ಪುಟಾಣಿ ಬೆಳ್ಳುಳ್ಳಿಯಲ್ಲಿ ಬೆಟ್ಟದಷ್ಟು ಆರೋಗ್ಯ

487

ಬೆಳ್ಳುಳ್ಳಿ ಗಾತ್ರದಲ್ಲಿ ಚಿಕ್ಕದಾದರು ಕೆಲಸ ಮಾತ್ರ ಬೆಟ್ಟದಷ್ಟು. ಭಾರತೀಯರ ಅಡುಗೆಗಳು ಬೆಳ್ಳುಳ್ಳಿಯಿಲ್ಲದೆ ಅಪೂರ್ಣವಾಗುತ್ತವೆ. ಸೃಷ್ಟಿಯ ಸದೃಶ ಗುಣವುಳ್ಳ ಬೆಳ್ಳುಳ್ಳಿಯನ್ನು ಬಹಳ ಹಿಂದಿನಿಂದಲೂ ಹಲವು ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಗುಣಪಡಿಸಲು ನಮ್ಮ ಪೂರ್ವಜರು ಬಳಸಿಕೊಂಡು ಬಂದಿದ್ದಾರೆ.

ಅಡುಗೆಮನೆ ನಮ್ಮ ಔಷಧೀಯ ಕೇಂದ್ರ. ಪ್ರತಿನಿತ್ಯ ಆಹಾರವನ್ನ ಕ್ರಮಬದ್ಧವಾಗಿ ಸೇವಿಸಲು ಆರಂಭಿಸಿದರೆ ನಾವು ಯಾವ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ. ಹಾಗೇ ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಅಮೃತಪಾನವಿದ್ದಂತೆ. ದೈಹಿಕ ಚಟುವಟಿಕೆ ಸಾಕಷ್ಟು ಚುರುಕಾಗಿರುತ್ತದೆ ಜೊತೆಗೆ ನಮ್ಮ ಕಣ್ಣುಗಳು ಕೂಡ ಸಾಕಷ್ಟು ಹೊಳಪಿನಿಂದ ಕೂಡಿರುತ್ತವೆ.

ಬೆಳ್ಳುಳ್ಳಿ ಸೇವನೆ ವಿಧಾನ:

ಪ್ರತಿದಿನ 2ರಿಂದ 4 ಗ್ರಾಂ ತಾಜಾ ಹಾಗೂ ಜಜ್ಜಿದ ಬೆಳ್ಳುಳ್ಳಿ ಸೇವಿಸಬಹುದು. ಆದರೆ ಹೆಚ್ಚು ಬೆಳ್ಳುಳ್ಳಿ ಸೇವಿಸಿದರೆ ಅದು ಚರ್ಮ ಮತ್ತು ಉಸಿರಿನ ಮೂಲಕ ಒಂದು ವಿಶಿಷ್ಟ ವಾಸನೆ ಹೊರಡಿಸುತ್ತದೆ. ಇದರಿಂದಾಗಿ ಎದೆ ಉರಿ, ಹೊಟ್ಟೆನೋವು ಮತ್ತು ಅಲರ್ಜಿ ಪ್ರತಿಕ್ರಿಯೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಎಚ್ಚರಿಕೆ ಇರಲಿ.

100 ಗ್ರಾಂ ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು:

ಸಾರಜನಕ 3.5 ಗ್ರಾಂ, ಪಿಷ್ಟ 28.3 ಗ್ರಾಂ, ಮೇದಸ್ಸು 0.5 ಗ್ರಾಂ, ರಂಜಕ 310 ಮಿಲಿ ಗ್ರಾಂ, ಕಬ್ಬಿಣ 1.8 ಮಿಲಿ ಗ್ರಾಂ, ನಿಯಾಸಿನ್ 0.4 ಮಿಲಿ ಗ್ರಾಂ, ಸಿ ಜೀವಸತ್ವ 14 ಮಿಲಿ ಗ್ರಾಂನಷ್ಟು ಹೊಂದಿದೆ.

ಬೆಳ್ಳುಳ್ಳಿ ಸೇವನೆ ಲಾಭ:

ಅತಿಯಾದ ರಕ್ತದೊತ್ತಡದ ಸಮಸ್ಯೆ ತಗ್ಗಿಸಲು ನಿತ್ಯದ ಊಟದಲ್ಲಿ ಬೆಳ್ಳುಳ್ಳಿ ಸೇರಿಸಿಕೊಳ್ಳುವುದು ಅವಶ್ಯಕತೆ ಇದೆ. ಮಧುಮೇಹ ತಡೆಗಟ್ಟಲು ನೆರವಾಗುತ್ತದೆ. ರಕ್ತದಲ್ಲಿ ಸಕ್ಕರೆ ಅಂಶವನ್ನ ಕಡಿಮೆ ಮಾಡುತ್ತದೆ. ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಕೆಮ್ಮು, ಶೀತ, ಎದೆ, ಹೊಟ್ಟೆ ಹಾಗೂ ಕಿವಿಯ ಸೋಂಕಿನ ಸಮಸ್ಯೆ, ಮೂಲ್ಯವ್ಯಾಧಿ, ಮಲಬದ್ಧತೆ, ಕಿವಿನೋವು, ರಕ್ತದೊತ್ತಡ ಇತ್ಯಾದಿ ಅನೇಕ ಕಾಯಿಲೆಗಳಿಗೆ ಇದು ರಾಮಬಾಣವಾಗಿದೆ.

ಹಸಿವನ್ನ ಹೆಚ್ಚಿಸುತ್ತೆ. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ. ಶರೀರದಲ್ಲಿ ವಿಷ ಪದಾರ್ಥವನ್ನ ಮಲ, ಮೂತ್ರದ ಮೂಲಕ ಹೊರ ಹಾಕುತ್ತದೆ. ಹುರಿದ ಬೆಳ್ಳುಳ್ಳಿ ಸೇವನೆಯಿಂದ ಕ್ಯಾನ್ಸರ್ ಕೋಶಗಳು ಶಕ್ತಿ ಕಳೆದುಕೊಳ್ಳುತ್ತವೆ. ಪ್ರತಿದಿನ ಹುರಿದ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಚಯಾಪಚಯ ಕ್ರಿಯೆ ಸುಲಭವಾಗಿ ದೇಹದ ಬೊಜ್ಜು ಕರಗಿಸುವಲ್ಲಿ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿ ಇಂಪ್ಲಾಮೇಟರಿ ಗುಣಲಕ್ಷಣಗಳಿದ್ದು, ಚರ್ಮದ ಮೇಲಿನ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ ಮೊಡವೆ ಸೋಂಕು ಹರಡುವುದನ್ನ ತಪ್ಪಿಸುತ್ತದೆ.

ಹೀಗಾಗಿ ಹಿಂದಿನ ಕಾಲದಿಂದ ಕೇವಲ ನಮ್ಮ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಸಹ ಬೆಳ್ಳುಳ್ಳಿಯನ್ನ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಉಪಯೋಗಿಸುತ್ತಾ ಬಂದಿದ್ದಾರೆ. ಯಶಸ್ವಿ ಕೂಡ ಆಗಿದ್ದಾರೆ. ಆದ್ರಿಂದ ಬೆಳ್ಳುಳ್ಳಿ ಉಪಯೋಗ ಆರೋಗ್ಯಕ್ಕೆ ಲಾಭ.

ಲೇಖಕರು: ಸಂಗಮೇಶ ಎನ್ ಜವಾದಿ, ಕೊಡಂಬಲ, ಬೀದರ




Leave a Reply

Your email address will not be published. Required fields are marked *

error: Content is protected !!