ಸಿಂದಗಿಯಲ್ಲಿ ಕನ್ನಡ ರಥದ ಭವ್ಯ ಮೆರವಣಿಗೆ

245

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕರುನಾಡು ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಾಡಿನ ತುಂಬ ಕನ್ನಡದ ರಥ ಸಂಚರಿಸುತ್ತಿದೆ. ಕನ್ನಡ ನಾಡಿನ ಪರಂಪರೆ ಸಾರುವ ರಥ ಶನಿವಾರ ಸಂಜೆ ಸಿಂದಗಿಗೆ ಪ್ರವೇಶ ಪಡೆದು ಮುಂದೆ ಸಾಗಿತು.

ಆಲಮೇಲ ಮಾರ್ಗವಾಗಿ ಬಂದ ಕನ್ನಡದ ರಥವನ್ನು ಗಾಂಧಿ ವೃತ್ತದ ಹತ್ತಿರ, ತಹಶೀಲ್ದಾರ್ ಪ್ರದೀಪಕುಮಾರ್ ಹಿರೇಮಠ, ಬಿಇಓ ಆರೀಫ್ ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ, ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನವರ, ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಕನ್ನಡ ರಣಧೀರ ಪಡೆಯ ಸಂತೋಷ ಮಣಗಿರಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಮಹಿಳಾ ನಾಯಕಿಯರು, ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕನ್ನಡದ ಮನಸ್ಸುಗಳು ಸ್ವಾಗತಿಸಿದವು.

ಗಾಂಧಿ ವೃತ್ತದ ಮಾರ್ಗವಾಗಿ ಅಂಬೇಡ್ಕರ್ ವೃತ್ತ, ಅಂಬಿಗೆರ ಚೌಡಯ್ಯ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಹಾಯ್ದು ಬಸವೇಶ್ವರ ವೃತ್ತಕ್ಕೆ ಬಂದು ತಲುಪಿತು. ಈ ವೇಳೆ ಹಂದಿಗನೂರ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಿಂದ ಡೊಳ್ಳು ಕುಣಿತ, ಪಟ್ಟಣದ ಜ್ಞಾನಭಾರತಿ ಶಾಲೆಯ ಮಕ್ಕಳಿಂದ ಕೋಲಾಟ, ಝಾನ್ಸಿ ರಾಣಿ ಲಕ್ಷ್ಮಿಬಾಯಿ ನಾಟಕ, ಕಾವ್ಯ ಕೋಚಿಂಗ್ ಶಾಲೆಯ ಮಕ್ಕಳಿಂದ ರೂಪಕ, ವಿದ್ಯಾರ್ಥಿನಿ ಹಿರೇಮಠ ಭರತನಾಟ್ಯ ನೋಡುಗರ ಕಣ್ಮನ ಸೆಳೆಯಿತು. ರಾತ್ರಿ 9 ಗಂಟೆಯಾದರೂ ಕನ್ನಡತಾಯಿಯ ಗುಣಗಾನ ಮೊಳಗಿತ್ತು. ನಂತರ ಕನ್ನಡದ ರಥವನ್ನು ದೇವರ ಹಿಪ್ಪರಗಿಗೆ ಬೀಳ್ಕೊಡಲಾಯಿತು.




Leave a Reply

Your email address will not be published. Required fields are marked *

error: Content is protected !!