ಸಿಂದಗಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

379

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ನೂತನ ತಹಶೀಲ್ದಾರ್ ಪ್ರದೀಪ ಹಿರೇಮಠ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ಅಸಂಖ್ಯಾತ ಜನರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವತಂತ್ರ ಸಿಕ್ಕಿದೆ. ಈ ಮಣ್ಣಿಗಾಗಿ ನಾವೆಲ್ಲ ಕೆಲಸ ಮಾಡೋಣ ಅಂತಾ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅಶೋಕ ಮನಗೂಳಿ, ದೇಶದ ಸ್ವತಂತ್ರಕ್ಕಾಗಿ ಹುತಾತ್ಮರಾದ ಪ್ರತಿಯೊಬ್ಬರನ್ನು ಸ್ಮರಣೆ ಮಾಡಬೇಕು. ಸ್ವತಂತ್ರಪೂರ್ವದಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆ ಇರಲಿಲ್ಲ. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ಎಲ್ಲದರಲ್ಲಿಯೂ ಸಮಾನತೆ ಸಿಗಲು ಸಾಧ್ಯವಾಗಿದೆ ಎಂದರು.

ಸಿಂದಗಿ ಜನತೆ ನನಗೆ ಆಶೀರ್ವಾದ ಮಾಡಿದ್ದಾರೆ. ಅವರೆಲ್ಲರಿಗೂ ನಮಸ್ಕಾರಗಳು. ಶಾಸಕನಾಗಿ ಮೂರು ತಿಂಗಳಲ್ಲಿ ನೆನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಚಾಲನೆ ಸಿಕ್ಕಿದೆ. ತೋಟಗಾರಿಕೆ ಮಹಾವಿದ್ಯಾಲಯ, ಕಡಣಿ ಬ್ರಿಡ್ಜ್, 24 ಗಂಟೆ ಕುಡಿಯುವ ನೀರು ಯೋಜನೆ, ಗ್ರಾಮಗಳ ಅಭಿವೃದ್ಧಿ ಕೆಲಸಗಳು ನಡೆದಿವೆ. ನಾನು ಜಾತಿ, ದ್ವೇಷದ ರಾಜಕಾರಣ ಮಾಡುವುದಿಲ್ಲ. ಅಭಿವೃದ್ಧಿ ಕೆಲಸ ಮಾಡುತ್ತೇನೆ. ತಾಲೂಕಿನ 142 ಗ್ರಾಮಗಳಲ್ಲಿ ಬಹುತೇಕ ಹಳ್ಳಿಗಳಿಗೆ ನೀರಾವರಿ ಸಮಸ್ಯೆ ಇದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ಸರಿಯಾಗಿ ತಲುಪಿಸುವಲ್ಲಿ ಅಧಿಕಾರಿಗಳು ಸ್ಪಂದಿಸಬೇಕು ಅಂತಾ ಹೇಳಿದರು.

ಈ ವೇಳೆ ಇಂಡಿ ಗ್ರೇಡ್-2 ತಹಶೀಲ್ದಾರ್ ಧನಪಾಲ ದೇವೂರ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ಸಿಪಿಐ ಡಿ.ಹುಲುಗಪ್ಪ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಐ.ಎಸ್ ಟಕ್ಕೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಅಶೋಕ ತೆಲ್ಲೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ದೈಹಿಕ ಶಿಕ್ಷಕ ಸಿದ್ಧಲಿಂಗ ಚೌಧರಿ ನಿರೂಪಿಸಿದರು.




Leave a Reply

Your email address will not be published. Required fields are marked *

error: Content is protected !!