ಕವಿಗೆ ಪರಿಶ್ರಮ ಮುಖ್ಯ: ಬಿ.ಆರ್ ಲಕ್ಷ್ಮಣರಾವ್

502

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಬೆಂಗಳೂರು: ಸ್ವಜನ್ಯ ಕಲಾವೇದಿಕೆ, ಯುವಚೇತನ ಹಾಗೂ ಶಾಲ್ಮಲ ಪ್ರಕಾಶನದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಬರಹಗಾರ ಶಿಶಿರ (ಎಸ್.ಶಿಶಿರಂಜನ್) ಅವರ ‘ಋಣ ಸಂದಾಯವಾಗಲಿ ಒಂದಿಷ್ಟು’ ಹಾಗೂ ‘ಸಂವೇದನೆ’ ಕವನ ಸಂಕಲನಗಳನ್ನು, ಖ್ಯಾತ ಕವಿ ಬಿ.ಆರ್ ಲಕ್ಷ್ಮಣರಾವ್ ಬಿಡುಗಡೆಗೊಳಿಸಿದರು.

ಮಲ್ಲೇಶ್ವರದ ಶುಕ್ರ ಆಡಿಟೋರಿಯಂನಲ್ಲಿ ಆಗಸ್ಟ್ 13ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃತಿಗಳು ಲೋಕಾರ್ಪಣೆಗೊಂಡವು. ಈ ವೇಳೆ ಮಾತನಾಡಿದ ಅವರು, ಕವಿಗೆ ಪ್ರತಿಭೆ ಹಾಗೂ ಪರಿಶ್ರಮ ಬೇಕು. ಶಿಶಿರ ಅವರಲ್ಲಿ ಆ ಪ್ರತಿಭೆ ಇರುವ ಕಾರಣದಿಂದಲೇ ಅವರ ಕವನ ಸಂಕಲನಗಳು ಮರುಮುದ್ರಣ ಕಂಡಿವೆ. ಪ್ರಸ್ತುತ ಕವನ ಸಂಕಲನಗಳಲ್ಲಿ ಪ್ರಬುದ್ಧ, ಪರಮಾತ್ಮ, ತಲೆದಂಡ, ಕಂದ ಬಂದನು ಸೇರಿದಂತೆ ಬಹಳಷ್ಟು ಉತ್ತಮ ಕವಿತೆಗಳು ಅವರಲ್ಲಿನ ಪ್ರತಿಭೆಗೆ ಸಾಕ್ಷಿಯಾಗಿವೆ. ಅವರ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ ಎಂದರು.

ಪತ್ರಕರ್ತ ಗೌರೀಶ್ ಅಕ್ಕಿ ಮಾತನಾಡಿ, ಕವಿಗಳು ನಮ್ಮ ನಡುವೆ ಇರುವ ಪುಟ್ಟ ಪುಟ್ಟ ದೇವರುಗಳು. ಅವರ ಒಡನಾಟವಿರುವುದೆ ನಮ್ಮ ಪುಣ್ಯ ಎಂದರು. ಕೃತಿಕಾರ ಶಿಶಿರ ಅವರು ಮಾತನಾಡಿ, ಕೆರೆಯ ನೀರನು ಕೆರೆಗೆ ಚೆಲ್ಲಿ ವರ ಪಡೆದವರಂತೆ ಸಮಾಜದಿಂದ ಪಡೆದ ಜ್ಞಾನ, ಅನುಭವ, ದೃಷ್ಟಿಕೋನವನ್ನು ಸಮಾಜದ ಮುಂದಿಟ್ಟು ನಿಮ್ಮ ಪ್ರೀತಿ, ಚಪ್ಪಾಳೆ ಗಿಟ್ಟಿಸುತ್ತವೆ. ನಿಮಗಿಷ್ಟವಾಗುವ ಒಂದಷ್ಟು ಸಾಲುಗಳು ನನ್ನ ಮುಖೇನ ನಿಮಗೆ ತಲುಪಿದರೆ ಅದೇ ನನ್ನ ಸೌಭಾಗ್ಯ ಎಂದರು.

ಇದೇ ವೇಳೆ ರಾಘವೇಂದ್ರ ಉಪಾಧ್ಯಾಯ, ಪ್ರಶಾಂತ್ ಆರಾಧ್ಯ, ಡಾ.ಸವಿತಾ, ಅಶ್ವಿಕ್ ಭಾವಗೀತೆಗಳನ್ನು ಹಾಡಿದರು. ಯುವಚೇತನದ ರೂವಾರಿ ಜಗನ್ನಾಥ್, ಸ್ವಜನ್ಯ ಕಲಾ ವೇದಿಕೆ ಸಂಚಾಲಕ ಶ್ರೇಯಸ್ ಹಾಜರಿದ್ದರು. ಅಭಿಜಿತ್ ನಿರೂಪಿಸಿ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!