ಕೋಮುವಾದಿ ಔರಂಗಜೇಬ್ ಆದರ್ಶನಾಗಲು ಸಾಧ್ಯವಿಲ್ಲ

267

ಪ್ರಜಾಸ್ತ್ರ ಡೆಸ್ಕ್

ಮಲೆನಾಡಿನಲ್ಲಿ ಅದೆಂಥಾ ಮಹಾನ್ ಪುರುಷರು ಜನಿಸಿ, ಕೋಮುಸೌಹಾರ್ದತೆಯ ಬದುಕನ್ನು ಹಂಚಿ ಹೋಗಿದ್ದಾರೆ. ಆದರೆ, ಕಳೆದ ಹಲವು ವರ್ಷಗಳಿಂದ ಕೋಮುಸಂಘರ್ಷದ ಕೇಂದ್ರವಾಗಿ ಗುರುತಿಸಿಕೊಳ್ಳುತ್ತಿದೆ. ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಕೋಮುವಾದಿ ಔರಂಗಜೇಬನ ಕಟೌಟ್ ನಿಲ್ಲಿಸಿದ್ದು ಹೊಸ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.

ಔರಂಗಜೇಬ್ ಅದೆಷ್ಟು ಕ್ರೂರಿಯಾಗಿದ್ದ, ಧರ್ಮದ ಅಮಲಿನಲ್ಲಿದ್ದ ಎಂದು ಇತಿಹಾಸದ ಪುಟಗಳನ್ನು ಅಧ್ಯಯನ ಮಾಡಿದವರಿಗೆ ಖಂಡಿತ ಗೊತ್ತು. ಹೀಗಿರುವಾಗ ಈದ್ ಮಿಲಾದ್ ಹಬ್ಬಕ್ಕೆ ಬಹುತ್ವದ ವಿರೋಧಿ ಔರಂಗಜೇಬ್ ಹೆಸರಿನಲ್ಲಿ ಕಟೌಟ್, ಬ್ಯಾನರ್ ಹಾಕಿ ಅಖಂಡ ಭಾರತ ಸಾಮ್ರಾಜ್ಯ ಕಟ್ಟಿದ ಮಹಾನ್ ದೊರೆ ಔರಂಗಜೇಬ್ ಎಂದು ಬರೆದಿರುವುದು ನೋಡಿದರೆ ಇವರ ತಲೆ ಎಷ್ಟೊಂದು ಖಾಲಿ ಇದೆ. ಅದರಲ್ಲಿ ಎಷ್ಟೊಂದು ವಿಷ ತುಂಬಲಾಗುತ್ತಿದೆ ಎನ್ನುವುದಕ್ಕೆ ಶಿವಮೊಗ್ಗದ ಘಟನೆ ಸಾಕ್ಷಿಯಾಗಿದೆ.

ಹಿಂದೂ ಧರ್ಮದ ಹೆಸರಿನಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುವ ಸಂಚಿಗೆ ಔರಂಗಜೇಬ್ ಖಂಡಿತ ಪರ್ಯಾಯನಲ್ಲ. ಸಮಾಜದ ಹೆಸರಿನಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರ. ಜಾತ್ಯಾತೀತ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಇರುವ ಯಾರೇ ಆದರೂ ಇದನ್ನು ಖಂಡಿಸಲೇಬೇಕು. ಬಹುಮುಖ್ಯವಾಗಿ ಮುಸ್ಲಿಂ ಸಮಾಜದ ಧಾರ್ಮಿಕ, ರಾಜಕೀಯ ನಾಯಕರು ಹಾಗೂ ಚಿಂತಕರು ಇದರ ವಿರುದ್ಧ ಧ್ವನಿ ಎತ್ತಬೇಕು. ಒಂದು ವೇಳೆ ಈಗ ಮೌನ ವಹಿಸಿದರೆ ಸಮಸಮಾಜಕ್ಕೆ ಕೊಳ್ಳಿ ಇಟ್ಟಂತೆ.

ಇನ್ನು ಇಂತಹ ವಿಚಾರಗಳಲ್ಲಿ ಸರ್ಕಾರ ಸಹ ಮೃದು ದೋರಣೆ ತೋರಿಸದೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಒಂದು ಜಾತಿ, ಧರ್ಮದ ಓಲೈಕೆ ಯಾವತ್ತಿದ್ದರೂ ಅಪಾಯವೇ. ಅದು ಎಲ್ಲರನ್ನು ಸುಡುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದರ ವಿರುದ್ಧ ಸೂಕ್ತ ತನಿಖೆಗೆ ಆಗ್ರಹಿಸಬೇಕು. ಗೃಹ ಸಚಿವ ಜಿ.ಪರಮೇಶ್ವರ್ ಅವರು ಹರಕೆ ಉತ್ತರ ನೀಡದೆ ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವತಂತ್ರ ನೀಡಿ, ಮತೀಯ ವ್ಯಸನಿಗಳ ವಿರುದ್ಧ ಕಠಿಣ ಕಾನೂನು ಅಸ್ತ್ರ ಪ್ರಯೋಗಿಸಲು ಸೂಚಿಸಬೇಕು. ಶಿಶುನಾಳ ಶರೀಫರು, ಸೂಫಿ ಸಂತರು ಆದರ್ಶವಾಗಬೇಕೇ ಹೊರತು ಧರ್ಮಾಂಧ ಔರಂಗಜೇಬ್ ನಲ್ಲ.




Leave a Reply

Your email address will not be published. Required fields are marked *

error: Content is protected !!