ಪೊಲೀಸರ ಕಿರುಕುಳಕ್ಕೆ ಮೂವರು ಆತ್ಮಹತ್ಯೆ: ತಳವಾರ ಸಮಾಜದಿಂದ ಪ್ರತಿಭಟನೆ

663

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಗೋವಾ ಪೊಲೀಸರ ಕಿರುಕುಳದಿಂದ ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರದ ಹುಲಿಗೆಪ್ಪ ಅಂಬಿಗೇರ, ಪತ್ನಿ ದೇವಮ್ಮ ಹಾಗೂ ಹುಲಿಗೆಪ್ಪ ಸಹೋದರ ಗಂಗಪ್ಪ ನೇಣು ಹಾಕಿಕೊಂಡು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಸಾವಿಗೆ ಗೋವಾ ಪೊಲೀಸರ ಕಿರುಕುಳ ಕಾರಣವೆಂದು ಡೆತ್ ನೋಟಿನಲ್ಲಿ ಬರೆದಿಟ್ಟಿದ್ದಾರೆ. ಇದನ್ನ ಖಂಡಿಸಿ ವಿಜಯಪುರ ಜಿಲ್ಲಾ ತಳವಾರ ಪರಿವಾರ ಹಿತರಕ್ಷಣಾ ಸಮಿತಿಯಿಂದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯ್ತು.

ಈ ವೇಳೆ ರಾಜ್ಯ ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಡಾ.ದಸ್ತಗೀರ ಮುಲ್ಲಾ ಮಾತ್ನಾಡಿ, ಕೂಲಿ ಕೆಲಸ ಮಾಡಿಕೊಂಡಿದ್ದ ಬಡ ಕುಟುಂಬದ ಸಾವಿಗೆ ಗೋವಾ ಪೊಲೀಸರು ಕಾರಣರಾಗಿದ್ದಾರೆ. ನಿಜವಾದ ಕಳ್ಳರನ್ನ ಹಿಡಿಯುವ ಬದಲು ದುಡಿಯಲು ಹೋದ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ. ಅವರ ಸಾವಿಗೆ ನ್ಯಾಯ ಸಿಗಬೇಕು. ಕರ್ನಾಟಕ ಸಿಎಂ ಮಧ್ಯಪ್ರವೇಶಿಸಿ ಗೋವಾ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಬೇಕು. ಮೃತ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ರು.

ವಿಜಯಪುರ ಜಿಲ್ಲಾ ತಳವಾರ ಪರಿವಾರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶಿವಾಜಿ ಮೇಟಗಾರ ಮಾತ್ನಾಡಿ, ಬಡ ಹುಲಿಗೆಪ್ಪ ಅಂಬಿಗೇರ ಕುಟುಂಬ ದುಡಿಯಲು ಗೋವಾಗೆ ಹೋಗಿದೆ. ಜುವಾರಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿ ಜೀವನ ನಡೆಸ್ತಿದ್ರು. ಪಕ್ಕದ ಮನೆಯಲ್ಲಿ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಇದರ ವಿಚಾರಣೆ ನೆಪದಲ್ಲಿ ಒಂದು ವಾರ ಈ ಕುಟುಂಬಕ್ಕೆ ಪೊಲೀಸರು ಹಿಂಸೆ ನೀಡಿದ್ದಾರೆ. ಇದ್ರಿಂದ ಬೇಸತ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಲಿಗೆಪ್ಪನಿಗೆ ಇಬ್ಬರು ಪುಟ್ಟ ಹೆಣ್ಮಕ್ಕಳಿದ್ದು, ಮೃತ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಗ್ರೇಡ್ 2 ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯ್ತು.

ಈ ವೇಳೆ ವಿಜಯಪುರ ಜಿಲ್ಲಾ ತಳವಾರ ಪರಿವಾರ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಲೋಕ ರೋಡಗಿ, ಭಾಗಣ್ಣ ಕೆಂಭಾವಿ, ರಾವುತ ಕನ್ನೊಳ್ಳಿ, ಪ್ರಶಾಂತ ಕದ್ದರಕಿ, ದಾವುಲ ಬಳಗಾನೂರ, ಮಡಿವಾಳ ನಾಯ್ಕೋಡಿ, ಭರತ ಜೇರಟಗಿ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!