆಯರು ಸೇರಿ ಬಹುತೇಕ ಹೆಣ್ಮಕ್ಕಳಿಗೆ ಈ ದಿನ ಗೊತ್ತಿಲ್ಲ. ಅದರಲ್ಲಿ ಪೌರ ಕಾರ್ಮಿಕ ಮಹಿಳೆಯರು ಸಹ ಸೇರಿದ್ದಾರೆ. ಹಳ್ಳಿಯಿಂದ ಹಿಡಿದು ದಿಲ್ಲಿಯ ತನಕ ಮಹಿಳಾ ಪೌರ ಕಾರ್ಮಿಕರ ಪಾತ್ರ ಬಹುದೊಡ್ಡದಿದೆ. ಅಂತವರ ಕುರಿತು ಈ ವಿಶೇಷ ಲೇಖನ.

ವಿಜಯಪುರ ಜಿಲ್ಲೆಯಲ್ಲಿ ಸಿಂದಗಿ ಪುಟ್ಟಣ ದೊಡ್ಡದು. ತನ್ನದೆಯಾದ ವೈಶಿಷ್ಟತೆಯಿಂದ ಗುರುತಿಸಿಕೊಂಡಿದೆ. ಇಂಥಾ ಪಟ್ಟಣವನ್ನ ಸ್ವಚ್ಛವಾಗಿಡುವಲ್ಲಿ ಪುರಸಭೆಯ ಪೌರಕಾರ್ಮಿಕರ ಶ್ರಮವಿದೆ. ಅದರಲ್ಲೂ ಮಹಿಳಾ ಕಾರ್ಮಿಕರ ಪಾಲು ದೊಡ್ಡದು. ಸುಮಾರು 70 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವುದು ಶ್ರಮದ ಕೆಲಸ. ಮನೆ, ಮಕ್ಕಳು, ಸಂಸ್ಕಾರದ ನೊಗ ಹೊತ್ತ ಹೆಣ್ಮಕ್ಕಳು ಪಟ್ಟಣದ ಸ್ವಚ್ಛತೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇದರಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಜೀವನದ ಬಂಡಿ ಸಾಗಿಸಲು ಇದೊಂದು ವೃತ್ತಿಯಾದ್ರೂ, ಸಮಾಜದ ಕಣ್ಣಲ್ಲಿ ಇವರನ್ನ ನೋಡುವ ದೃಷ್ಟಿಯೇ ಬೇರೆ ಇರುತ್ತೆ.

ರಸ್ತೆ ಕ್ಲೀನ್ ಮಾಡುವುದ್ರಿಂದ ಹಿಡಿದು, ಚರಂಡಿ, ಕಸದ ತೊಟ್ಟಿ, ಸಾರ್ವಜನಿಕ ಶೌಚಾಲಯ, ಸರ್ಕಾರಿ ಕಚೇರಿಗಳ ಆವರಣದ ಸ್ವಚ್ಛತೆ, ಮನೆ ಮನೆಯ ಕಸ ಸಂಗ್ರಹಿಸುವುದು, ಮೂಕ ಪ್ರಾಣಿಗಳು ಸಾವನ್ನಪ್ಪಿದ್ರೆ ಅವುಗಳ ಸಾಗಾಟ ಸೇರಿದಂತೆ ಪಟ್ಟಣದ ಸ್ವಚ್ಛತೆಗೆ ಸಂಬಂಧಿಸಿದ ಹತ್ತು ಹಲವು ಕೆಲಸಗಳನ್ನ ಸಿಂದಗಿ ಪುರಸಭೆಯ ಮಹಿಳಾ ಪೌರ ಕಾರ್ಮಿಕರು ಮಾಡಿಕೊಂಡು ಬರ್ತಿದ್ದಾರೆ. ಮೂವರು ನೇರ ವೇತನ ಪೌರ ಕಾರ್ಮಿಕರು ಸೇರಿದಂತೆ 22 ಖಾಯಂ ಮಹಿಳಾ ಪೌರ ಕಾರ್ಮಿಕರು ಕೆಲಸ ಮಾಡ್ತಿದ್ದಾರೆ.

ಶಿವಕಾಂತವ್ವ ಡೋಣುರ, ಮಲ್ಲವ್ವ ಹರಿಜನ, ಸಾತವ್ವ ಬಡಿಗೇರ, ಯಲ್ಲವ್ವ ಎಮ್ಮಿ, ಮಲಕವ್ವ ಕೂಚಬಾಳ, ಇಂದಿರಾಬಾಯಿ ಶಂಬೇವಾಡ, ರೇಣುಕಾ ದೊಡಮನಿ, ಸರೋಜಿನಿ ಸುಲ್ಪಿ, ಮಡಿವಾಳವ್ವ ಕೂಚಬಾಳ, ಮರೆವ್ವ ದೊಡಮನಿ, ರೇಣುಕಾಬಾಯಿ ಬಡಿಗೇರ, ರೇಣುಕಾ ಚೌರ, ರಾಜಶ್ರೀ ಮಾಣಸುಣಗಿ, ಸಿದ್ದಮ್ಮ ಹೊಸಮನಿ, ಸೀತವ್ವ ಸುಲ್ಪಿ, ಸುಗಲಬಾಯಿ ಬಿಸನಾಳ, ಸಂಗಮ್ಮ ಸುಲ್ಪಿ, ಸುಜಾತಾ ಹರಿಜನ, ರೇಣುಕಾ ಹೊಸಮನಿ, ಭಾಗ್ಯಶ್ರೀ ಕಾಂಬಳೆ ಹಾಗೂ ರೇಣುಕಾ ಗೋಲಗೇರಿ. ಇಷ್ಟು ಜನ ಮಹಿಳಾ ಪೌರ ಕಾರ್ಮಿಕರು ಸಿಂದಗಿ ಪಟ್ಟಣದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮನೆ ಕಸವನ್ನ ಕ್ಲೀನ್ ಮಾಡಲು ಅದೆಷ್ಟೋ ಹೆಣ್ಮಕ್ಕಳು ಛೀ ಅಂತಾರೆ. ನಾನ್ಯಾಕೆ ಮಾಡ್ಬೇಕು ಎಂದು ಪ್ರಶ್ನೆ ಮಾಡ್ತಾರೆ. ಆದ್ರೆ, ಇವರಿಗೆ ಅದೇ ಬದುಕು. ಸೂರ್ಯ ಉದಯಿಸುವ ಮೊದ್ಲೇ ಎದ್ದು, ಮನೆಗೆಲಸ ಮಾಡಿಕೊಂಡು ಪಟ್ಟಣದ ಸ್ವಚ್ಛತೆಗೆ ಮುಂದಾಗುವ ಇವರು ಅದೆಷ್ಟೋ ಸಾಂಕ್ರಾಮಿಕ ರೋಗಗಳು ಬರದಂತೆ ತಡೆಯುತ್ತಾರೆ. ಪಟ್ಟಣದ ಸುಂದರತೆ ಜೊತೆಗೆ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿಯೂ ಸಹಕಾರಿಯಾಗಿದ್ದಾರೆ. ಬರುವ ಕಡಿಮೆ ಆದಾಯದಲ್ಲಿ ಜೀವನ ನಡೆಸುವ ಇವರಿಗೆ ಕೆಲವು ಸಾರಿ, ಅದೆಷ್ಟೋ ತಿಂಗಳಾದ್ರೂ ಸಂಬಳ ಬರುವುದಿಲ್ಲ. ಅದಕ್ಕಾಗಿ ಅಧಿಕಾರಿಗಳೆದರು ಅಂಗಲಾಚಬೇಕು. ನ್ಯಾಯದಿಂದ ದುಡಿಯುವ ಕೈಗೆ ಸರಿಯಾದ ಸಮಯಕ್ಕೆ ಹಣ ಸಿಗೋದಿಲ್ಲ. ಈ ವ್ಯವಸ್ಥೆ ಬದಲಾಗಬೇಕು.

ಇವರು ನಿತ್ಯ ಬಂದು ಕೆಲಸ ಮಾಡಿದಾಗ್ಲೇ ಊರು ಕೇರಿಗಳು ಅಂದವಾಗಿ ಕಾಣೋದು. ಇಲ್ದೇ ಹೋದ್ರೆ ಎಲ್ಲೆಲ್ಲೂ ಕಸದ ರಾಶಿ, ದುರ್ಗಂಧ ಮೂಗಿಗೆ ರಾಚುತ್ತೆ. ಹೀಗಾಗಿ ಒಂದೂರಿನ ಸೌಂದರ್ಯದ ಹಿಂದೆ ಪೌರ ಕಾರ್ಮಿಕರ ಪಾತ್ರ ಬಹುಮುಖ್ಯವಾಗಿದೆ. ಇಷ್ಟೆಲ್ಲ ವಿಷಯದ ನಡುವೆ ಮತ್ತೊಮ್ಮೆ ಎಲ್ಲ ಹೆಣ್ಮಕ್ಕಳಿಗೆ ‘ಪ್ರಜಾಸ್ತ್ರ’ದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು…




Leave a Reply

Your email address will not be published. Required fields are marked *

error: Content is protected !!