ದೇಸಿ ದನಿ ಗಾಯಕನಿಗೆ ‘ಕರುನಾಡ ರತ್ನ’ ಗರಿ

351

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಮೈಸೂರು: ದೇಸಿ ದನಿಯ ಗಾಯಕ ಎಂದೇ ಖ್ಯಾತಿ ಗಳಿಸಿರುವ ಲಕ್ಷ್ಮಿರಾಮ್ ಅವರಿಗೆ ಈ ಬಾರಿಯ ಕರುನಾಡ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಕೊಡಮಾಡುವ ಪ್ರಶಸ್ತಿಗೆ ಖ್ಯಾತ ಗಾಯಕ ಲಕ್ಷ್ಮಿರಾಮ್ ಭಾಜನರಾಗಿದ್ದಾರೆ.

ಡಿಸೆಂಬರ್ 25ರಂದು ಮೈಸೂರಿನ ಕಲಾಮಂದಿರದ ಕಿರು ರಂಗ ಮಂದಿರದಲ್ಲಿ ನಡೆಯುವ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಯಮುನಾ ಹೆಚ್.ಎಲ್ ತಿಳಿಸಿದ್ದಾರೆ.

ಗಾಯಕ ಲಕ್ಷ್ಮಿರಾಮ್ ಹಿನ್ನೆಲೆ:

ಲಕ್ಷ್ಮಿರಾಮ್ ಅವರು ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲೂಕಿನ ನಾಡಪ್ಪನಹಳ್ಳಿ ಗ್ರಾಮದವರು. ಕಳೆದ 20 ವರ್ಷಗಳಿಂದ ಕರ್ನಾಟಕವೂ ಸೇರಿದಂತೆ ಅನೇಕ ಹೊರ ರಾಜ್ಯಗಳಲ್ಲಿ 1000ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮ ನೀಡಿದ್ದಾರೆ. 3000ಕ್ಕೂ ಹೆಚ್ಚು ಕಾಲೇಜು, ವಿಶ್ವವಿದ್ಯಾಲಯಗಳ ವಿಧ್ಯಾರ್ಥಿಗಳಿಗೆ ಕಂಸಾಳೆ ಮತ್ತು ಜನಪದ ಗೀತೆ, ದೇಶ ಭಕ್ತಿಗೀತೆ, ಭಾವಗೀತೆಗಳ ತರಬೇತಿ ನೀಡಿದ್ದಾರೆ.

ಗಾಯಕ ಲಕ್ಷ್ಮಿರಾಮ್

ಹೊಸ ವರ್ಷಕೆ ಹೊಸ ಹಾಡು, ಪದವ ಹೇಳೋ ನಾಲಿಗೆಗೆ ಒಲಿದು ಬಾಪ್ಪ ಧರ್ಮ ಗುರುವೇ, ಜಗ ನಡೆಯಲಿ ಬುದ್ಧನ ಕಡೆ ಸೇರಿ ಮುಂತಾದ ವಿನೂತನ ಸಂಗೀತ ಕಾರ್ಯಕ್ರಮಗಳಿಗೆ ಸಂಗೀತ ಸಂಯೋಜಕರಾಗಿ ಹೊಸ ಹಾಡುಗಾರರ ಮತ್ತು ಕವಿಗಳ ಗುರುತಿಸುವಿಕೆಗೆ ಕಾರಣರಾಗಿದ್ದಾರೆ. ಅಲ್ದೇ, ಮಾದರಿ ಮಾದಯ್ಯ, ಬೆಳಕು ಬದುಕು, ಅಯಾಸಿಸ್, ನೆಲದುಸಿರು, ಹಲಗಲಿ ಬೇಡರ ದಂಗೆ, ಧರಿತ್ರಿ ಸೇರಿ 20ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಗಾಯಕ ಲಕ್ಷ್ಮಿರಾಮ್ ಅವರ ಸಂಗೀತ ಸೇವೆಯನ್ನು ಗುರುತಿಸಿ ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಧಮ್ಮ ಸೇವಾ ರತ್ನ, ಕರುನಾಡ ಭೂಷಣ, ಸೇವಾ ಭೂಷಣ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಇದೀಗ ಕರುನಾಡ ರತ್ನ ಪ್ರಶಸ್ತಿ ಇವರ ಮುಡಿಗೇರುತ್ತಿದೆ.




Leave a Reply

Your email address will not be published. Required fields are marked *

error: Content is protected !!