ನವೆಂಬರ್ 26ರಿಂದ 28ರ ತನಕ ಮಹಾ ಧರಣಿ

395

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ, ಹಿಂದಿನ ರಾಜ್ಯ ಸರ್ಕಾರ ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ನವೆಂಬರ್ 26 ರಿಂದ 28ರ ತನಕ ಬೆಂಗಳೂರಿನ ಫ್ರೀಡ್ಂ ಪಾರ್ಕ್ ನಲ್ಲಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರೈತ ಸಂಘದ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಬಸವನಗೌಡ ಧರ್ಮಗೊಂಡ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, 2020ರಲ್ಲಿ ಕರ್ನಾಟಕ ಸರ್ಕಾರ ಜಾರಿಗೆ ತಂದ ಕರ್ನಾಟಕ ರಾಜ್ಯ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಕರ್ನಾಟಕ ಎಪಿಎಂಸಿ ತಿದ್ದುಪಡಿ ಕಾಯ್ದೆ, ಕರ್ನಾಟಕ ಜಾನುವಾರ ಸಂರಕ್ಷಣಾ ತಿದ್ದುಪಡಿ ಕಾಯ್ದೆ ರದ್ದುಪಡಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಎಫ್ ಟಿಇ ಪದ್ಧತಿಯನ್ನು ರದ್ದುಪಡಿಸಬೇಕು. ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡಬೇಕು.

ಬಗರ್ ಹುಕುಂ ರೈತರನ್ನು ಒಳಗೊಂಡಂತೆ ಉಳುಮೆ ಮಾಡುತ್ತಿರುವ ಎಲ್ಲ ಸಣ್ಣ ರೈತರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು. ರೈತರ ಮೇಲೆ ಹಾಕಿರುವ ಕೇಸ್ ವಾಪಸ್ ಪಡೆಯಬೇಕು. ಸಿಂಗು ಗಡಿಯಲ್ಲಿ ಹುತಾತ್ಮರಾದ ರೈತರ ಸ್ಮಾರಕ ನಿರ್ಮಿಸಲು ಜಾಗ ನೀಡಬೇಕು. ಎನ್ ಇಪಿ ರದ್ದಾಗಬೇಕು. ಪಿಎಂ ಫಸಲ್ ಭೀಮಾ ಯೋಜನೆ ರದ್ದುಗೊಳಿಸಿ ಎಲ್ಲ ಬೆಳೆಗಳಿಗೂ ವಿಮೆ ನೀಡುವ ಸಮಗ್ರ ಸಾರ್ವಜನಿಕ ವಿಮಾ ಯೋಜನೆ ಜಾರಿ ಮಾಡಬೇಕು. ರೈಲ್ವೆ ಖಾಸಗೀಕರಣ ನಿಲ್ಲಿಸಬೇಕು ಎನ್ನುವುದು ಸೇರಿದಂತೆ ಸುಮಾರು 24 ಬೇಡಿಕೆಗಳ ಈಡೇರಿಕೆಗಾಗಿ ಧರಣಿ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಕರ್ನಾಟಕ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮಲ್ಲಪ್ಪ ಬಮ್ಮನಹಳ್ಳಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶಾಂತಗೌಡ ಮಣೂರ, ಯುವ ಘಟಕದ ತಾಲೂಕಾಧ್ಯಕ್ಷ ದಯಾನಂದ ಟಿಂಗಳೆ, ನಾಗಣ್ಣ ಬಿರಾದಾರ, ಕುಬೇರ ಬಿರಾದಾರ, ಚಿನ್ನುಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!