ಪರೀಕ್ಷೆ ಕೇವಲ ಮಕ್ಕಳಿಗಷ್ಟೇ ಅಲ್ಲ…

772

ಡಾ.ವಿನಯ ನಂದಿಹಾಳ ಅವರ ಮೂವಿ ಮಾತು ಅಂಕಣ ಬರಹ ಭಾಗ-3

ವಿವಿಧ ಸಾಮಾಜಿಕ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಚಿತ್ರ ಮಾಡುವಲ್ಲಿ ಪ್ರಕಾಶ ಜಾ ನಿಸ್ಸೀಮರು ಎಂಬುವುದನ್ನು ಅವರ ಹಿಂದಿನ ಚಿತ್ರಗಳಿಂದ ತಿಳಿಯಬಹುದು. ಶಿಕ್ಷಣ ಖಾಸಗೀಕರಣ ಮತ್ತು ವ್ಯಾಪಾರೀಕರಣವಾದ ಮೇಲೆ ಆದಂತಹ ಪರಿಣಾಮಗಳನ್ನು ಪೋಷಕರ ದೃಷಿಕೋನದಲ್ಲಿ ನೋಡುವ ಒಂದು ಪ್ರಯತ್ನವನ್ನು ‘ಪರೀಕ್ಷಾ’ ಚಿತ್ರದಲ್ಲಿ ಮಾಡಿದ್ದಾರೆ. ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಕನಸು ಕಾಣುವ ತಂದೆಯೊಬ್ಬ ಎದುರಿಸುವ ಸವಾಲುಗಳೇನು ಎಂಬುದು ಈ ಚಿತ್ರದ ಕಥಾವಸ್ತು.

ಖಾಸಗಿ ಶಾಲೆಯ ಆಂಗ್ಲ ಮಾಧ್ಯಮದಲ್ಲಿ ಓದಿದರೆ ಮಾತ್ರ ಮುಂದೆ ಒಳ್ಳೆಯ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವೆಂದು ಬಹುತೇಕ ಪೋಷಕರು ನಂಬಿರುತ್ತಾರೆ. ಇಂತಹ ನಂಬಿಕೆ ಹುಟ್ಟಿಕೊಳ್ಳಲು ಕಾರಣಗಳು ಹಲವು. ಅದಕ್ಕೆ ನೇರ ಕಾರಣ ಸರಕಾರಿ ಶಾಲೆಯಲ್ಲಿ ಸರಿಯಾಗಿ ಕಲಿಸುವುದಿಲ್ಲ ಮತ್ತು ಮಾತೃ ಭಾಷೆಯಲ್ಲಿ ಓದಿದರೆ ಉದ್ಯೋಗ ದೊರಕುವುದಿಲ್ಲ ಎಂಬುದಾಗಿದೆ. ಜೊತೆಗೆ ಪ್ರತಿಷ್ಠೆಯ ಸಂಕೇತವಾಗಿದೆ. ಇಂತಹ ನಂಬಿಕೆಯನ್ನು ಬೆಳೆಸಿಕೊಂಡ ಈ ಚಿತ್ರದ ಮುಖ್ಯ ಪಾತ್ರವಾದ ಬುಚ್ಚಿ ತನ್ನ ಮಗನಿಗೆ ಸಾಧ್ಯವಿರುವಷ್ಟು ಒಳ್ಳೆಯ ಶಿಕ್ಷಣ ಕೊಡಿಸುವ ಪ್ರಯತ್ನ ಮಾಡುತ್ತಾನೆ. ತಮ್ಮನ್ನು ಬಡತನ ಎಂಬ ನರಕದಿಂದ ಪಾರು ಮಾಡುವ ಏಕೈಕ ದಾರಿ ಎಂದರೆ ಶಿಕ್ಷಣ ಎಂಬುದನ್ನು ನಂಬಿದ್ದಾನೆ. ಇವನ ದೃಷ್ಟಿಯಲ್ಲಿ ಸರಕಾರಿ ಶಾಲೆಗಳೆಂದರೆ ನರಕಗಳು. ಹೀಗಾಗಿ ನಗರದ ಪ್ರತಿಷ್ಠಿತ ಖಾಸಗಿ ಶಾಲೆಗೆ ಮಗನನ್ನು ಸೇರಿಸುತ್ತಾನೆ. ನಿಯಮಿತವಾಗಿ ಶಾಲಾ ಶುಲ್ಕ ಕಟ್ಟಬೇಕಾಗಿರುವುದರಿಂದ ತನ್ನ ದುಡಿಮೆಯ ಸಮಯನ್ನು ಹೆಚ್ಚು ಮಾಡುತ್ತಾನೆ. ಅದರಿಂದ ಬಂದ ದುಡ್ಡು ಸಾಲದಿದ್ದಾಗ ಕಳ್ಳತನಕ್ಕೆ ಇಳಿಯುತ್ತಾನೆ. ಈ ಕಾರಣಕ್ಕಾಗಿ ಪೊಲೀಸರಿಗೆ ಸಿಕ್ಕು ಶಿಕ್ಷೆ ಅನುಭವಿಸುತ್ತಾನೆ. ಮುಂದೆ ಅವನ ಮಗನ ಶಿಕ್ಷಣ ಹೇಗೆ ಜರುಗಿತು. ತನ್ನ ತಂದೆ ಕಳ್ಳ ಅಂತ ಗೊತ್ತಾದಾಗ ಮಗನ ಪ್ರತಿಕ್ರಿಯೆ ಏನಾಗಿತ್ತು. ಈ ಕಳ್ಳತನದ ಹಣದಿಂದ ಶಾಲೆ ಶುಲ್ಕ ಕಟ್ಟಿದ್ದಾರೆ ಎಂದು ತಿಳಿದಾಗ ಶಾಲಾ ಆಡಳಿತ ಮಂಡಳಿಯ ಪ್ರತಿಕ್ರಿಯೆ ಹೇಗಿತ್ತು ಎನ್ನುವುದನ್ನು ಚಿತ್ರ ನೋಡಿಯೇ ಅರಿಯಬೇಕು.

ಈ ಚಿತ್ರ ಮುಖ್ಯವಾಗಿ ಹೇಳುವುದಕ್ಕೆ ಹೊರಟಿರುವುದು ಸಾರ್ವತ್ರಿಕವಾಗಬೇಕಾದ ಶಿಕ್ಷಣ, ಮಾರಾಟದ ಸರಕಾಗಿ ಮಾರ್ಪಡುತ್ತಿರುವುದರ ಬಗ್ಗೆ ಮತ್ತು ಅದನ್ನು ಪಡೆಯಲು ಮಧ್ಯಮ ಹಾಗೂ ಬಡವರು ಪಡುತ್ತಿರುವ ಕಷ್ಟಗಳ ಬಗೆಗೆ. ನಮ್ಮ ಸಮಾಜದಲ್ಲಿ ಬಡವ ಶ್ರೀಮಂತ ಎಂಬ ವರ್ಗ ಪ್ರಜ್ಞೆ ಎಷ್ಟು ಆಳವಾಗಿದೆ ಎಂಬುವುದು ಆಟೋ ಓಡಿಸುವವನೊಬ್ಬನ ಮಗ ಪ್ರತಿಷ್ಠಿತ ಖಾಸಗಿ ಶಾಲೆಗೆ ಸೇರಿದಾಗ ಅಲ್ಲಿಯ ಜನಗಳು ನೀಡುವ ವಿವಿಧ ಪ್ರತಿಕ್ರಿಯೆಗಳಿಂದ ತಿಳಿಯುತ್ತದೆ. ಇಂತಹ ಹಲವು ವಿಷಯಗಳನ್ನು ನಿರ್ದೇಶಕ ಸೂಕ್ಷ್ಮವಾಗಿ ಬಿಚ್ಚಿಟ್ಟಿದ್ದಾರೆ. ಬಡವ-ಶ್ರೀಮಂತ, ಆಂಗ್ಲ ಮಾಧ್ಯಮ-ಮಾತೃ ಭಾಷೆ ಮಾಧ್ಯಮ, ಸರಕಾರಿ ಶಾಲೆ-ಖಾಸಗಿ ಶಾಲೆ, ನೈತಿಕತೆ-ಅನೈತಿಕತೆ ಇಂತಹ ಹಲವು ಸರಿ ತಪ್ಪುಗಳನ್ನು ಈ ಚಿತ್ರ ಚರ್ಚಿಸುತ್ತದೆ.

ತಂದೆಯ ಪಾತ್ರದಲ್ಲಿ ನಟಿಸಿರುವ ಆದಿಲ್ ಹುಸೇನ್ ನಟನೆ ಅದ್ಭುತವಾಗಿದೆ. ಕಣ್ಣಿನಲ್ಲಿಯೇ ಎಲ್ಲ ಭಾವನೆಗಳನ್ನು ಅಭಿವ್ಯಕ್ತಪಡಿಸುವ ಅವರ ಪರಿ ಆ ಪಾತ್ರವನ್ನು ಇನ್ನೊಂದು ಹಂತಕ್ಕೆ ಒಯ್ಯುತ್ತದೆ. ಖಾಸಗಿ ಶಾಲೆಗೆ ಮೊದಲ ಬಾರಿ ಭೇಟಿ ನೀಡಿದಾಗ ಕಣ್ಣುಗಳಲ್ಲಿಯ ಆಶ್ಚರ್ಯ, ತನ್ನ ಮಗನಿಗೆ ಪ್ರವೇಶ ನೀಡಿ ಎಂದು ದೈನಿಯವಾಗಿ ಪ್ರಾಂಶುಪಾಲರಲ್ಲಿ ಬೇಡುವಾಗ, ಕಳ್ಳತನ ಮಾಡಿ ಸಿಕ್ಕಿ ಬಿದ್ದಾಗ, ಕೈ ಮುಗಿದೇ ದೀರ್ಘವಾಗಿ ಇರುವಂತಹ ಸ್ಥಿತಿಗಳು ಕಣ್ಣಂಚಲ್ಲಿ ನೀರು ಉಕ್ಕಿಸುತ್ತವೆ. ಎಲ್ಲ ತಂದೆ ತಾಯಿಗಳು ಮಕ್ಕಳ ಶಿಕ್ಷಣಕ್ಕಾಗಿ ಪಡುತ್ತಿರುವ ಕಷ್ಟಗಳನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಇನ್ನುಳಿದಂತೆ ಪತ್ನಿಯ ಪಾತ್ರದಲ್ಲಿ ಪ್ರಿಯಾಂಕ್ ಬೋಸ್, ಮಗನ ಪಾತ್ರದಲ್ಲಿ ಶುಭಂ, ಪೊಲೀಸ್ ಅಧಿಕಾರಿಯಾಗಿ ಸಂಜಯ ಸೂರ್ಯ ಇವರುಗಳು ನೈಜವಾಗಿ ನಟಿಸಿ ಚಿತ್ರಕ್ಕೆ ಜೀವ ತುಂಬಿದ್ದಾರೆ. ಪ್ರಕಾಶ ಜಾ ಬರವಣಿಗೆ ಸರಳವಾಗಿದೆ. ಅದಕ್ಕೆ ತಕ್ಕ ರೀತಿಯಲ್ಲಿ ಸ್ಕ್ರೀನ್ ಪ್ಲೇ ಮಾಡಿಕೊಂಡಿದ್ದಾರೆ. ಸರಳ ರೇಖಾತ್ಮಕ ಮಾದರಿಯಲ್ಲಿ ಸಾಗುವ ಚಿತ್ರ ಇದ್ದಾಗಿದ್ದರು ಸಹ ಒಂದು ಸಾಮಾಜಿಕ ಸಮಸ್ಯೆಯ ಬಗೆಗೆ ಆಳವಾಗಿ ಯೋಚಿಸುವಂತೆ ಮಾಡುತ್ತದೆ.

ಇಂತಹ ಒಂದು ಸಾಮಾಜಿಕ ಸಮಸ್ಯೆಯ ಚಿತ್ರ ಮಾಡುವಾಗ ಅದು ಡಾಕ್ಯುಮೆಂಟರಿ ಆಗದೇ ಇರುವ ಹಾಗೇ ನೋಡಿಕೊಳ್ಳಬೇಕಾದದ್ದು ನಿರ್ದೇಶಕನ ಜವಾಬ್ದಾರಿ. ಅದನ್ನು ಪ್ರಕಾಶ ಜಾ ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ. ಹೀಗಾಗಿ ಭಾವನಾತ್ಮಕವಾದಂತಹ ಹಲವು ದೃಶ್ಯಗಳು ಈ ಚಿತ್ರದಲ್ಲಿವೆ. ಒಂದು ದೃಶ್ಯದಿಂದ ಮುಂದಿನ ದೃಶ್ಯ ಏನಾಗಬಹುದೆಂಬುದನ್ನು ಊಹಿಸಬಹುದು. ಆದರೆ ಆ ಊಹೆ ಸರಿಯಿದ್ದರು ಅಲ್ಲಿ ವ್ಯಕ್ತವಾಗುವ ಭಾವನೆಗಳು ನಮ್ಮನ್ನು ಹಿಡಿದು ಕೂಡಿಸುತ್ತವೆ. ಸಮಾಜದಲ್ಲಿ ಇರುವ ಹಲವು ತಾರತಮ್ಯಗಳನ್ನು ತೋರಿಸುವ ಈ ಚಿತ್ರ ಬಹಳಷ್ಟು ಪ್ರಶ್ನೆಗಳು ಹುಟ್ಟುವಂತೆ ಮಾಡುತ್ತದೆ. ಶಿಕ್ಷಣ ಪಡೆಯುವ ಬಗೆಯನ್ನು ವಿಮರ್ಶಿಸುತ್ತ ಎಲ್ಲರಿಗೂ ಸಮಾನ ಶಿಕ್ಷಣ ಅವಶ್ಯಕತೆಯನ್ನು ಹೇಳುತ್ತದೆ. ಈ ಸಮಸ್ಯೆ ಕೇವಲ ಬುಚ್ಚಿಯ ಸಮಸ್ಯೆ ಆಗಿರದೆ ಎಲ್ಲರದೂ ಆಗಿದೆ. ಕನಸುಗಳಿಗೆ ರೆಕ್ಕೆಯ ಕಟ್ಟಿ ಹಾರುವ ಸಮಯಕ್ಕೆ ಕಾಯಬೇಕು. ಆ ಸಮಯ ಬರುತ್ತದೆ ಎಂಬ ಅಂಶವನ್ನು ಈ ಚಿತ್ರ ಪ್ರತಿನಿಧಿಸುತ್ತದೆ.

ನಿಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು vinay99164@gmail.com




Leave a Reply

Your email address will not be published. Required fields are marked *

error: Content is protected !!