ಬೇಸಿಗೆ ಆರಂಭದಲ್ಲೇ ವಿದ್ಯುತ್ ಸಮಸ್ಯೆ!

312

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಬಸವನಬಾಗೇವಾಡಿಯ ವಿದ್ಯುತ್ ಘಟಕದಲ್ಲಿನ ಸಮಸ್ಯೆಯಿಂದಾಗಿ ಫೆ.21ರಂದು ಬರೋಬ್ಬರಿ 10ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಸ್ಥಗಿತಗೊಂಡಿತ್ತು. ಇದಾದ ಬಳಿಕವೂ ನಿತ್ಯ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ.

ಮುಂಜಾನೆ ಹೋಗಿ ಬಂದು ಮಾಡುವ ವಿದ್ಯುತ್ ನಿಂದಾಗಿ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಸಾಲದು ಅಂತಾ ಮಧ್ಯಾಹ್ನ, ಸಂಜೆ ಹೀಗೆ ಒಂದು ದಿನದಲ್ಲಿ ಮೂರ್ನಾಲ್ಕು ಬಾರಿ ವಿದ್ಯುತ್ ಸಂಪರ್ಕದಲ್ಲಿ ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಅಂಗಡಿಕಾರರು, ರೈತರು ಕೆಇಬಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಡಿಸೆಂಬರ್ ತಾಲೂಕಿನ ಆಹೇರಿ ಗ್ರಾಮದಲ್ಲಿ 110/11 ಕೆ.ವಿ ವಿದ್ಯುತ್ ಪ್ರಸರಣ ಉಪ ಕೇಂದ್ರ ಉದ್ಘಾಟನೆಗೊಂಡಿದೆ. ಇಂದನ ಸಚಿವ ಸುನಿಲ್ ಕುಮಾರ್ ಅವರು ಉದ್ಘಾಟಿಸಿದ್ದರು. ಈ ವೇಳೆ ಮಾತನಾಡಿದ ಶಾಸಕ ರಮೇಶ ಭೂಸನೂರ ಅವರು, ಇನ್ನು ಮುಂದೆ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ನಿರಂತರ ವಿದ್ಯುತ್ ಪೂರೈಕೆ ಆಗಲಿದೆ. ಇನ್ನೂ ಎರಡ್ಮೂರು ಕಡೆ ವಿದ್ಯುತ್ ಘಟಕಗಳನ್ನು ನಿರ್ಮಿಸಲಾಗುವುದು ಎಂದಿದ್ದರು. ಈಗ ನೋಡಿದರೆ ಬೇಸಿಗೆ ಆರಂಭದಲ್ಲೇ ವಿದ್ಯುತ್ ಅಭಾವ ಕಾಣಿಸಿಕೊಳ್ಳುತ್ತಿದೆ ಎಂದು ರೈತರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಕರೆಂಟ್ ಬಗ್ಗೆ ಕೇಳೇ ಬ್ಯಾಡ್ರಿ. ಮೂರ್ನಾಲ್ಕು ದಿನದಿಂದ ಕರೆಂಟ್ ಇಲ್ಲ. ಕೇಳಿದರೆ ಟಿಸಿ ಕೆಲಸ ನಡದದ ನಾವೇನ್ ಮಾಡಬೇಕಂತ ಹೇಳಾಕತ್ತಾರಿ. ಹಗಲು ಹೊತ್ತಿನಲ್ಲಿ 3 ಗಂಟೆ, ರಾತ್ರಿ 4 ಗಂಟೆ ಕರೆಂಟ್ ಕೊಡ್ತಾರಿ. ಇದರೊಳಗೂ ಸರಿಯಾಗಿ ಇರಲ್ಲ. ಹಿಂಗಾಗಿ ಬೆಳೆಯಲ್ಲ ಒಣಗಲಾಕತ್ತಾವರಿ. ರೈತರ ಸಮಸ್ಯೆ ಭಾಳೈತ್ರಿ. ಕೇಳೋರಿಲ್ಲ.

ಶಿವಾನಂದ ರುಕುಂಪೂರ, ರೈತ

ಗ್ರಾಮೀಣ ಭಾಗದಲ್ಲಿ ಸರಿಯಾಗಿ ಕರೆಂಟ್ ಇಲ್ಲದೆ ಬೆಳೆಗಳೆಲ್ಲ ಹಾಳಾಗುತ್ತಿವೆ ಎಂದು ರೈತರು ಗೋಳಾಡುತ್ತಿದ್ದಾರೆ. ಬೇಸಿಗೆಯಲ್ಲಿ ಬೆಳೆಗಳಿಗೆ ಸರಿಯಾಗಿ ನೀರು ಪೂರೈಕೆ ಮಾಡದೆ ಹೋದರೆ ಹಾಕಿದ ಬಂಡವಾಳ ಸಹ ಬರುವುದಿಲ್ಲ. ಹೀಗಾಗಿ ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ಪದೆಪದೆ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇಲ್ಲದೆ ಹೋದರೆ ಕರೆಂಟ್ ಸಮಸ್ಯೆ ತಪ್ಪಿದ್ದಲ್ಲ ಜನರ ಗೋಳು ಬಿಟ್ಟಿದ್ದಲ್ಲ ಎಂಬಂತೆ ಆಗುತ್ತೆ ಅನ್ನೋದು ಸಾರ್ವಜನಿಕರ ಮಾತು.




Leave a Reply

Your email address will not be published. Required fields are marked *

error: Content is protected !!