‘ಊರು ಕೇರಿ’: ಆಕಾಶದಗಲಕ್ಕೂ ನಿಂತ ಆಲವೇ..

695

ಅಗಲಿದ ಹಿರಿಯ ಕವಿ ಡಾ.ಸಿದ್ಧಲಿಂಗಯ್ಯನವರ ಆತ್ಮಕಥೆ ‘ಊರು ಕೇರಿ’ ಕುರಿತು ವಿಮರ್ಶಕ ಡಾ.ವಿನಯ ನಂದಿಹಾಳ ಅವರು ಬರೆದ ಲೇಖನ..

ಕವಿ‌ ಸಿದ್ದಲಿಂಗಯ್ಯನವರ ಆತ್ಮಕಥನ ಊರುಕೇರಿಯ ಮೂರು ಭಾಗಗಳು ಅವಲೋಕಿಸಿದಾಗ, ತನಗೆ ದಕ್ಕಬೇಕಾದ ಸಮಾನತೆ ಮತ್ತು ನ್ಯಾಯವನ್ನು ಪಡೆದುಕೊಳ್ಳುವ ಒಂದು ವಿಶಿಷ್ಟ ‌ಪ್ರಕ್ರಿಯೆ ಇಲ್ಲಿದೆ. ಪಡೆದುಕೊಳ್ಳುವುದು ಸುಲಭವಾಗಿ ಇರದಿದ್ದಾಗ ಅದನ್ನು ಕಿತ್ತುಕೊಂಡು ತನ್ನ ಅಸ್ಮಿತೆಯನ್ನು ಸಾಧಿಸುವ ದೃಢ ವ್ಯಕ್ತಿತ್ವ ಇಲ್ಲಿದೆ. ವೈಯಕ್ತಿಕ ಬೆಳವಣಿಗೆಯೊಂದಿಗೆ ಇಡೀ‌ ಸಮುದಾಯವನ್ನು ಕರೆದೊಯ್ಯುವುದು ಕೇವಲ‌ ಮಾತಾಗಿರದೆ, ಕ್ರಿಯೆಯಾಗಿದ್ದು ಮಹತ್ವದ್ದು. ಸಿದ್ದಲಿಂಗಯ್ಯನವರ ಕವಿತೆಗಳಲ್ಲಿನ ಕಿಚ್ಚು ಇದರಲ್ಲಿ ಕಾಣದಿದ್ದರು, ಅದರ ಕಾವು ತೀವ್ರವಾಗಿದೆ.‌ ಕವಿತೆಯಲ್ಲಿ‌ ನೇರವಾಗಿ ವಿರೋಧಿಸುವ ಕವಿ, ಇಲ್ಲಿ ನಿರ್ಲಿಪ್ತವಾಗಿ ನಿರೂಪಣೆ‌ ಮಾಡಿರುವ ಕ್ರಮ ಅವರ ಬದಲಾವಣೆಗೆ ಭಿನ್ನ ಮತ್ತು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿರುವಂತೆ ಕಾಣುತ್ತದೆ.

ಈ ಲೋಕ ಯಾರನ್ನು ಕೀಳಾಗಿ ಕಂಡು ದೂರ ಇಟ್ಟಿತ್ತೊ, ಅದೇ ಏನನ್ನೂ ಕಳೆದುಕೊಂಡಿದೆ ಎಂಬ ಭಾವ ಇಲ್ಲಿದೆ. ಹೀಗಾಗಿ ತಮ್ಮ ನೋವುಗಳನ್ನು ಹಾಡಾಗಿಸುವ ಕವಿ ವೇದನೆಯನ್ನು ಸಂವೇದನೆಯನ್ನಾಗಿಸುತ್ತಾರೆ. ವೇದನೆಗೆ ಅವರ  ಮುಖಾಮುಖಿ ಇತರರಗಿಂತ ಭಿನ್ನವಾಗಿದೆ. ಆ ಬದುಕಿನ ಪ್ರತಿ ಹಂತದಲ್ಲಿಯೂ ಆ ಸಂವೇದನೆಯನ್ನು ಕಳೆದುಕೊಳ್ಳದಿರುವುದು ಅವರ ಶಕ್ತಿಯಾಗಿದೆ. ವ್ಯಕ್ತಿ ಕೇಂದ್ರವಾದ ಆತ್ಮಕಥೆ ಇದಲ್ಲ. ಹೀಗಾಗಿ ಒಟ್ಟು ಆ ಸಂದರ್ಭದಲ್ಲಿ ಸಾಮಾಜಿಕ‌ ಮತ್ತು ಸಾಂಸ್ಕೃತಿಕ ‌ಲೋಕವನ್ನು  ತೆರೆದಿಡುವ ಕೃತಿಯಾಗಿದೆ.

ದಲಿತ ಬಡ ಹುಡಗನೊಬ್ಬನ ಜೀವನ ಪಯಣ ಇದು ಎಂದು ಎನಿಸಿದರು, ಈ ಆತ್ಮಕಥನ ತೆರೆದರಿಡುವ ಜಗತ್ತು ಕೆಲವೊಮ್ಮೆ ಬೆಚ್ಚಿಬಿಳುಸುತ್ತದೆ. ಬಾಲ್ಯದಲ್ಲಿ ನೆನಪುಗಳನ್ನು ಅಪ್ಪನ ನೊಗ ಹೊತ್ತು ದುಡಿಮೆ ಮಾಡುತ್ತಿರುವುದು ಕವಿಯ ಮನಸ್ಸಿನ ಮೇಲೆ ಬೀರಿದ ಪ್ರಭಾವ ಅಪಾರ. ಹೀಗಾಗಿ ಇಂತಹ ನೋವುಗಳಿಂದ ಪಾರಾಗಲು ಅವರು ಪ್ರಯತ್ನಿಸಿ‌ ಮೊರೆ ಹೋಗಿದ್ದು ಅಕ್ಷರ ಲೋಕಕ್ಕೆ. ಆ ಲೋಕದಿಂದ ಪಡೆದುಕೊಂಡ ವಿದ್ಯೆಯನ್ನು ತನ್ನ ಅನುಭವದೊಂದಿಗೆ ಸೇರಿಸಿ ಶೋಷಿತ ಜಗತ್ತಿನ್ನು ಅನಾವರಣಗೊಳಿಸಿದರು. ಶೋಷಣೆ ಮಾಡುವವರಿಗೆ ತಮ್ಮ ಕವಿತೆಗಳ ಮೂಲಕ ತೀವ್ರವಾಗಿ ಪ್ರತಿಕ್ರಿಯಿಸಿದರು. ಎಷ್ಟರ ಮಟ್ಟಿಗೆ ಇವರ ಪ್ರತಿಕ್ರಿಯೆ ಗಟ್ಟಿಯಾಗಿರುತಿತ್ತು ಎಂದರೆ ಅವರ ಸಮಾನ ಮನಸ್ಕರರೆ ಇದರಿಂದ ತೊಂದರೆ ಆಗಬಾರದೆಂದು ಅವರ ಕವಿತೆಗಳನ್ನು ಸುಟ್ಟು ಹಾಕುತ್ತಾರೆ. ಬಾಲ್ಯದಲ್ಲಿ ಕಂಡ ಅಪ್ಪನ ದುಡಿಮೆ, ಅವ್ವನ ಪ್ರೀತಿ, ಹಸಿವು, ಸಾಲ, ಇವೆಲ್ಲದಕ್ಕಿಂತಲೂ ಹೆಚ್ಚು ಸವರ್ಣಿಯರ ಶೋಷಣೆ ಇವು ಅವರ ಅನುಭವದ ಭಾವವಾಗಿ ಕೊನೆಯವರೆಗೂ ಉಳಿದವು. ಅವರ ಬೆಳವಣಿಗೆಯಲ್ಲಿ ಅಜ್ಜ ಅಳವಡಿಸಿಕೊಂಡ ಗಾಂಧಿಯ ಪ್ರಭಾವ, ಜಾನಪದ ಸತ್ವದ ಅಜ್ಜಿ ಆರಂಭದಲ್ಲಿ ಪ್ರಭಾವ ಬೀರಿದರು ಸಹ ಅವರು ಮೇಲೆ ಹೆಚ್ಚು ಪ್ರಭಾವವಾಗಿದ್ದು ಅಂಬೇಡ್ಕರ್ ಚಿಂತನೆ. ಈ‌ ಎಲ್ಲ ಕಾರಣಗಳಿಗಾಗಿ ಎಲ್ಲೆ ಅನ್ಯಾಯ ನಡೆದಾಗ ಅದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸುವ ಮನಸ್ಸು ಅವರದಾಗಿತ್ತು.

ಬೆಂಗಳೂರಿಗೆ ಬಂದ ಮೇಲೆ ಅದನ್ನು ಸೂಕ್ಷ್ಮವಾಗಿ ಗಮನಿಸುತ್ತ ಆ ಪರಿಸರವನ್ನು ಕಟ್ಟಕೊಟ್ಟ ರೀತಿ ನಮ್ಮ ಮುಂದೆ ಯಾರೊ‌ ಕುಳಿತು ಕಥೆ ಹೇಳುತ್ತಿದ್ದಾರೆ ಎನಿಸುತ್ತದೆ. ಆ ಸುತ್ತಲಿನ ಪರಿಸರವನ್ನು ಹೇಳುತ್ತ ತಮ್ಮತನವನ್ನು ಅಲ್ಲಿ ಎತ್ತಿ ಹಿಡಿಯುತ್ತಿದ್ದರು. ಈ ಕ್ರಮ ಮೂರು ಭಾಗಗಳಲ್ಲಿ ಕಾಣಬಹುದು. ಓದು ಮುಂದುವರೆದ ಹಾಗೆ ಅವರಲ್ಲಿ‌ ಆಗುವ ಬದಲಾವಣೆ ವೈಚಾರಿಕತೆಯಿಂದ ಕೂಡಿತು. ಹೀಗಾಗಿ ಪ್ರಶ್ನೆಗಳನ್ನು ಅವರು ನಿರಂತರವಾಗಿ ಎತ್ತತೊಡಗಿದರು. ಕಾಲೇಜಿನ ದಿನಗಳಲ್ಲಿ‌ ನಾಯಕತ್ವ ಗುಣಗಳನ್ನು ಬೆಳಸಿಕೊಂಡು ಅಲ್ಲಿಯ ಚುನಾವಣೆಯಲ್ಲಿ ಗೆಲ್ಲುವುದು ಅವರ ಹೋರಾಟಕ್ಕೆ ಮುನ್ನುಡಿಯಂತೆ ಕಾಣುತ್ತದೆ. ವಿಚಾರವಾದಿ ಪರಿಷತ್ತು ಸ್ಥಾಪಿತವಾಗಿದ್ದು ಸಹ ಅವರ ವೈಚಾರಿಕ ಜೀವನದ ಮುಖ್ಯ ಅಂಶಗಳಲ್ಲಿ ಒಂದು.

ಕವಿ ಡಾ.ಸಿದ್ಧಲಿಂಗಯ್ಯನವರ ಜೊತೆ ವಿಮರ್ಶಕ ಡಾ.ವಿನಯ ನಂದಿಹಾಳ

ಅಷ್ಟೊಂದು ತೀವ್ರ ನೋವುಗಳನ್ನು ಹಾಸ್ಯದ ದಾಟಿಯಲ್ಲಿ ಹೇಳುವುದು ಅವರ ಧೈರ್ಯದ ಸಂಕೇತವಾಗಿ ಕಾಣುತ್ತದೆ. ಅವರ ಮಾಗುವಿಕೆಯ ಕ್ರಿಯೆಯಾಗಿ ಅದು ಗೋಚರವಾದರು ಸಹ ಅಷ್ಟು ಸುಲಭದ ಕ್ರಿಯೆಯಾಗಿರಲಿಲ್ಲ. ಆತ್ಮಕಥನ ಓದುವಾಗ ಬಹಳ ಕಡೆ ನಗು ಬಂದರು ಸಹ ಅದರ ಹಿಂದಿನ ನೋವು ತಟ್ಟದೆ ಇರದು. ಹಾಸ್ಯದ‌ ಮೂಲಕ ಹಲವು ದುರಂತಗಳನ್ನು ಅವರ ಹೇಳುತ್ತಾರೆ. ಈ ಸಮಾಜದ ಅಜ್ಞಾನವನ್ನು ತಿಳಿಸಿ ಅದಕ್ಕೆ ಕಾರಣಗಳನ್ನು ಹುಡುಕುತ್ತಾರೆ, ಪರಿಹಾರ ರೂಪದ ಹಲವು ಮಾದರಿಗಳನ್ನು ಎದುರಿಗಿಡುತ್ತಾರೆ. ಇಲ್ಲದವರ ಪರ ಧ್ವನಿಯಾಗಿ ನಿಲ್ಲುವ ಇರುವ ಅದನ್ನು ತಣ್ಣನೆ ಚಲನೆಯಲ್ಲಿ ಇಲ್ಲಿ ಪ್ರಸ್ತುತಪಡಿಸುತ್ತಾರೆ. ಅನಕ್ಷರಸ್ಥ ಸಮುದಾಯದಿಂದ ಬಂದು ಇಡೀ ತನ್ನ ಸುತ್ತಲಿನ ಸಮಾಜವನ್ನು ಗ್ರಹಿಸಿ ಅದಕ್ಕೆ ಪ್ರತಿಕ್ರಿಯಿಸುವ ಕ್ರಿಯೆಯ ಅವರ ಬರವಣಿಯಾಗಿತ್ತು. ಜಾತಿ ವಿರೋಧ, ಮೌಢ್ಯದ ವಿರೋಧ ಒಟ್ಟು ಅಸಮಾನತೆಯ ವಿರುದ್ದ ಅವರ ತೀವ್ರ ಹುಡಕಾಟ ಬೇರೆ ಸಮುದಾಯಗಳ ಶೋಷಿತರು‌ ಮತ್ತು ಶೋಷಣೆಯನ್ನು ಅರ್ಥ ಮಾಡಿಕೊಳ್ಳಲು‌ ಸಹಾಯಕವಾಯಿತು. ಶೋಷಣೆಯ ವಿವಿಧ ಮುಖಗಳನ್ನು ಅವರು ಕಂಡಿದ್ದರಿಂದ ತಮ್ಮ ಜೀವನದ ಎಲ್ಲ ಹಂತಗಳಲ್ಲಿಯೂ ಸಹಾಯ ಅರಿಸಿಕೊಂಡು ಬಂದವರಿಗೆ ಅವರು ಸಹಾಯ ಮಾಡಿದರು. ಒಮ್ಮೆ ಅವರು ಬಾಡಿಗೆಗೆ ಮನೆ ಹಿಡಿಯಲು ಹೋದಾಗ ಆ ಮನೆಯ ಮಾಲಿಕ ಇವರ ಜಾತಿ ಕೇಳಿ ಅದನ್ನು ನೀಡಲು ನಿರಾಕರಿಸುತ್ತಾನೆ. ಆಗ ‘ದಲಿತಕೇರಿಯಿಂದ ಎಲ್ಲ ಜಾತಿಯ ಜನ ವಾಸಿಸುವ ಊರಿಗೆ ಹೋಗುವ ನನ್ನ ಪ್ರಯತ್ನ ವಿಫಲವಾಗಿತ್ತು’ ಎನ್ನುತ್ತಾರೆ. ಇದು ಭಿನ್ನವಾಗಿ ವೈಯಕ್ತಿಕತೆ ಮೀರಿ ಸಮುದಾಯಕ್ಕೆ ಅನ್ವಯವಾಗುತ್ತದೆ. ಅವರು ಕೇರಿಯಿಂದ ಊರಿ ಸೇರಿದರಾ ಎನ್ನುವ ಪ್ರಶ್ನೆಗೆ ಉತ್ತರಗಳನ್ನು ಹುಡುಕಬೇಕು. ಆ ಮನೆಯಿಂದ ಹೊರ‌ ಬರುವಾಗ ಆ ಮನೆ ಮಾಲೀಕನಿಗೆ ಸಹಜ ಎಂಬಂತೆ ಕೈಮುಗಿದು ಹೊರಬರುತ್ತಾರೆ. ಇವರು ಇನ್ನೂ ಬದಲಾಗಿಲ್ಲ ಎಂದುಕೊಳ್ಳುತ್ತಾರೆ. ಆ ವ್ಯಕ್ತಿಯಲ್ಲಿ ಸಮುಷ್ಟಿಯ ಪ್ರಜ್ಞೆ ಉಂಟುಮಾಡಿರುವ ಅನಿವಾರ್ಯತೆಯ ಬಗ್ಗೆ ಇವರಿಗೆ ಕನಿಕರವಿದೆ. ಇದು ಅವರ ಒಟ್ಟು ‌ಮಾಗವಿಕೆಯ‌ ಪ್ರಕ್ರಿಯೆಯಾಗಿ ಮತ್ತು ಹೃದಯದ ಫಲವತ್ತೆಯ ಹಾಗೆ ಕಾಣುತ್ತದೆ. ಅವರ ಭೌತಿಕ ಚಹರೆ ನೋಡಿ ಪ್ರತಿಬಾರಿಯೂ ವಿವಿಧ ಸಂದರ್ಭದಲ್ಲಿ ತಡೆದಾಗ ಆಗುವ ನೋವು ಅಪಾರ, ಅದನ್ನು ಸಹ ಲಘುವಾಗಿ ತಗೆದುಕೊಂಡು ಎದುರಿನ ಬುದ್ದಿಯ ಬಗ್ಗೆ ಅವರಿಗೆ ಅನುಕಂಪವಿದೆ ಹೊರತು ಸಿಟ್ಟಿಲ್ಲ.‌ ಇಂತಹ ಸಂದರ್ಭಗಳನ್ನು ಅವರು ಹೇಳುವಾಗ ಸಂತತನ ಅವರನ್ನು ಆವರಿಸಿಕೊಂಡಂತೆ ಕಾಣುತ್ತದೆ.

ಈ ಆತ್ಮಕಥನದಲ್ಲಿ‌ ಡಿ‌ಆರ್ ನಾಗರಾಜ್ ಅವರಿಂದ ಹಿಡಿದು ಹಲವು ವ್ಯಕ್ತಿಗಳ ಚಿತ್ರಣ ಸಿಗುತ್ತದೆ. ಅಂತವರೆಲ್ಲರ ಜೊತೆ ಸೇರಿ ಕರ್ನಾಟಕ ಸಾಂಸ್ಕೃತಿಕ ಜಗತ್ತನ್ನು ಕಟ್ಟಿದರಲ್ಲಿ ಇವರು ಪ್ರಮುಖರಾಗುತ್ತಾರೆ. ವಿಚಾರವಾದಿ ಪರಿಷತ್ತು, ದಲಿತ ಸಂಘರ್ಷ ಸಮಿತಿ, ಬಂಡಾಯ ಚಳುವಳಿಗಳನ್ನು ಕಟ್ಟಿದ ಕ್ರಮ, ಅವುಗಳ ಅವಶ್ಯಕತೆ, ಅವು ರೂಪಗೊಳ್ಳವಲ್ಲಿ ನಡೆದ ಘಟನೆಗಳನ್ನು ಸೂಗಸಾಗಿ ನಿರೂಪಿಸಿದ್ದಾರೆ. ಈ ನಿರೂಪಣೆ ಹೇಗೆ ಇದೆ ಎಂದರೆ ನಾವು ಅದರ ಭಾಗವಾಗಿರಬೇಕಿತ್ತು ಎನಿಸುತ್ತದೆ. ಅಂತರಂಗಕ್ಕೆ ಬಹಳ ನಿಷ್ಠವಾಗಿದ್ದ ಇವರು ಸಮಾಜದ ಕಡೆಯ ವ್ಯಕ್ತಿಯಿಂದ ಮುಖ್ಯಮಂತ್ರಿಯವರೆಗೆ ಸ್ನೇಹವನ್ನು ಸಂಪಾದಿಸಿದರು. ಇವರ ಸ್ನೇಹ ಅವರು ಸಂಪಾದಿಸಿದರು ಎನ್ನಬಹುದು. ಏನೆ ಆದರೂ ಎಲ್ಲರೊಡನೆ ಏಕೋಭಾವದಿಂದ ವರ್ತಿಸುತ್ತಿದ್ದ ಇವರ ವಿಶಾಲ‌ ಮನೋಭಾವನಯನ್ನು ಸೂಚಿಸುತ್ತದೆ. ಹೋರಾಟ ಹೇಗೆ‌‌ ಮಾಡಬೇಕು, ಹೋರಾಟಗಾರ ಹೇಗಿರಬೇಕು ಎಂಬುದಕ್ಕೆ ಇವರು‌ ಮಾದರಿಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!