ಮದುವೆ ಜಾಲತಾಣದ ಮೂಲಕ 15 ಮಹಿಳೆಯರಿಗೆ ಮೋಸ

185

ಪ್ರಜಾಸ್ತ್ರ ಸುದ್ದಿ

ಮೈಸೂರು: ವಿವಾಹ ಸಂಬಂಧ ವಧು, ವರರ ಹುಡುಕಾಟದ ಸಲುವಾಗಿ ಹತ್ತು ಹಲವು ಜಾಲತಾಣಗಳಿವೆ. ಈ ಮೂಲಕ ತಮ್ಮ ಇಷ್ಟದ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಮದುವೆಯಾಗಬಹುದು. ಇಂತಹ ವೆಬ್ ಸೈಟ್ ಗಳನ್ನೇ ಕೆಲವರು ಬಂಡವಾಳ ಮಾಡಿಕೊಂಡು ಹಲವರಿಗೆ ಮೋಸ ಮಾಡುತ್ತಿರುವ ಪ್ರಕರಣಗಳು ಹೆಚ್ಚಿವೆ.

ಬೆಂಗಳೂರಿನ ಕಾಳಿದಾಸ ನಗರದ ನಿವಾಸಿ ಕೆ.ಬಿ ಮಹೇಶ್ ಎಂಬಾತ ಮ್ಯಾಟ್ರಿಮೊನಿಯಲ್ ವೆಬ್ ಸೈಟ್ ಮೂಲಕ ಮಹಿಳೆಯರಿಗೆ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಆತನನ್ನು ಮೈಸೂರಿನ ಕುವೆಂಪು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗದ ವಯಸ್ಸಾದ ಮಹಿಳೆಯರು, ವಿಧುವೆಯರು, ಡಿವೋರ್ಸ್ ಆದವರನ್ನು ಪರಿಚಯಿಸಿಕೊಳ್ಳುತ್ತಿದ್ದ. ತಾನು ಡಾಕ್ಟರ್, ಇಂಜಿನಿಯರ್, ಕಾಂಟ್ರ್ಯಾಕ್ಟರ್ ಅಂತೆಲ್ಲ ಸುಳ್ಳು ಹೇಳಿ ಮದುವೆಯಾಗಿ ಬಾಡಿಗೆ ಮನೆಗೆ ಕರೆದುಕೊಂಡು ಹೋಗುತ್ತಿದ್ದ.

ಕೆಲ ದಿನಗಳ ಕಾಲ ಅವರೊಂದಿಗೆ ಇದ್ದು, ಕುಂಟು ನೆಪ ಹೇಳಿ ಹಣ ಪಡೆಯಲು ಮುಂದಾಗುತ್ತಿದ್ದ. ಇದೇ ರೀತಿ ಬೆಂಗಳೂರಿನ ಹೇಮಲತಾ ಎಂಬುವವರನ್ನು ಡಾಕ್ಟರ್ ಎಂದು ಪರಿಚಯಿಸಿಕೊಂಡು ಜನವರಿ 23, 2023ರಲ್ಲಿ ವಿಶಾಖಪಟ್ಟಣದ ಹೋಟೆಲ್ ವೊಂದರಲ್ಲಿ ಮದುವೆಯಾಗಿದ್ದ. ನಂತರ ಮೈಸೂರಿನ ತನ್ನ ಬಾಡಿಗೆ ಮನೆಗೆ ಕರೆದುಕೊಂಡು ಬಂದಿದ್ದ. ಕೆಲ ದಿನಗಳ ಬಳಿಕ ಆಸ್ಪತ್ರೆ ತೆರೆಯಲು 70 ಲಕ್ಷ ರೂಪಾಯಿ ಸಾಲ ಪಡೆದು ಕೊಡುವಂತೆ ಕಿರುಕುಳ ನೀಡಿದ್ದ. ಕೊಲೆ ಬೆದರಿಕೆ ಸಹ ಹಾಕಿದ್ದನಂತೆ. ಹೀಗಿರುವಾಗಿ ಫೆಬ್ರವರಿ 5ರಂದು ಮನೆಯಲ್ಲಿದ್ದ 15 ಲಕ್ಷ ರೂಪಾಯಿ, 200 ಗ್ರಾಂನಷ್ಟು ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ.

ಒಂದು ದಿನ ದಿವ್ಯಾ ಎಂಬುವರು ಮಹೇಶ್ ಮನೆಗೆ ಬಂದಿದ್ದಾರೆ. ತನ್ನನ್ನು ಮದುವೆಯಾಗುವುದಾಗಿ ಹೇಳಿದ್ದ ಎಂದು ತಿಳಿಸಿದ್ದಾರೆ. ಆಗ ಹೇಮಲತಾಗೆ ತಾನು ಮೋಸ ಹೋಗಿರುವುದಾಗಿ ತಿಳಿದು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಐಪಿಸಿ ಸೆಕ್ಷನ್ 420, 406, 506 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದರು. ವಂಚಕ ಮಹೇಶನನ್ನು ತುಮಕೂರಿನ ಮಹರ್ಷಿ ವಾಲ್ಮೀಕಿ ಸರ್ಕಲ್ ಹತ್ತಿರ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!