ರಾಯಣ್ಣ ಅಭಿಮಾನಿಯ 9 ವರ್ಷದ ಓಟ

973

ಪ್ರಜಾಸ್ತ್ರ ವಿಶೇಷ

ಧಾರವಾಡ: ಕಿತ್ತೂರ ರಾಣಿ ಚನ್ನಮ್ಮನ ಬಲಗೈ ಭಂಟ, ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ವೀರ ಸಂಗೊಳ್ಳಿ ರಾಯಣ್ಣ ಅಂದರೆ, ಅಸಂಖ್ಯಾತರ ಎದೆಯಲ್ಲಿ ಧೈರ್ಯ, ದೇಶಪ್ರೇಮ ಪುಟಿದೇಳುತ್ತೆ. ಹೀಗಾಗಿ ರಾಯಣ್ಣ ಅಭಿಮಾನಿಗಳ ಸಾಹಸಗಾಥೆಗಳು ನಡೆಯುತ್ತಲೇ ಇರುತ್ತವೆ. ವಿದ್ಯಾಕಾಶಿಯಲ್ಲಿ ನೆಲೆಸಿರುವ ಮಲ್ಲಪ್ಪ ಪೂಜಾರಿ(36) ಅನ್ನೋ ಯುವಕ ಕಳೆದ 9 ವರ್ಷಗಳಿಂದ ಸಂಗೊಳ್ಳಿ ರಾಯಣ್ಣ ಜನ್ಮದಿನ(ಆಗಸ್ಟ್ 15) ಸಂದರ್ಭದಲ್ಲಿ ಅವರು ಹುತಾತ್ಮರಾದ ಸ್ಥಳದವರೆಗೂ ಮ್ಯಾರಾಥಾನ್ ನಡೆಸುತ್ತಿದ್ದಾರೆ.

ಮೊದಲು ಮೂರು ವರ್ಷ ಸಂಗೊಳ್ಳಿಯಿಂದ(45 ಕಿಲೋ ಮೀಟರ್) ನಂದಗಡ, ನಂತರದ ಮೂರು ವರ್ಷ ಕಿತ್ತೂರಿನಿಂದ(30 ಕಿಲೋ ಮೀಟರ್) ನಂದಗಡ, ಮತ್ತೆ ಮೂರು ವರ್ಷ ಧಾರವಾಡದಿಂದ(65 ಕಿಲೋ ಮೀಟರ್) ನಂದಗಡವರೆಗೂ ಮಲ್ಲಪ್ಪ ಪೂಜಾರಿ ಮ್ಯಾರಾಥಾನ್ ನಡೆಸಿದ್ದಾರೆ. ಮುಂದಿನ ವರ್ಷ ಹುಬ್ಬಳ್ಳಿಯ(85 ಕಿಲೋ ಮೀಟರ್ ) ಚನ್ನಮ್ಮ ಸರ್ಕಲ್ ನಿಂದ ನಂದಗಡವರೆಗೂ ಓಡಲಿದ್ದಾರೆ ಎಂದು ತಿಳಿಸಿದ್ದಾರೆ.

ಮಲ್ಲಪ್ಪ ಪೂಜಾರಿ ಮೂಲತಃ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ನಿಂಬಾಳ ಗ್ರಾಮದವರು. ಪ್ರಸ್ತುತ ಧಾರವಾಡದಲ್ಲಿ ನೆಲೆಸಿದ್ದು, ಟಾಟಾ ಮೋಟರ್ಸ್ ನ ಬಾಡಿ ಸಲ್ಯೂಷನ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸಂಗೊಳ್ಳಿ ರಾಯಣ್ಣನ ಶೌರ್ಯ, ದೇಶಪ್ರೇಮದ ಕುರಿತು ಇಂದಿನ ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಈ ರೀತಿ ಓಡುವ ಸಾಹಸ ಮಾಡುತ್ತಿದ್ದಾರೆ. ಈ ಬಾರಿ ಇವರೊಂದಿಗೆ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಲಕ್ಷ್ಮಣ ಬೆಳಗಾವಿ ಅವರು(ಬೀಡಿಯಿಂದ ನಂದಗಡ, 10 ಕಿಲೋ ಮೀಟರ್) ಜೊತೆಯಾಗಿದ್ದಾರೆ. ಹೀಗೆ ವರ್ಷದಿಂದ ವರ್ಷಕ್ಕೆ ಮಲ್ಲಪ್ಪ ಪೂಜಾರಿ ಅವರೊಂದಿಗೆ ಓಡುವವರು ಜೊತೆಯಾಗುತ್ತಿದ್ದು, ಅವರಿಗೆ ಮತ್ತಷ್ಟು ಹುಮ್ಮಸ್ಸು ನೀಡುತ್ತಿದೆ.

ನಂದಗಡದಲ್ಲಿ ರಾಯಣ್ಣನ ಪ್ರತಿಮೆ ಎದುರು ಅಭಿಮಾನಿಗಳ ಸಂಭ್ರಮ.



Leave a Reply

Your email address will not be published. Required fields are marked *

error: Content is protected !!