ಕೊನೆಗೂ ಆಯ್ಕೆ ಆಗದ ವಿಪಕ್ಷ ನಾಯಕ

243

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲೆಯ 14ನೇ ಬಜೆಟ್ ಮಂಡಿಸುತ್ತಿದ್ದಾರೆ. ಒಟ್ಟು 3.35 ಲಕ್ಷ ಕೋಟಿ ರೂಪಾಯಿಯ ಬಜೆಟ್ ಮಂಡಿಸುತ್ತಿದ್ದಾರೆ. ಆದರೆ, ಬಿಜೆಪಿ ಕೊನೆಗೂ ವಿಪಕ್ಷ ನಾಯಕನ ಆಯ್ಕೆ ಮಾಡುವಲ್ಲಿ ವಿಫಲವಾಗಿದೆ. ಈ ಮೂಲಕ ಕೆಟ್ಟ ಸಂಪ್ರದಾಯಕ್ಕೆ ಬಿಜೆಪಿ ನಾಂದಿ ಹಾಡಿದೆ.

ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿ ಹೈಕಮಾಂಡ್ ಕರ್ನಾಟಕದತ್ತ ಆಸಕ್ತಿ ತೋರಿಸುವುದನ್ನೇ ಬಿಟ್ಟಿದೆ. ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಆದಿಯಾಗಿ ಕೇಂದ್ರ ನಾಯಕರು ಇಲ್ಲಿಯೇ ಬೀಡು ಬಿಟ್ಟವರಂತೆ ಸಭೆ, ಸಮಾರಂಭ, ಪ್ರಚಾರ ಮಾಡುತ್ತಿದ್ದರು. ಆದರೆ, ಚುನಾವಣೆ ಫಲಿತಾಂಶ ಬಳಿಕ ಎಲ್ಲವೂ ಬಂದ್ ಆಗಿದೆ. ಹೀಗಾಗಿ ವಿಪಕ್ಷ ನಾಯಕನ ಆಯ್ಕೆ ಮಾಡಲು ಸಾಧ್ಯವಾಗದೆ ಮುಖಭಂಗ ಎದುರಿಸುತ್ತಿರುವುದು ಸತ್ಯ.

ಬಜೆಟ್ ಅಧಿವೇಶನ ಆರಂಭದಿಂದಲೂ ಶೀಘ್ರದಲ್ಲೇ ಆಗುತ್ತೆ, ಅಧಿವೇಶನ ಪ್ರಾರಂಭಕ್ಕೂ ಮೊದಲು ಆಗುತ್ತೆ ಎಂದಿದ್ದು ಸುಳ್ಳಾಯಿತು. ಅಧಿವೇಶನ ಶುರುವಾದ ನಂತರವೂ ಇದೆ ರೀತಿ ಹೇಳಿಕೊಂಡು ಬಂದು ಇದೀಗ ಸಿಎಂ ಬಜೆಟ್ ಮಂಡಿಸುತ್ತಿದ್ದರೂ ವಿಪಕ್ಷ ನಾಯಕನಿಲ್ಲದೆ ಹೋಗಿರುವುದು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಇದೊಂದು ಕೆಟ್ಟ ದಾಖಲೆ ಎನ್ನಲಾಗುತ್ತಿದೆ.

ಈಗಿರುವ 65 ಬಿಜೆಪಿ ಶಾಸಕರಲ್ಲಿ ಯಾರಿಗೂ ವಿಪಕ್ಷ ನಾಯಕನಾಗುವ ಸಾಮರ್ಥ್ಯ ಇಲ್ಲವೇ ಅನ್ನೋ ದೊಡ್ಡ ಪ್ರಶ್ನೆ ಮೂಡಿದೆ. ಒಟ್ಟಿನಲ್ಲಿ ಹೈಕಮಾಂಡ್ ಅಣತಿಯಂತೆ ನಡೆಯುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ಇದು ತುಂಬಾ ಇರಿಸುಮುರಿಸು, ಅವಮಾನ ಆಗುತ್ತಿರುವುದು ಮಾತ್ರ ಸತ್ಯ.




Leave a Reply

Your email address will not be published. Required fields are marked *

error: Content is protected !!