‘ಹೇಳದೆ ಹೋದ ಮಗಳಿಗೆ’ ಕಾಣಿಸದ ತಂದೆಯ ಮಿಡಿದ ಹೃದಯ…

591

ಲೇಖಕ ನರೇಂದ್ರ ಎಸ್.‌ಗಂಗೊಳ್ಳಿಯವರ ಪ್ರಥಮ ಕೃತಿ ‘ಹೇಳದೆ ಹೋದ ಮಗಳಿಗೆ’ ಬಗ್ಗೆ ಇಂಗ್ಲಿಷ್ ಉಪನ್ಯಾಸಕಿ ಸುಮತಿ ಶೆಣೈ ಅವರ ಲೇಖನ ಹೊತ್ತಿಗೆಯೊಳಗಿನ ಬುತ್ತಿಯನ್ನ ಉಣಬಡಿಸಿದ್ದಾರೆ.

ಆಂಗ್ಲಭಾಷೆಯಲ್ಲಿ  ‘ಪ್ರೊಲಿಫಿಕ್’ ಎಂದುಕೊಳ್ಳುವ, ವಿಶಾಲ ಹರವಿನ ಮತ್ತು‌ ವೈವಿಧ್ಯತೆಗಳ ಬರಹ ಸಮೃದ್ಧಿತನವನ್ನು ಮೈಗೂಡಿಸಿಕೊಂಡ ಲೇಖಕ ನರೇಂದ್ರ ಎಸ್.‌ ಗಂಗೊಳ್ಳಿಯವರ ಚೊಚ್ಚಲ ಕೃತಿ ‘ಹೇಳದೆ ಹೋದ ಮಗಳಿಗೆ’ ಸಾಧನೆಪ್ರಿಯ ಜನರಿಗೆ ದೊರೆತ ಅಮೂಲ್ಯ ಸಂಕಲನ. 

ತೊಂಬತ್ತರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿದ್ದ ಕಿರುಚಿತ್ರದಲ್ಲಿನ ಕೋತಿ ಮತ್ತು ಅದನ್ನು ಪಳಗಿಸುವಾತನ ಪರಸ್ಪರ ಭಾಂಧವ್ಯದ  ಆತ್ಮೀಯತೆ ಅಗಲುವಿಕೆ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿತ್ತು. ಅದೇ  ಭಾವನಾ ತೀವ್ರತೆಯ ಮೂಲಕ ಪ್ರಾಣಿ ಪ್ರೀತಿಯ ಮುಖೇನೆ  ಮಾನವೀಯ ಸಂಬಂಧಗಳನ್ನು ಕಾಯ್ದುಕೊಳ್ಳುವ ಪರಿಯೊಂದು ದಶಕಗಳಾಂತರದಲ್ಲಿ ಹೊಸದೊಂದು ರೀತಿಯಲ್ಲಿ ಮನಃಸ್ಪರ್ಶಿಸಿದ್ದು ಈ ಕೃತಿಯಲ್ಲಿದ್ದ ಜಪಾನಿ ನಾಯಿ ಹಾಚಿಕೋ ಮತ್ತು ಮಾಲೀಕ ಉಯಿನೋ ಸಾಂಗತ್ಯದ ಕಥಾನಕ. ಹೌದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಚಲನಚಿತ್ರವಾದ ಈ ಲೇಖನ, ನರೇಂದ್ರರೇ ಹೇಳುವಂತೆ  ಬರಿ ನಾಯಿಯ ಕಥೆಯಲ್ಲ. ಮನುಷ್ಯ ಬದುಕುವ ರೀತಿಯನ್ನು, ಮಾನವೀಯ ಸಂಬಂಧಗಳನ್ನು ಕಾಪಿಟ್ಟುಕೊಳ್ಳುವ ಬಗೆಯೆನ್ನುವ  ಲೇಖಕರ ನಿಲುವು ಸಂಕಲನದ ಮುಂದಿನೆಲ್ಲ ಬರಹಗಳಲ್ಲಿ ಮಾನವೀಯ ಶಕ್ತಿ ಮತ್ತು ಕಾಣದ ಕೈಗಳ ಶಕ್ತಿಯ ಮಿಲನದಲ್ಲಿ ಘಟಿಸುವ, ಮುಖ್ಯವಾಗಿ ದೈಹಿಕ ನ್ಯೂನತೆಯಿರುವ ವ್ಯಕ್ತಿಗಳ ಪ್ರಚಂಡ ಸಾಧನೆಗಳನ್ನು ವಿಶ್ಲೇಷಿಸುತ್ತಾ ಸಾಗುತ್ತವೆ. 

ಯಶಸ್ಸಿನ‌ ಕನಸು ಕಾಣುವ ಹಂತ ಹದಿಹರೆಯ. ಆದರೆ ಗೆಲ್ಲುವ ಬಗೆಯನ್ನು, ಗೆಲುವನ್ನು ಸಂಭ್ರಮಿಸುವ ರೀತಿಯನ್ನು ಮಾತ್ರ ಹೆಚ್ಚಾಗಿ ತಿಳಿದಿರುವ ನಮ್ಮ ಇಂದಿನ ಯುವಪೀಳಿಗೆಗೆ ಈ ಲೇಖನಗಳು ತಾವು ಸೋತರೂ  ಹೇಗೆ ಗುರಿಗಂಬವನ್ನು ಏರಬಹುದೆಂದು ನೇರ ಮಾತಿನ ಧಾಟಿಯಲ್ಲಿ ತಿಳಿಹೇಳುತ್ತವೆ.  ಅದಮ್ಯ ಛಲವಾದಿ ವ್ಯಕ್ತಿತ್ವ ಕೇಂದ್ರಿತ ಪ್ರಬಂಧಗಳಲ್ಲಿ ಒಂದು ಡೊಕ್ಯೂಮೆಂಟರಿಯೋ, ಚಲನಚಿತ್ರವೋ ಆಗಬಲ್ಲಂಥ ಕಥೆಗಳು ಅಡಕವಾಗಿರುವುದು ಈ ಪುಸ್ತಕದ ಸ್ವಾರಸ್ಯ.

ಇಲ್ಲಿರುವ ಪ್ರತಿ ಸಾಧನೆಯೂ ಒಂದು ಮಹಾಸಾಹಸವೇ.. ಅರ್ಜೆಂಟೈನಾದ ವಿಶ್ವ ವಿಖ್ಯಾತ ಕಾದಂಬರಿಕಾರ ಜೆ. ಎಲ್. ಬೋರೇಸ್ ಹೇಳುವ ಪ್ರಕಾರ ಜೀವನದಲ್ಲಿ ಬರುವ ಕೆಲವು ನೋವು, ಸೋಲು, ಅವಮಾನ, ಹತಾಶೆ, ಯಾತನೆಗಳೆಲ್ಲವನ್ನೂ ಮನುಷ್ಯ ತಾನೊಬ್ಬ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಬೇಕಾಗುವ ಸಂಪನ್ಮೂಲಗಳಂತೆ ಎನ್ನುವ ಮಾತು ಸಾಧಕರ ಹಿನ್ನೆಲೆಯುಳ್ಳ ಪ್ರತಿಯೊಂದು ಬರಹಕ್ಕೂ ಅನ್ವಯವಾಗುತ್ತದೆ. ಸ್ವಾಭಿಮಾನದ ನೆಲೆಗಟ್ಟಿನಲ್ಲಿ ರೂಪು ತಳೆದ ಸಾಧಕ ವ್ಯಕ್ತಿತ್ವಗಳು ತನ್ನದೇ ಪಡಿಯಚ್ಚೇನೋ ಎನ್ನುವ ತುಡಿತದಲ್ಲಿ ಬರೆಯುವ ಲೇಖಕರು.

ಹಿಮಾದಾಸ್ ನ ಜೀವನದಲ್ಲಿ ಬರುವ ಗ್ರಾಮೀಣ ಹಿನ್ನೆಲೆಯಾಗಿರಲಿ,  ಪಿಯಾನೋ ಬಾರಿಸುವ ವಿದೇಶಿ ಹುಡುಗಿಯ ಅಮ್ಮನ ಛಲವಾಗಲಿ, ಒಂಟಿಕಾಲಿನ  ಬ್ಯಾಡ್ಮಿಂಟನ್ ತಾರೆ ಮಾನಸಿ ನಯನ ಜೋಶಿಗಾದ ಅಪಘಾತದ ನಂತರವೂ ಕ್ರೀಡಾಕಾಂಕ್ಷೆಯ ಕಿಡಿ ಆಗಲಿ ಎಲ್ಲವನ್ನೂ ವಿವರಿಸುವಾಗ ಲೇಖಕರ ಲೇಖನಿಯ ಝಳಪು ಬಹು ಪ್ರಖರವಾಗಿರುತ್ತದೆ. ಬಹುಶಃ ಜೀವನ ನಿರ್ವಹಣೆಯ ಎಲ್ಲ ಬವಣೆಗಳನ್ನು ಎದುರಿಸಿಯೂ  ಸ್ವಯಂಸ್ಪೂರ್ತಿಯ ಕ್ರೀಯಾಶೀಲತೆಯನ್ನು  ಪಡೆದ ಬದುಕು ಸ್ವತಃ ಲೇಖಕ ನರೇಂದ್ರರಾದ್ದರಿಂದ ಇನ್ನೊಬ್ಬರ ಕಠಿಣ ಶ್ರಮಕ್ಕಾದ ಜಯವನ್ನು ಹೇಳುವಾಗ ಈ ಭಾವನಾತ್ಮಕ ಕಸುವು ಹೊರಹೊಮ್ಮಿದ್ದು ಸಹಜವೆನಿಸುತ್ತದೆ. ಮಹಾರಾಷ್ಟ್ರದಲ್ಲಿ ಅನಾಥ ಮಕ್ಕಳಿಗೆ ಮೀಸಲು ನೀಡುವ ಶಾಸನಕ್ಕಾಗಿ ಹೋರಾಡಿದ ಅಮೃತಾ ಖರವಂದೆಯವರ  ದಿಟ್ಟ ಹೆಜ್ಜೆಗಳ ಪರಿಚಯ ನೀಡುತ್ತಾ ಲೇಖಕರು ಸರಕಾರದ ಆ ಶಾಸನವನ್ನು ಮೆಚ್ಚಿದಲ್ಲದೇ ಮೀಸಲಾತಿಯ ಶೇಕಡಾ ಅಂಶ ಹೆಚ್ಚಾಗಬೇಕಾದ ಮಾರ್ಪಾಟನ್ನೂ ತಿಳಿಸುತ್ತಾರೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಬದುಕನ್ನು ತೀವ್ರ ಮಿಡಿತದಿಂದ ನಮ್ಮ ಮನಪಟಲದಲ್ಲಿ ದಾಖಲಿಸುವ ನರೇಂದ್ರರ ಸಾತ್ವಿಕ ರೋಷ ಉಕ್ಕಿದ್ದು ಶಾಸ್ತ್ರೀಜಿಯವರನ್ನು ದಫನ ಮಾಡುವ ಸಂದರ್ಭದಲ್ಲೂ ವಿರೋಧಿಗಳ ಅನಾಚಾರದ ನಡವಳಿಕೆಗೆ. ‘ಅವತ್ತೇ ಅವರ ಕೊರಳಪಟ್ಟಿ ಹಿಡಿದು ಕೇಳಬೇಕಿತ್ತು, ದೇಶಭಕ್ತಿ, ನಾಯಕತ್ವ ಅನ್ನುವಂಥದ್ದೆಲ್ಲ ಒಂದು ವಂಶದ ಸೋತ್ತೇನು’? ಎನ್ನುವ ಪ್ರಶ್ನೆ ಕೇಳಬೇಕೆನ್ನುವ ನರೇಂದ್ರರ ನಿಲುವು ಗಮನಾರ್ಹ.

ಸಂಕಲನದ ಪ್ರಥಮ ಲೇಖನ ಈ ಎಲ್ಲ ನೈಜ ಘಟನೆಯಾಧಾರಿತ ವಿಚಾರಗಳಿಗಿಂತ ಭಿನ್ನವಾಗಿ, ಪುಸ್ತಕದ ಶೀರ್ಷಿಕೆ ಹೊತ್ತ ಬರಹವಾಗಿ ವಿಚಿತ್ರಾನುಭೂತಿ ನೀಡುತ್ತದೆ. ‘ನಿನ್ನ ಮುದ್ದು ಟೆಡ್ಡಿಬೇರ್ ಗಳು ಇನ್ನೂ ನಗುತ್ತಿವೆ’ ಎಂದು ತೀವ್ರವಾಗಿ ಮಿಡಿದ ತಂದೆಯ ಹೃದಯದ ವ್ಯಥೆ ಹೇಳದೇ ಹೋಗುವ ಎಲ್ಲ ಮಕ್ಕಳ ಅಂತಃರಾಳವನ್ನು ಕದಡಿ, ಇತರ ಓದುಗರನ್ನು ಯೋಚನಾಲಹರಿಯಲ್ಲಿ ತೇಲಿಸುವಂತಿದೆ. ಕೆಲವು ಲೇಖನಗಳಲ್ಲಿ ಮುಖ್ಯಭೂಮಿಕೆಯ ವ್ಯಕ್ತಿಗಳನ್ನು ಏಕವಚನದಲ್ಲಿ ಸಂಭೋಧಿಸಿದ್ದು ಸಮಂಜಸವಲ್ಲವೇನೋ ಅಂತಂದು ಕೊಳ್ಳುವಾಗಲೇ, ನಟ ಶಂಕರ್ ನಾಗ್ ರ ಬಗ್ಗೆ ಹೇಳುವಾಗ ಲೇಖಕರೇ ಹೇಳುತ್ತಾರೆ ‘ಶಂಕರ್ ನಾಗ್ ಏಕವಚನದಲ್ಲಿ ಕರೆಯುವಷ್ಟು ಆಪ್ತ’ ಎಂದು. 

ಮಕ್ಕಳಿಗೆ ಬೊಂಬೆಗಳನ್ನು ಕೊಡಿ ಎನ್ನುವ ಲೇಖಕರು ಮುದ್ದು ಮಾಡುವಲ್ಲಿ ಬುದ್ಧಿಗೇಡಿತನ ಇರುವುದನ್ನು ಉಲ್ಲೇಖಿಸುತ್ತಾರೆ. ಮುನ್ನುಡಿಯಲ್ಲಿ  ನಾಡಿನ ಹೆಸರಾಂತ ಲೇಖಕಿ ಡಾ. ಪಾರ್ವತಿ ಐತಾಳರು ಹೇಳುವಂತೆ ವಸ್ತುನಿಷ್ಠ ಮತ್ತು ಗಂಭೀರ ಶೈಲಿಯನ್ನು ಬಳಸದೇ ಭಾವನಾತ್ಮಕವಾದ ವಾಕ್ಯಗಳ ಪೋಣಿಸುವಿಕೆಯಿಂದ ಗಮನ ಸೆಳೆಯುವ ಜರ್ಮನಿಯ ಹಸುಪ್ರಿಯೆಯ ಭಾರತೀಯತ್ವದ ಮನಸ್ಥಿತಿ ಮತ್ತು ಭಗತ್ ಸಿಂಗ್ ರವರ ರಾಷ್ಟ್ರಭಕ್ತಿಯು ಬಹಳ ಆಪ್ಯಾಯಮಾನ. ಮರೆಯಾಗಿ ಹೋದ ಏಕಾಂಗಿ ಮರದ ಕಥನದಲ್ಲಿದ್ದ ಆಶಯ ಮನೋಜ್ಞ. ಖ್ಯಾತನಾಮರ ವಿಚಾರದಲ್ಲಿ ಅವರ ಸರಳ ಅಂಶಗಳು ಹೇಳುವ ಲೇಖಕರು ವಿಶ್ವೇಶ್ವರಯ್ಯನವರ ಕನ್ನಡಪ್ರೇಮ, ಹಾಕಿ ವಿಶ್ವಾಗ್ರೇಸರ ಧ್ಯಾನ್ ಸಿಂಗ್ ಚಾಂದ್ ಚಂದಾದ ಅಪರೂಪದ  ಸನ್ನಿವೇಶಗಳನ್ನು ತಿಳಿಸಿದ್ದಾರೆ. ಧರ್ಮವೆಂಬುದು ಪ್ರಾಣಿ ದಯೆಯಾಗಿ, ರಾಜಕೀಯ ಆಸಕ್ತಿಯೆನ್ನುವುದು ರಾಷ್ಟ್ರಪ್ರೇಮವಾಗಿ, ಸಾಂಸ್ಕ್ರತಿಕ ಪ್ರಜ್ಞೆಯೊಂದು ಸಮಾಜದ ಮಕ್ಕಳ ಬಗೆಗಿನ ತುಡಿತವಾಗಿ ಬಿಂಬಿಸಲ್ಪಟ್ಟಿದ್ದನ್ನು ಗುರುತಿಸಬಹುದು. ಒಟ್ಟಿನಲ್ಲಿ ಇದೊಂದು‌ ಜತನದಿಂದ ಕಾಪಿಟ್ಟುಕೊಳ್ಳುವ ಮತ್ತು  ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡುವಂತಹ ಚಂದನೆಯ ಪುಸ್ತಕ.

ಸುಮತಿ ಶೆಣೈ
ಇಂಗ್ಲಿಷ್ ಉಪನ್ಯಾಸಕರ, ಆರ್ ಎನ್ಎಸ್ ಪಿಯು ಕಾಲೇಜು, ಕುಂದಾಪುರ



Leave a Reply

Your email address will not be published. Required fields are marked *

error: Content is protected !!