ಚಪ್ಪಾಳೆಗೂ ಬೆಲೆ ಇದೆ ಕೃತಿಯ ಒಳಧ್ವನಿ..

182

ಕನ್ನಡ ಉಪನ್ಯಾಸಕಿ ಹಾಗೂ ಲೇಖಕಿ ಜಯಲಕ್ಷ್ಮಿ ಕೆ. ಮಡಿಕೇರಿ ಅವರ ಚಪ್ಪಾಳೆಗೂ ಬೆಲೆ ಇದೆ ಮತ್ತು ಇತರೆ ಲೇಖನಗಳು ಎನ್ನುವ ಕುರಿತು ಬರಹಗಾರ ಗೋಪಾಲ ತ್ರಾಸಿ ಅವರು ಬರೆದ ಲೇಖನ ಇಲ್ಲಿದೆ.

ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುಮಾರು 40 ಲೇಖನಗಳುಳ್ಳ ಈ ಕೃತಿಯ ಕರ್ತೆ ಜಯಲಕ್ಷ್ಮಿ ಕೆ.ಮಡಿಕೇರಿ. ಕನ್ನಡ ಉಪನ್ಯಾಸಕಿಯಾಗಿರುವ ಇವರ ಹೆಚ್ಚಿನ ಲೇಖನಗಳ ಹೂರಣ ಶೈಕ್ಷಣಿಕ ಹಿನ್ನೆಲೆಯದ್ದಾಗಿವೆ. ಸಹಜವಾಗಿ, ಯುವ ಪೀಳಿಗೆ, ವಿದ್ಯಾರ್ಥಿಗಳು ಮತ್ತವರ ಪಾಲಕರನ್ನುದ್ಧೇಶಿ ಸಂಬೋಧಿಸುವಂತಹದ್ದು.  

ಶಿಕ್ಷೆ ರಹಿತ ಶಿಕ್ಷಣ–ಎತ್ತ ಸಾಗೀತು ಯುವ ಜನ? ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರಿಗೆ ಶಿಕ್ಷೆ? ಈ ಎರಡು ಲೇಖನಗಳು ಸಧ್ಯ ಹೆಚ್ಚಿನ ಶಾಲಾ ಕಾಲೇಜಿನ ಶಿಕ್ಷಕರು ಒತ್ತಡದಿಂದ ಸಹಿಸುತ್ತಿರುವ,   ಅನುಭವಿಸುತ್ತಿರುವ ಬಹಳ ಗಂಭೀರವಾದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಶಿಕ್ಷೆ ನೀಡುವುದು ಕಾನೂನು ಬಾಹೀರ. ಹಾಗೆಂದು ಮಕ್ಕಳನ್ನು ತಿದ್ದದೇ ಹಾಗೇ ಬೆಳೆಯಬಿಡುವುದೇ ಎಂದು ಕಳವಳಿಸುವ ಲೇಖಕಿ, “ಮಕ್ಕಳನ್ನು ತಿದ್ದುವಲ್ಲಿ ಶಾಲೆಗಳಲ್ಲಿ ಶಿಕ್ಷಕರಿಗೆ ಸ್ವಲ್ಪವಾದರೂ ಸ್ವಾಂತತ್ರ್ಯ ಬೇಕು. ಆದರೆ ಶಿಕ್ಷೆ ನೀಡುವಲ್ಲಿ ಶಿಕ್ಷಕರೂ ಪ್ರಬುದ್ಧರಾಗಿ ವರ್ತಿಸಬೇಕು” ಎಂದು ಕಿವಿಮಾತನ್ನೂ ಹೇಳುವ ಲೇಖಕಿ. ಮಾನ್ಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ‘ಗುರುವಿನ ಒಂದು ಏಟು ವಿದ್ಯಾರ್ಥಿಯ ಜೀವನ ಶೈಲಿಯನ್ನೇ ಬದಲಾಯಿಸಬಲ್ಲದು’ ಈ ಅನುಭವದ ಮಾತನ್ನು ಉದ್ಧರಿಸುತ್ತಾರೆ.

ಒಂದು ದಿನ ಶಾಲೆ ಬಿಟ್ಟೊಡನೆ ಓಡಿ ಬಂದ ಮಗುವನ್ನುದ್ದೇಶಿಸಿ ತಾಯಿಯೊಬ್ಬಳು, ಇವತ್ತು ಟೀಚರ್ ಹೊಡೆದರಾ ಎಂದು ಕೇಳಿದ್ದು ಲೇಖಕಿಯನ್ನು ಅತೀವ ಕಸಿವಿಸಿಗೆ ಒಳಗಾಗಿಸುತ್ತದೆ. ಆ ತಾಯಿ ಮಗುವಿಗೆ ಇಂದೇನು ಕಲಿಸಿದರು ಅಂತ ಕೇಳಬಹುದಿತ್ತಲ್ಲ. ಶಿಕ್ಷೆ ನೀಡುವುದೇ ಶಿಕ್ಷಕರ ಪ್ರಮುಖ ಕಾರ್ಯ ಎಂಬ ಇಂತಹ ಕೆಲವೊಂದು ಪೋಷಕರ ಮನೋಭಾವ ಬದಲಾಗಬೇಕು ಎಂದು ಲೇಖಕಿ ಹೇಳುವುದರಲ್ಲಿ ಸತ್ಯವಿದೆ. ಅಂತೆಯೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರಷ್ಟೇ ಶಿಕ್ಷಕರ ಪಾತ್ರವೂ ಇರುವುದು. ಶಿಕ್ಷಕರು ಅವರಲ್ಲಿರುವ ಸುಪ್ತ ಸೃಜನಶೀಲತೆ, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಎಚ್ಚರಿಸಲು ಮರೆಯುವುದಿಲ್ಲ. ಈ ಹಿನ್ನೆಲೆಯಲ್ಲೇ ‘ಚಪ್ಪಾಳೆಗೂ ಬೆಲೆ ಇದೆ’ ಶೀರ್ಷಿಕೆಯ ಲೇಖನ ಮತ್ತು ಈ ಕೃತಿಯ ಮಹತ್ವ ಇದೆ. ಯಾವುದೇ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರು ಚಪ್ಪಾಳೆ ತಟ್ಟಲು ಉದಾಸೀನತೆ ತೋರಬಾರದು. ಕಲಾವಿದರಿಗೆ ಅದರಲ್ಲೂ ಮಕ್ಕಳಿಗೆ ಚಪ್ಪಾಳೆ ರೂಪದ ಪ್ರೋತ್ಸಾಹ ಅತ್ಯಗತ್ಯ ಎಂಬ ಲೇಖಕಿಯ ಅನುಭವದ ಮಾತು ಸರ್ವವೇದ್ಯವಾದುದು.

ನಮ್ಮ ಸಮಾಜದಲ್ಲಿ ಹಾಸು ಹೊಕ್ಕಾಗಿರುವ ಕೆಲವು ಪ್ರಸಿದ್ಧ ಧಾರ್ಮಿಕ ಹಬ್ಬ, ಆಚರಣೆಗಳಾದ ಅಕ್ಷಯ ತೃತೀಯ, ದೀಪಾವಳಿ, ಮಕರ ಸಂಕ್ರಾಂತಿ, ಪ್ರಾರ್ಥನೆ ಮುಂತಾದವುಗಳ ಕುರಿತಾಗಿ ಚುಟುಕಾದ ಪೌರಾಣಿಕ ಅರ್ಥವಿವರಣೆಯುಳ್ಳ ಲೇಖನಗಳೂ ಇವೆ. ಆದರೆ ಎಲ್ಲೂ ಮೌಢ್ಯ ಪ್ರದರ್ಶನವಾಗದಂತೆ ಲೇಖಕಿ ಎಚ್ಚರ ವಹಿಸಿರುವುದು ಗಮನಾರ್ಹವಾಗಿದೆ. ಸ್ವಾಮಿ ವಿವೇಕಾನಂದ, ಶಿಶುನಾಳ ಶರೀಫ್, ಫಿಲ್ಡ್ ಮಾರ್ಷಲ್ ಕಾರ್ಯಪ್ಪ,  ವಿಶ್ವಮಾನ್ಯ ದಿನ ಮಾರ್ಚ್ 8ರ ಮಹತ್ವ, ಮಕ್ಕಳು ಅಂತಸ್ತಿನ ದ್ಯೋತಕವಲ್ಲ, ಭವಿಷ್ಯದ ಸೊತ್ತು ಮುಂತಾದವು ಪ್ರಬುದ್ಧ ಮೌಲಿಕ ಲೇಖನಗಳು. ಲೇಖಕಿಯ  ಅಭಿರುಚಿ, ಚಿಂತನೆ ಮತ್ತು ಪ್ರೌಢ ಬರವಣಿಗೆಯ ಧ್ಯೋತಕವಾಗಿವೆ.

ಅಲ್ಲಲ್ಲಿ ಪಂಪ, ಡಿವಿಜಿ, ಸರ್ವಜ್ಞ, ಬಸವಣ್ಣ, ಗಾಂಧೀಜಿ, ಎಡಿಸನ್, ಮೌಂಟ್ ಬ್ಯಾಟನ್, ಜಾರ್ಜ್ ಹರ್ಬಟ್ ಮುಂತಾದ ಖ್ಯಾತನಾಮರ ಪ್ರಸಿದ್ಧ ಹೇಳಿಕೆ, ನುಡಿಮುತ್ತುಗಳ ಉದಾಹರಣೆಗಳು ಲವಲವಿಕೆಯ ಓದಿಗೆ ಮತ್ತು ಲೇಖಕನಗಳು  ಶುಷ್ಕವಾಗದಂತೆ ನಿಗಾ ವಹಿಸುತ್ತವೆ. ಇಲ್ಲಿರುವ ಪುಟ್ಟ ಪುಟ್ಟ ಲೇಖನಗಳಲ್ಲಿ ಅನುಭವಜನ್ಯವಾದ ಘಟನೆ, ಸನ್ನಿವೇಶಗಳ ನಿರೂಪಣೆ ಓದಿನ ರುಚಿಯನ್ನು ಹೆಚ್ಚಿಸುತ್ತವೆ. ಈ ಇಡೀ ಕೃತಿಯ ಒಳಧ್ವನಿ ಯುವ ಜನಾಂಗದ ಆ ಮೂಲಕ ಒಟ್ಟು  ಸಮಾಜದ ಸ್ವಾಸ್ಥವನ್ನು ಕಾಪಿಟ್ಟುಕೊಳ್ಳುವ ಕಾಳಜಿಯೇ ಆಗಿದೆ. ಲೇಖಕಿ ಜಯಲಕ್ಷ್ಮಿಯವರಿಗೆ ಅಭಿನಂದನೆಗಳು.




Leave a Reply

Your email address will not be published. Required fields are marked *

error: Content is protected !!