ಕಾರ್ನಾಡರ 52 ವರ್ಷದ ಊಟ ಮತ್ತು ರಜತ್ಗಿರಿ ಮನೆ ಕಥೆ

620

ಕಾರ್ನಾಡರಿಗೂ ಧಾರವಾಡಕ್ಕೂ ಅವಿನಾಭಾವ ಸಂಬಂಧ. ಅವರ ಮನೆ ಹೇಗಿತ್ತು. ಈಗ ಹೇಗಾಗಿದೆ ಮತ್ತು 52 ವರ್ಷಗಳ ಕಾಲ ಉತ್ತರ ಕರ್ನಾಟಕ ಶೈಲಿಯ ಊಟ ಬಡಿಸಿದ 73ರ ಅಜ್ಜಿಯ ಸ್ಟೋರಿ ಇಲ್ಲಿದೆ.

ಬರೋಬ್ಬರಿ 52 ವರ್ಷಗಳ ಕಾಲ ಗಿರೀಶ್ ಕಾರ್ನಾಡ್ ಅವರಿಗೆ ಉತ್ತರ ಕರ್ನಾಟಕ ಶೈಲಿಯ ಊಟ ಬಡಿಸಿದ್ದು ಕೌಶಲ್ಯ ಚೌಧರಿ ಎಂಬುವರು. ಮೂಲತಃ ಬನವಾಸಿಯವರಾದ ಇವರು, ಧಾರವಾಡಕ್ಕೆ ಬಂದು ನಲೆಸಿದ್ರು. 1967ರಲ್ಲಿ ಅಡುಗೆ ತಯಾರಿಸುವ ಕೆಲಸಕ್ಕೆ ಸೇರಿದ್ರು. ಅಲ್ಲಿಂದ 52 ವರ್ಷಗಳ ಕಾಲ ಕಾರ್ನಾಡ್ ಅವರಿಗೆ ಎಣ್ಣಗಾಯಿ, ಮಡಕಿಕಾಳು, ಶೇಂಗಾ ಹೋಳಿಗೆ, ಪುಟಾಣಿ, ಬಳ್ಳೂಳ್ಳಿ, ಶೇಂಗಾ ಚಟ್ನಿ ಸೇರಿದಂತೆ ಉತ್ತರ ಕರ್ನಾಟಕ ಶೈಲಿಯ ಊಟ ಬಿಡಿಸಿದ್ದಾರೆ.

ಧಾರವಾಡದಿಂದ ಬೆಂಗಳೂರಿಗೆ ಹೋಗಿ ನೆಲಸಿದ ಮೇಲೂ ಕಾರ್ನಾಡ್ ಅವರು ಕೌಶಲ್ಯ ಅವರನ್ನ ಸಹ ಕರೆದುಕೊಂಡು ಹೋದ್ರು. ಅನೇಕ ವರ್ಷ ಬೆಂಗಳೂರಿನಲ್ಲಿ ಇದ್ದ ಇವರು, ವಾಪಸ್ ಧಾರವಾಡಕ್ಕೆ ಬಂದ್ರು. ಧಾರವಾಡದಿಂದ ಬೆಂಗಳೂರಿಗೆ ಬರುವಾಗ ಅವರ ಇಷ್ಟದ ಬಳ್ಳೊಳ್ಳಿ, ಶೇಂಗಾ ಹಾಗೂ ಪುಟಾಣಿ ಚಟ್ನಿಯನ್ನ ತಯಾರಿಸಿಕೊಂಡು ಬರುವಂತೆ ಹೇಳ್ತಿದ್ರು ಅಂತಾರೆ ಕೌಶಲ್ಯ.

ಕೌಶಲ್ಯ ಚೌಧರಿ

ನಾಟೀ ಕೋಳಿ ಸಾರು, ತಂದೂರಿ ಚಿಕನ್, ಚಿಕನ್ ಕಬಾಬ್ ಸೇರಿದಂತೆ ವಿವಿಧ ಪದಾರ್ಥಗಳನ್ನ ಅವರು ಹೆಚ್ಚಾಗಿ ಇಷ್ಟಪಡುತ್ತಿದ್ದರು. ಕಾರ್ನಾಡ್ ಅವರ ಕುಟುಂಬ ನನ್ನನ್ನ ಮನೆ ಸದಸ್ಯೆಯಂತೆ ನೋಡಿಕೊಂಡಿದೆ. ಮನೆಯ ಸದಸ್ಯರು ನನ್ನ ಒಡಹುಟ್ಟಿದವರಂತೆ ಇದ್ದರು. ಇದೀಗ ಅವರಿಲ್ಲ. ಅವರು ಇಷ್ಟ ಪಡುತ್ತಿದ್ದ ಅಡುಗೆ ನೆನೆದರೇ ಕಣ್ಣೀರು ಬರುತ್ತಿದೆ  ಅಂತಾರೆ 73 ವರ್ಷದ ಕೌಶಲ್ಯ.

ಸರಸ್ವತಿಪುರದ ಮನೆ

ಧಾರವಾಡದ ಸರಸ್ವತಿಪುರದಲ್ಲಿ ಕಾರ್ನಾಡರ ಮನೆಯಿತ್ತು. ಅದನ್ನ ನಿವೃತ್ತ ಐಎಫ್ಎಸ್ ಅಧಿಕಾರಿ ಮಧು ಬಾಧುರಿ ಅವರು ಖರೀದಿಸಿದ್ದಾರೆ. ಮನೆ ಬಗ್ಗೆ ಮಧು ಬಾಧುರಿ ಹೇಳೋದು ಹೀಗೆ..

ರಜೆಯ ದಿನಗಳಲ್ಲಿ ನಾವು ಕುಟುಂಬ ಸಮೇತ ಧಾರವಾಡಕ್ಕೆ ಬಂದಾಗ ಕಾರ್ನಾಡ್ ಅವರ ಇದೇ ರಜತ್ಗಿರಿ ಮನೆಯಲ್ಲಿ ಭೇಟಿಯಾಗಿದ್ವಿ. ಆಗ ತಮ್ಮ ಮನೆ ಮಾರುವ ವಿಷ್ಯ ಹೇಳಿದ್ರು. ಅಲ್ದೇ, ಮನೆಯನ್ನ ನೀವೇ ಖರೀದಿಸಿ ಅಂತಾ ಸಹ ಹೇಳಿದ್ರು. ಹೀಗಾಗಿ ನಮ್ಮ ಮನೆಯ ಸದಸ್ಯರೆಲ್ಲ ಒಪ್ಪಿಕೊಂಡು 2015ರಲ್ಲಿ ಮನೆ ಖರೀದಿಸಿದ್ದೇವೆ.

ಮಧು ಬಾಧುರಿ

ಮನೆ ಬಿಟ್ಟು ಕೊಡುವಾಗ, ಇದಕ್ಕೆ ಯಾವುದೇ ಹಾನಿ ಮಾಡದೇ ಇರೋ ಸ್ಥಿತಿಯಲ್ಲಿಯೇ ಮುಂದುವರೆಸಿ ಅಂತಾ ಕೇಳಿಕೊಂಡಿದ್ರು. ಐತಿಹಾಸಿಕ ಮನೆಯನ್ನ ಒಂದಿಷ್ಟು ನವೀಕರಣಗೊಳಿಸಿದ್ದೇವೆ. ಅದು ಮೂಲ ಅಂದಕ್ಕೆ ಯಾವುದೇ ರೀತಿಯ ಹಾನಿ ಮಾಡದೇ, ವಿವಿಧ ರೀತಿಯ ಗಿಡಗಳನ್ನ ತಂದು ನೆಟ್ಟಿದ್ದೇವೆ. ಇಡೀ ಮನೆಯನ್ನ ಹಸಿರುಮಯ ಮಾಡಿದ್ದೇವೆ. ಇದನ್ನ ನೋಡಲು ಬನ್ನಿ ಅಂತಾ ಅವರಿಗೆ ಹೇಳಿದ್ದೆ. ಇ-ಮೇಲ್ ಮೂಲಕ ಫೋಟೋಗಳನ್ನು ಕಳುಹಿಸಿದ್ದೆ. ಆದ್ರೆ, ಅವರೇ ಬರ್ಲಿಲ್ಲ ಅಂತಾ ನೋವನ್ನ ಹೊರ ಹಾಕಿದ್ದಾರೆ ಮಧು ಬಾಧುರಿ ಅವರು.

ಮಧು ಬಾಧುರಿಯವರು ಜುಲೈ 3 ರಂದು ಗಿರೀಶ್ ಕಾರ್ನಾಡ್ ಅವರಿಗೆ ಇ-ಮೇಲ್ ಮೂಲಕ ಆಹ್ವಾನಿದ್ದರು. ಅದಕ್ಕೆ ಉತ್ತರಿಸಿದ್ದ ಅವರು, ಬಾಧುರಿ ಅವರಿಗೆ ಶುಭಾಶಯ ಕೋರಿದ್ರಂತೆ. ತಮಗೆ ಅನಾರೋಗ್ಯ ಇರುವ ಬಗ್ಗೆಯೂ ತಿಳಿಸಿದ್ರಂತೆ. ಧಾರವಾಡಕ್ಕೆ ಬಂದಾಗಲೆಲ್ಲ ತಮ್ಮ ರಜತ್ಗಿರಿಯ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದ ಕಾರ್ನಾಡ್ ರು ಅದನ್ನು ಮಾರಿದ ಬಳಿಕವೂ ಅದರ ಬಗ್ಗೆ ಕಾಳಜಿ ಹೊಂದಿದ್ದರು.

ಇದು ಧಾರವಾಡದ ಕಾರ್ನಾಡ್ ಅವರ ಮನೆ ಹಾಗೂ 52 ವರ್ಷಗಳ ಕಾಲ ಉತ್ತರ ಕರ್ನಾಟಕ ಶೈಲಿಯ ಊಟ ನೀಡಿದ ಕೌಶಲ್ಯ ಚೌಧರಿ ಅವರ ಕಥೆ.




Leave a Reply

Your email address will not be published. Required fields are marked *

error: Content is protected !!