ಸುಂದರ ಬದುಕು ಕಿತ್ತುಕೊಂಡ ದೇವರಿಗೆ ಸವಾಲೆಸೆದು ಪರೀಕ್ಷೆ ಬರೆದ ಸಿಂದಗಿಯ ವಿದ್ಯಾರ್ಥಿನಿ!

374

ಪ್ರಜಾಸ್ತ್ರ ವಿಶೇಷ, ನಾಗೇಶ ತಳವಾರ

ಸಿಂದಗಿ: ಎಲ್ಲರ ಬದುಕು ಅಂದುಕೊಂಡಷ್ಟು ಸುಂದರವಾಗಿರುವುದಿಲ್ಲ. ಸಾಕಷ್ಟು ಸವಾಲುಗಳ ನಡುವೆ ಜೀವನ ನಡೆಸಬೇಕಾಗುತ್ತೆ. ಆದ್ರೆ, ನಮ್ಮ ಶಕ್ತಿ ಮೀರಿ ಪ್ರಯತ್ನ ನಡೆಸಬೇಕಾದ ಸವಾಲು ಬಂದರೆ ನಿಜಕ್ಕೂ ಅದೊಂದು ಹೋರಾಟವೇ ಸರಿ. ಅಂತಹ ಹೋರಾಟದ ಜೀವನ ನಡೆಸುತ್ತಿರುವ ಪಟ್ಟಣದ ನಸರೀನ್ ಮೋರಟಗಿ ಅನ್ನೋ ವಿದ್ಯಾರ್ಥಿನಿ 10ನೇ ತರಗತಿ ಪರೀಕ್ಷೆಯನ್ನ ಬರೆದಿದ್ದಾಳೆ.

ಪಟ್ಟಣದ ಜೈಭವಾನಿ ನಗರದ 2ನೇ ಕ್ರಾಸ್ ಹತ್ತಿರದ ನಿವಾಸಿ ಸಾಯಿಪಟೇಲ್ ಹಾಗೂ ಬೀಬಿನ್ ಮೋರಟಗಿ ದಂಪತಿಯ ಮೊದಲ ಪುತ್ರಿಯಾದ ನಸರೀನ್, ಮೂರು ವರ್ಷದ ಮಗು ಇರುವವರೆಗೂ ಎಲ್ಲರಂತೆ ಚೆನ್ನಾಗಿಯೇ ಇದ್ದಳಂತೆ. ಮುಂದೆ ಅಂಗಾಂಗಳಲ್ಲಿ ಸಮಸ್ಯೆ ಕಾಣಿಸಿಕೊಂಡು ಬೆಳವಣಿಗೆ ಕುಂಠಿತವಾಗಿದೆ. ಇನ್ನೊಬ್ಬರ ಸಹಾಯವಿಲ್ಲದೆ ಸ್ವತಂತ್ರವಾಗಿ ಇರುವುದು ಕಷ್ಟಸಾಧ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ನಸರೀನ್, ಎಸ್ಎಸ್ಎಲ್ ಸಿ ಪರೀಕ್ಷೆಯನ್ನ ಪದ್ಮರಾಜ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಬರೆದಿದ್ದಾರೆ.

ಅಜ್ಜ ಮುಕ್ತುಂಸಾಬನೊಂದಿಗೆ ವಿದ್ಯಾರ್ಥಿನಿ ನಸರೀನ್

ದೈಹಿಕವಾಗಿ ಆರೋಗ್ಯವಾಗಿರುವ ಮಕ್ಕಳೇ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಸಾಕಷ್ಟು ಆತಂಕ ಎದುರಿಸುತ್ತಾರೆ. ಆದ್ರೆ, ನಸರೀನ್ ಯಾವುದೇ ಆತಂಕವಿಲ್ಲದೆ ಬದುಕಿಗೇ ಸವಾಲು ಹಾಕುತ್ತೇನೆ ಎನ್ನುವ ಛಲದಲ್ಲಿ ಸಹಾಯಕರ ನೆರವಿನೊಂದಿಗೆ ಪರೀಕ್ಷೆ ಎದುರಿಸಿದ್ದಾರೆ.

ವಿದ್ಯಾರ್ಥಿನಿ ನಸರೀನ್ ತಂದೆ ತರಕಾರಿ ಗಾಡಿಯ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಮನೆಯಲ್ಲಿದ್ದು ನಾಲ್ಕು ಮಕ್ಕಳನ್ನ ನೋಡಿಕೊಳ್ಳುವ ಜವಾಬ್ದಾರಿ ಇದೆ. ತುಂಬಾ ನೋವಿನ ಸಂಗತಿ ಅಂದರೆ ಈ ದಂಪತಿಯ ಇಬ್ಬರು ಹೆಣ್ಮಕ್ಕಳು ಇದೆ ರೀತಿಯ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಗಂಡು ಮಕ್ಕಳು ಎಲ್ಲರಂತೆ ಆರೋಗ್ಯವಾಗಿದ್ದಾರೆ ಅಂತಾರೆ ಅವರ ಸಂಬಂಧಿಕರು. ಹೀಗಾಗಿ ಹೆಣ್ಮಕ್ಕಳ ವೈದ್ಯಕೀಯ ನೆರವಿಗೆ ಯಾರಾದ್ರೂ ಒಂದಿಷ್ಟು ನೆರವು ನೀಡಬೇಕು ಎಂದು ಅವರ ಅಜ್ಜ ಮಕ್ತುಂಸಾಬ್ ಬಂದಾಳ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ದಾನಿಗಳು ಈ ಮಕ್ಕಳ ನೆರವಿಗೆ ಬರಬೇಕು ಅನ್ನೋದು ಎಲ್ಲರ ಮನವಿ.




Leave a Reply

Your email address will not be published. Required fields are marked *

error: Content is protected !!