ಜಾತ್ರೆಯಿಂದ ಬಡವರು ಬದುಕುತ್ತಾರೆ.. ರಾಜಕೀಯ ಸಮಾವೇಶದಿಂದಲ್ಲ..

463

ಪ್ರಜಾಸ್ತ್ರ ಡೆಸ್ಕ್

ಕೋವಿಡ್ 2ನೇ ಅಲೆ ಎದ್ದಿದೆ. ಹೀಗಾಗಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇನ್ನು ಕಟ್ಟುನಿಟ್ಟಿನ ಕ್ರಮಗಳನ್ನ ಉಪ ಚುನಾವಣೆ ಬಳಿಕ ಎಂದು ಸರ್ಕಾರ ಹೇಳುತ್ತಿದೆ. ಅಲ್ದೇ, ಮದುವೆ, ಸಭೆ, ಸಮಾರಂಭ, ಜಾತ್ರೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಹೆಚ್ಚಿನ ಜನರು ಸೇರಬಾರದು ಎಂದು ಹೇಳಿದೆ.

ಉಪ ಚುನಾವಣೆ ನಂತರ ಕರೋನಾ ಹೆಚ್ಚಾಗುತ್ತಾ ಅಥವ ಆವಾಗ ಕಂಟ್ರೋಲ್ ಬರುತ್ತಾ ಅನ್ನೋ ಪ್ರಶ್ನೆ ಮೂಡಿದೆ. ರಾಜಕೀಯ ಸಮಾವೇಶಗಳಲ್ಲಿ ಲಕ್ಷ ಲಕ್ಷ ಜನರನ್ನ ಸೇರಿಸಲು ಯಾವುದೇ ತೊಂದರೆಯಿಲ್ಲ. ವೇದಿಕೆ ಮೇಲೆ ಜನಪ್ರತಿನಿಧಿಗಳು, ಅವರಿಗೆ ರಕ್ಷಣೆ ಕೊಡಲು ಪೊಲೀಸ್ ಸಿಬ್ಬಂದಿ. ಅಲ್ಲಿ ಕರೋನಾ ನಿಯಮ ಲೆಕ್ಕಕ್ಕೆ ಇಲ್ಲ. ಇದು ಜನಸಾಮಾನ್ಯರ ಸರಳ ಪ್ರಶ್ನೆ ಇದಕ್ಕೆ ಉತ್ತರವಿಲ್ಲ.

ಇನ್ನು ಧಾರ್ಮಿಕ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಿರುವ ಸರ್ಕಾರ, ಅದರಿಂದ ಬದುಕು ಕಟ್ಟಿಕೊಂಡಿರುವ ಅದೆಷ್ಟೋ ಜನರ ಜೀವನದ ಮೇಲೆ ಬರೆ ಎಳೆಯುತ್ತಿದೆ. ಯಾಕಂದ್ರೆ, ಒಂದೂರು ಜಾತ್ರೆ ಅಂದರೆ ಹತ್ತೂರು ಜನ ಸೇರ್ತಾರೆ. ಒಂದಿಷ್ಟು ವ್ಯಾಪಾರವಾಗುತ್ತೆ. ಅದನ್ನೇ ನಂಬಿಕೊಂಡು ಬದುಕುತ್ತಿರುವ ಜನರಿಗೆ ದಾರಿಯಾಗುತ್ತೆ. ಒಂದು ವರ್ಷ ಕೆಲಸವಿಲ್ಲದೆ ಒದ್ದಾಡಿದ ಜನಕ್ಕೆ ಮತ್ತಷ್ಟು ಸಂಕಟ ಕೊಡುವುದು ಎಷ್ಟು ಸರಿ? ಕಳೆದ ವರ್ಷ ಘೋಷಿಸಿದ ಅದೆಷ್ಟೋ ಕಾರ್ಮಿಕ ವರ್ಗದವರಿಗೆ ಆರ್ಥಿಕ ಪರಿಹಾರವೇ ತಲುಪಿಲ್ಲ.

ಜಾತ್ರೆಯಲ್ಲಿ ವ್ಯಾಪಾರ ಮಾಡುವ ಪೂಜಾ ಸಾಮಗ್ರಿ ಅಂಗಡಿಗಳು, ಟೀ ಅಂಗಡಿಗಳು, ಆಟಿಕೆ ಸಾಮಾನು ಮಾರುವವರು, ಬಟ್ಟೆ ವ್ಯಾಪಾರಿಗಳು, ಸ್ಟೇಷನರಿ, ಕೃಷಿ ವಸ್ತುಗಳನ್ನ ಮಾರುವವರು, ತಂಪು ಪಾನಿಯ, ಸರ್ಕಸ್ ಸೇರಿದಂತೆ ಹತ್ತಾರು ಸಣ್ಣಪುಟ್ಟ ವ್ಯಾಪಾರಿಗಳು ಬದುಕು ಕಟ್ಟಿಕೊಂಡಿರ್ತಾರೆ. ನಗರದ ಮಾಲ್ ಸಂಸ್ಕೃತಿ ಇಲ್ಲಿ ಇರಲ್ಲ. ಅವರಷ್ಟು ದುಡ್ಡು ಇವರ ಬಳಿ ಇರುವುದಿಲ್ಲ. ಸಿನಿಮಾ ಮಂದಿ ಹೇಳಿದ್ರು ಅಂತಾ ಕಲಾವಕಾಶ ಕೊಡುವ ಸರ್ಕಾರ, ಜಾತ್ರೆ ಸೇರಿದಂತೆ ಧಾರ್ಮಿಕ, ಶುಭ ಸಮಾರಂಭಗಳಿಂದ ಬದುಕುವ ಅಸಂಘಟಿತ ಕಾರ್ಮಿಕ ವರ್ಗದ ಬಗ್ಗೆಯೂ ವಿಚಾರ ಮಾಡಬೇಕಿದೆ. ಇಲ್ದೇ ಹೋದ್ರೆ ಬದುಕು ಇನ್ನಷ್ಟು ದುಸ್ತರವಾಗುತ್ತೆ.

ಕೋವಿಡ್ ನಿಯಂತ್ರಣಕ್ಕೆ ಶಾಶ್ವತವಾದ ವೈಜ್ಞಾನಿಕ ಪರಿಹಾರ ಹುಡುಕಬೇಕೆ ಹೊರ್ತು ಪದೆಪದೆ ಕರ್ಫ್ಯೂ, ಲಾಕ್ ಡೌನ್, ನಿರ್ಬಂಧ ಅನ್ನೋದು ದೇಶದ ಆರ್ಥಿಕತೆಗೆ ಬಹುದೊಡ್ಡ ಹೊಡೆತ.




Leave a Reply

Your email address will not be published. Required fields are marked *

error: Content is protected !!