ಅಥಣಿ ಹೈನುಗಾರರ ಗೋಳು ಕೇಳೋದ್ಯಾರು ಸ್ವಾಮಿ?

585

ವಿಶೇಷ ವರದಿ: ಶಿವಾನಂದ ಪೂಜಾರಿ

ಅಥಣಿ: ಬೆಳಗಾವಿ ಜಿಲ್ಲೆ ಅಥಣಿ ತಾಲೂಕು, ಅತಿ ಹೆಚ್ಚು ಎಮ್ಮೆ ಹಾಲು ಉತ್ಪಾದನೆಯಾಗುವ ತಾಲೂಕು ಆಗಿದೆ. ಇಲ್ಲಿನ ಬಹುತೇಕ ರೈತರು ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿನಿತ್ಯ ಸುಮಾರು 1.30 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಇವುಗಳಲ್ಲಿ ಶೇಕಡ 60 ರಿಂದ 70 ರಷ್ಟು ಹಾಲು ಪಕ್ಕದ ಮಹಾರಾಷ್ಟ್ರ, ವಿಜಯಪುರ, ಬಾಗಲಕೋಟೆಗೆ ರಫ್ತಾಗುತ್ತೆ.

ಹೈನುಗಾರಿಕೆಯಲ್ಲಿ ಇಷ್ಟೊಂದು ತೊಡಗಿಸಿಕೊಂಡಿರುವ ತಾಲೂಕಿನ ರೈತರಿಗೆ ಇದೀಗ ಲಾಕ್ ಡೌನ್ ಬಿಸಿ ತಟ್ಟಿದೆ. ಕರೋನಾ ಲಾಕ್ ಡೌನ್ ನಿಂದಾಗಿ, ರೈತರು ಕಂಗಾಲಾಗಿದ್ದಾರೆ. ಅದರಲ್ಲೂ ನೆರೆಯ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗಿವೆ. ಪಕ್ಕದ ವಿಜಯಪುರ ಹಾಗೂ ಬಾಗಲಕೋಟೆಯಲ್ಲಿಯೂ ನಿರ್ಬಂಧ ಕಠಿಣವಾಗಿದೆ. ಹೀಗಾಗಿ ಹಾಲು ಸಾಗಾಟ ಮಾಡಲು ಆಗದೆ ಮುಂದೇನು ಅನ್ನೋ ಚಿಂತೆಯಲ್ಲಿದ್ದಾರೆ.

ಲಾಕ್ ಡೌನ್ ನಿಂದ ವಾಹನ ಸಂಚಾರ ಸ್ಥಗಿತವಾಗಿರುವದರಿಂದ ರೈತರಿಂದ ಹಾಲು ಖರೀದಿಸಿ ಸಂಗ್ರಹಿಸಲು ಹಿಂದೇಟು ಹಾಕುತ್ತಿರುವುದಂತು ಸತ್ಯ. ಇದು ನಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಸಂಬಂಧಿಸಿದವರ ಜೊತೆ ಚರ್ಚಿಸಿ ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುವುದು.

ಅಪ್ಪಾಸಾಬ ಅವತಾಡೆ, ಕೆಎಂಎಫ್ ಸದಸ್ಯ, ಅಥಣಿ

ತಾಲೂಕಿನಲ್ಲಿ ಕೃಷ್ಣಾ ನದಿ ಹರಿದಿರುವ ಕಾರಣ ನೀರಿನ ಸಮಸ್ಯೆಯಿಲ್ಲ. ಜಾನುವಾರುಗಳಿಗೂ ನೀರಿನ ಅಭಾವ ಇಲ್ಲ. ಹೀಗಾಗಿ ತಾಲೂಕಿನಲ್ಲಿ ಅತಿ ಹೆಚ್ಚು ಎಮ್ಮೆಗಳನ್ನ ನದಿ ತೀರದ ಜನರು ಹೆಚ್ಚು ಸಾಕುತ್ತಿದ್ದಾರೆ. ಇದ್ರಿಂದಾಗಿ ನಿತ್ಯ 1.30 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತೆ. ಈ ಹಾಲು ಸಾಗಾಟಕ್ಕೆ ತೊಂದರೆ ಎದುರಾಗಿದೆ. ಸಂಬಂಧಪಟ್ಟ ಇಲಾಖೆಯವರು ಸಹಕಾರ ನೀಡುತ್ತಿಲ್ಲವೆಂದು ರೈತರು ತಮ್ಮ ಅಳಲನ್ನ ತೋಡಿಕೊಳ್ತಿದ್ದಾರೆ.

ರೈತರಿಂದ ಹಾಲು ಖರೀದಿಸುವವರು ಇಲ್ಲವಾದ ಕಾರಣ ಹೈನುಗಾರಿಕೆಯನ್ನೆ ಅವಲಂಬಿಸಿದ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ. ರೈತರ ಸಂಕಷ್ಟಕ್ಕೆ ಸರಕಾರ ಸ್ಪಂದಿಸಬೇಕು.


ಮಲ್ಲಪ್ಪ ಶೇಗುಣಸಿ, ಹಾಲು ಖರೀದಿರಾರು

ಒಟ್ಟಿನಲ್ಲಿ ಲಾಕ್ ಡೌನ್ ನಿಂದಾಗಿ ತಾಲೂಕು ಹಾಲು ಉತ್ಪಾದಕರು ಕಂಗಾಲಾಗಿದ್ದಾರೆ. ಹಾಲು ಅಗತ್ಯ ವಸ್ತುಗಳಲ್ಲಿ ಒಂದಾಗಿದೆ ಎಂದು ಸರ್ಕಾರ ಹಾಲಿನ ಸಾಗಾಟಕ್ಕೆ ವಿನಾಯಿತಿ ನೀಡಿದ್ರೂ, ತೊಂದರೆ ಅನುಭವಿಸುವಂತಾಗಿದೆ. ರೈತರ, ಗೌಳಿಗರ ಹಿತ ಯಾರು ಕಾಪಾಡುವವರು ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಶ್ರೀಶೈಲ, ಮಲ್ಲು, ಸಚ್ಚಿನ, ರಹೀಮ, ನವೀನ, ಬಂಡು ಹೇಳ್ತಿದ್ದಾರೆ. ಈಗ್ಲಾದ್ರೂ ಸಂಬಂಧಪಟ್ಟವರು ಇದಕ್ಕೆ ಸ್ಪಂದಿಸಬೇಕಿದೆ.




Leave a Reply

Your email address will not be published. Required fields are marked *

error: Content is protected !!