ಬದುಕಿಗೆ ಬದ್ಧತೆ ಇರಬೇಕು: ಡಾ.ಸಂಗಮನಾಥ ಲೋಕಾಪೂರ

288

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಜೀವನದಲ್ಲಿ ನಾವು ಏನಾದರೂ ಸಾಧಿಸಬೇಕು ಅಂದರೆ ಬದ್ಧತೆ ಇರಬೇಕು. ಅದಿಲ್ಲದೆ ಹೋದರೆ ಇತರರಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳಲು ಅಥವ ಹೊಸತನ ಸಾಧಿಸಲು ಸಾಧ್ಯವಿಲ್ಲ ಎಂದು ಪ್ರಾಧ್ಯಾಪಕ, ಸಾಹಿತಿ ಡಾ.ಸಂಗಮನಾಥ ಲೋಕಾಪೂರ ಹೇಳಿದರು.

ಡಾ.ಸಂಗಮನಾಥ ಲೋಕಾಪೂರ ಅವರು ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತಿಗೊಂಡ ಹಿನ್ನಲೆಯಲ್ಲಿ ಅವರ ಶಿಷ್ಯ ಬಳಗ, ಕಾನಿಪ ತಾಲೂಕು ಘಟಕ, ರೇ.ಚ ರೇವಡಿಗಾರ ಹಾಗೂ ಸಂಗಮೇಶ್ವರ ವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಅಭಿನಂದನಾ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ನನ್ನ ಶಿಕ್ಷಕ ವೃತ್ತಿ ಬದುಕನ್ನು ಸಿಂದಗಿಯಲ್ಲಿ ಕಟ್ಟಿಕೊಂಡೆ. ನಂತರ ಬೇರೆ ಬೇರೆ ಕಡೆ ಸಂಚರಿಸಿ ಮರಳಿ ಇಲ್ಲಿಗೆ ಬಂದೆ. ನನ್ನ ಓದು, ಅಧ್ಯಯನ, ಸಾಹಿತ್ಯ ಕೃಷಿಗೆ ಸಾಕಷ್ಟು ಜನರು ನೀರೈರೆದು ಪೋಷಿಸಿದರು. ಅದರ ಫಲವಾಗಿ ನಾನೊಬ್ಬ ಸಾಹಿತಿಯಾಗಿಯೂ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಕಂಡಿದ್ದು, ಉಂಡಿದ್ದು, ಅನುಭವಿಸಿದ್ದನ್ನೇ ಕಥೆ, ಕವನ ಆಗಿಸುವುದು ಲೇಖಕನ ಸೃಜನಶೀಲತೆ. ಅಂತಹ ಸೃಜನಶೀಲತೆ ನನ್ನಲ್ಲಿ ಸದಾ ಹರಿಯುವಂತೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದರು.

ಸ್ಪೂರ್ತಿದಾಯಕ ಭಾಷಣಕಾರರಾದ ರಂಗನಾಥ ತೋರ್ಪೆ, ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶಾಂತೂ ಹಿರೇಮಠ ಅವರು ಲೋಕಾಪೂರ ಅವರೊಂದಗಿನ ಒಡನಾಟದ ದಿನಗಳ ನೆನಪಿನ ಬುತ್ತಿ ಬಿಚ್ಚಿದರು. ನಿವೃತ್ತಿ ಬದುಕು ಸುಂದರವಾಗಿರಲಿ ಎಂದು ಹಾರೈಸಿದರು. ಸಂಗಮೇಶ್ವರ ಶಾಲೆಯ ಮುಖ್ಯಸ್ಥ ಬಿ.ವಿ ಬಡಗೇರ ಉಪಸ್ಥಿತರಿದ್ದರು. ರಾಗರಂಜನಿ ಸಂಗೀತ ಅಕಾಡಮಿಯ ಮುಖ್ಯಸ್ಥ ಪ್ರಕಾಶ ಮೂಡಲಗಿ ಸ್ವಾಗತ ಗೀತೆ ಹಾಡಿದರು. ಕಾನಿಪ ಅಧ್ಯಕ್ಷ ಆನಂದ ಶಾಬಾದಿ ಸ್ವಾಗತಿಸಿದರು. ಯುವ ಬರಹಗಾರ ಅಶೋಕ ಬಿರಾದಾರ ನಿರೂಪಿಸಿ ವಂದಿಸಿದರು.

ಈ ವೇಳೆ ಪತ್ರಕರ್ತರಾದ ರವಿ ಮಲ್ಲೇದ, ಸಿದ್ಧಲಿಂಗ ಕಿಣಗಿ, ಮಹಾಂತೇಶ ನೂಲನವರ, ಸುದರ್ಶನ ಜಿಂಗಾಣಿ, ಪುಟ್ಟು ದೇಸಾಯಿ, ಗುರು ಮಠ, ಶಿವಾನಂದ ಆಲಮೇಲ, ನಾಗೇಶ ತಳವಾರ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!