ಬಲಿಯಾಯಿತೇ ಬದುಕು…

466

ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ಹುಟ್ಟೂರು ಬಿಟ್ಟು ಅಲ್ಲಿ-ಇಲ್ಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ವಲಸೆ ಕಾರ್ಮಿಕರ ಇಂದಿನ ಸ್ಥಿತಿ ನಿಜಕ್ಕೂ ಶೋಚನೀಯ. ನಮ್ಮೆಲ್ಲರ ಬದುಕಿನ ಲಯ ತಪ್ಪಿಸಿದ ಕೋರೋನ ಈ ವಲಸೆ ಕಾರ್ಮಿಕರ ಜೀವನವನ್ನು ನರಕಮಯವಾಗಿಸಿದೆ. ಬಡ ಜೀವಗಳನ್ನು ಒಟ್ಟಾಗಿ ಬಲಿ ತೆಗೆದುಕೊಂಡರೂ ಈ ಮಾರಿ ತೃಪ್ತಳಾದ ಹಾಗೆ ಕಾಣಲ್ಲ. ಒಂದೆಡೆ ಹೊಟ್ಟೆಯ ಹಸಿವು, ಇನ್ನೊಂದೆಡೆ ಊರು ಸೇರುವ ತವಕ. ಇವೆರಡರಲ್ಲೇ ಹೊಯ್ದಾಡುತ್ತಿದ್ದ ಅದೆಷ್ಟು ಜೀವಗಳು ಅನ್ಯಾಯವಾಗಿ ಬಲಿಯಾಗಿ ಹೋದವು.

ಎಷ್ಟೋ ದೂರದಿಂದ ಬರುವಾಗಲೇ ಕಂಪನದ ಮೂಲಕ ಸೂಚನೆ ಕೊಡುವ ರೈಲಿನ ಸದ್ದು, ರೈಲಿನ ಹಳಿಯ ಮೇಲೆಯೇ ಮಲಗಿದ್ದ ಆ ಹದಿನಾರು ವಲಸೆ ಕಾರ್ಮಿಕರಿಗೆ ಕೇಳಿಸಿಲ್ಲ ಅಂದರೆ ನಡೆದೇ ದಾರಿ ಕ್ರಮಿಸುತ್ತಿದ್ದ ಆ ದೇಹಗಳಿಗಾಗಿದ್ದ ದಣಿವಾದಾರೂ ಎಷ್ಟಿದ್ದಿರಬಹುದು? ಹಳಿಗಳಲ್ಲೇ ನಡೆದು ಸಾಗಿದರೆ ಊರು ತಲುಪುವುದು ಖಚಿತ ಎಂದೋ, ತಮ್ಮನ್ನು ಪ್ರಶ್ನಿಸಿ ತಡೆಯಲು ಇಲ್ಲಾರೂ ಬರಲಾರರು ಎಂದೋ.. ಒಟ್ಟಿನಲ್ಲಿ ಸಂಕಷ್ಟಗಳನ್ನು ಮೆಟ್ಟಿ ನಡೆದು ತವರ ಸೇರಬಯಸಿದವರನ್ನು ವಿಧಿ ತನ್ನತ್ತ ಸೆಳೆದುಕೊಂಡದ್ದು ನಿಜಕ್ಕೂ ದುಃಖಕರ.

ಹೊಟ್ಟೆಯೊಳಗೆ ಹಸಿವಿನ ಕಾವು ಮನದೊಳಗೆ ನಾಳಿನ ಬಾಳು ಹೇಗೆ ಎನ್ನುವ ನೋವು ಇವೆರಡರೊಂದಿಗೆ ತಲೆ ಮೇಲೆ ಗಂಟು-ಮೂಟೆಗಳನ್ನು ಹೊತ್ತುಕೊಂಡು ಪುಟ್ಟ ಕಂದಮ್ಮಗಳ ಜೊತೆ ಸಾಗುತ್ತಿದ್ದ ವಲಸೆ ಕಾರ್ಮಿಕರನ್ನು ಮಾಧ್ಯಮಗಳಲ್ಲಿ ಕಂಡಾಗ ಅತೀವ ವೇದನೆಯಾಗುತ್ತಿತ್ತು. ಲಾಕ್ ಡೌನ್ ನಿಯಮ ಮೀರಿ ನಡೆದೇ ಊರ ಸೇರಬಯಸಿದ ಒಂದಷ್ಟು ಮಂದಿಯನ್ನು ರೈಲು ಹೊಸಕಿ ಹಾಕಿದರೆ, ಇನ್ನೊoದೆಡೆ ಸಂಚಾರಕ್ಕೆ ಅನುಮತಿ ಸಿಕ್ಕ ಮೇಲೆ ಟೆಂಪೋ-ಟ್ರಕ್ ಗಳನ್ನೇರಿ ಸಾಗುತ್ತಿದ್ದ ಇಪ್ಪತ್ಮೂರು ಜನರನ್ನು “ಅಪಘಾತ” ಎನ್ನುವ ರಕ್ಕಸ ಬಲಿ ಪಡೆಯಿತಲ್ಲ. ಇದೆಂಥಾ ದುರ್ವಿಧಿ..!

ಒಂದಲ್ಲ, ಎರಡಲ್ಲ ಮೂರು ಕಡೆಗಳಲ್ಲಿ ಸತ್ತವರು ಸತ್ತರು. ಈ ಬಾಳೆಂಬ ಗೋಳು ಸಾಕೆಂದು ಭಗವಂತನೇ ತನ್ನತ್ತ ಸೆಳೆದುಕೊoಡನೋ ಏನೋ… ಗಾಯಾಳುಗಳಾಗಿ ಉಳಿದವರ ಪಾಡೇನೋ? ಹೇಗೋ? ವಲಸೆ ಕಾರ್ಮಿಕರ ಬದುಕಿನ ಈ ದುರಂತವನ್ನು ಬಿಸಿ ಬಿಸಿಯಾಗಿ ಭಿತ್ತರಿಸಿದ ಮಾಧ್ಯಮಗಳು ಹೊಸ ಸುದ್ದಿ ಸಿಕ್ಕೊಡನೆ ಅವುಗಳತ್ತ ತೆರೆದುಕೊಳ್ಳುತ್ತವೆ. ಪಕ್ಷ-ರಾಜಕಾರಣ ಮೆರೆಸಲೆತ್ನಿಸುವವರು ವಲಸೆ ಕಾರ್ಮಿಕರ ಇಡೀ ಸಾಮುದಾಯಕ್ಕೆ ನ್ಯಾಯ ಒದಗಿಸಿಯೇ ಸಿದ್ಧ ಎನ್ನುವಷ್ಟರ ಮಟ್ಟಿಗೆ ಆ ಎರಡು ದಿನಗಳಲ್ಲಿ ಹೋರಾಟ ನಡೆಸಿ ಮತ್ತೆ ಬೇರೆ ವಿಚಾರಗಳತ್ತ ಗಮನ ಹರಿಸತೊಡಗುತ್ತಾರೆ.

ನಿಜವಾಗಿ ಹೋರಾಟ ಮಾಡಬೇಕಾದವರು ಮಾತ್ರ ತಮ್ಮವರನ್ನು ಕಳೆದುಕೊoಡು ದುಃಖಿಸುತ್ತ, ಮುಂದಿನ ಅತಂತ್ರ ಸ್ಥಿತಿಯಲ್ಲಿ ಬದುಕು ಹೇಗೋ ಏನೋ ಎಂದು ಚಿಂತಿಸುತ್ತ ಯಾರಿಗೆ ಹೇಗೆ ತಮ್ಮ ಅಳಲನ್ನು ತೋಡಿಕೊಳ್ಳಲಿ ಎಂದು ಪರಿತಪಿಸುತ್ತಿದ್ದಾರೆ. ಧನಬಲ-ಜನಬಲ ಎರಡೂ ಇಲ್ಲದ ಇವರ ಮುಂದಿನ ಬದುಕು ಹೇಗೋ ಏನೋ. ಇದೆಲ್ಲದರ ಬಗ್ಗೆ ಚಿಂತಿಸುತ್ತ ಕೂತಿದ್ದರೆ ಹೃದಯಾಳದಿಂದ ಬರುವ ಕೂಗೊಂದೇ, ಕ್ರೂರ ವಿಧಿಯಾಟಕ್ಕೆ ಬಲಿಯಾಯಿತೇ ಬದುಕು…

ಲೇಖಕರು: ಜಯಲಕ್ಷ್ಮಿ .ಕೆ, ಉಪನ್ಯಾಸಕಿ, ಸಂತ ಜೋಸಫರ ಕಾಲೇಜು, ಮಡಿಕೇರಿ




Leave a Reply

Your email address will not be published. Required fields are marked *

error: Content is protected !!