ಕಪ್ಪ ನೆಲೆಯ ಜನರ ಎದೆಯ ಕಡುಕಪ್ಪುಹವಳ ಸಿದ್ಧಲಿಂಗಯ್ಯ

514

ನಾಡಿನ ಹಿರಿಯ ಕವಿ ಡಾ.ಸಿದ್ಧಲಿಂಗಯ್ಯನವರ ಕುರಿತು ಲೇಖಕ ಹಾಗೂ ಅವರ ಒಡನಾಡಿಗಳಲ್ಲಿ ಒಬ್ಬರಾದ ಮಲ್ಕುಂಡಿ ಮಹದೇವಸ್ವಾಮಿ ಅವರು ಬರೆದ ವಿಶೇಷ ಲೇಖನ..

ನನಗೆ ಅವರು ಹೇಳುತ್ತಿದ್ದ ಕಥೆಗಳಲ್ಲಿ ನನ್ನ ಬದುಕನ್ನು ಅತ್ಯಂತ ಗಂಭೀರವಾಗಿ ಕಾಡಿದ ಎರಡು ಕಥೆಗಳನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಬೇಕು.

ಕತೆ ಒಂದು:

ಅಕ್ಕ ಪಕ್ಕದಲ್ಲಿ ಒಂದು ಕಡೆ ಗೆಜ್ಜಗಾರಿ ಕಬ್ಬಿಣವನ್ನು  ಮತ್ತೊಂದು ಕಡೆ ಅಕ್ಕಸಾಲಿ ಚಿನ್ನವನ್ನು ಬಡಿಯುತ್ತಿದ್ದರು. ಚಿನ್ನ ಮೌನವಾಗಿತ್ತು. ಆದರೆ ಕಬ್ಬಿಣ ಜೋರಾಗಿ ಚೀರಾಡುತ್ತಿತ್ತು. ಈ ಕಬ್ಬಿಣದ ಚೀರಾಟವನ್ನು ಕೇಳಿಸಿಕೊಳ್ಳಲಾರದೆ, ಚಿನ್ನ ಕಬ್ಬಿಣಕ್ಕೆ ಹೇಳಿತು; ಕೇಳು ನಿನ್ನನ್ನು ಬಡಿಯುತ್ತಿದ್ದಾರೆ. ನನ್ನನ್ನು ಬಡಿಯುತ್ತಿದ್ದಾರೆ. ನಾ ನೋಡು ನೋವನ್ನು ಸಹಿಸಿಕೊಂಡು ಚೀರಾಡದೆ ಎಷ್ಟೊಂದು ಮೌನವಾಗಿದ್ದೇನೆ. ಯಾಕೆ..? ನೀನು ಇಷ್ಟೊಂದು ಚೀರುತ್ತೀಯೇ? ಸುಮ್ಮನಿರು, ಎಂದಿತು. ಕಬ್ಬಿಣ ಉತ್ತರಿಸುತ್ತಾ ನೋಡು! ನೀನು ಚಿನ್ನ. ನಿನ್ನನ್ನು ಬಡಿಯುತ್ತಿರುವವನು ಕಬ್ಬಿಣ. ನಿನಗೇ ನೋವಾಗದೆ ಇರಬಹುದು. ಆದರೆ ನಾನು ಕಬ್ಬಿಣ. ನನ್ನನ್ನು ಬಡಿಯುತ್ತಿರುವವನು ಕಬ್ಬಿಣವೇ. ನನ್ನ ಭಾವನೆ ನನ್ನವನೇ ಬಡಿಯುತ್ತಿದ್ದಾನಲ್ಲಾ ಎಂಬ ವೇದನೆಗಾಗಿ ನಾನು ಚೀರಾಡುತ್ತಿದ್ದೇನೆ. ಬೇರೆಯವರು ಬಡಿದಾಗ ಆಗುವ ನೋವಿಗಿಂತ ನಮ್ಮವರೇ, ನಮ್ಮನ್ನು ಬಡಿದಾಗ ಆಗುವ ನೋವು ಗಂಭೀರ. ಇದು ಬರೀ ನೋವಲ್ಲ ನೋವಿನ ಆಚೆಗಿನ ವೇದನೆ. ಇದು ಇಂದು ಎಲ್ಲಾ ಜಾತಿ ಧರ್ಮ ಸಮುದಾಯಗಳೊಳಗೂ ಅತ್ಯಂತ ಗಂಭೀರವಾಗಿ ಕಾಡುತ್ತಿದೆ.

ಕತೆ ಎರಡು:

ದಲಿತರ ನೋವು ಎಂತದ್ದು ಅಂತಾ ಗೊತ್ತಾ? ಒಮ್ಮೆ ಒಂದು ಹಳ್ಳಿಯಲ್ಲಿ ದಲಿತ ವ್ಯಕ್ತಿಯ ಮೇಲೆ ಹಲ್ಲೆಯಾಗಿತ್ತು. ತಲೆ ಹೋಳಾಗಿ ರಕ್ತಸ್ರಾವವಾಗಿತ್ತು. ರಕ್ಷಣೆ ಕೋರಿ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋದ. ಪೊಲೀಸ್ ನವರು ನಿನ್ನದೊಂದು ಫೋಟೋ ತೆಗೆಸಿಕೊಂಡು ಬಾ ಎಂದರು. ಸ್ಟುಡಿಯೋ ನಲ್ಲಿ ಫೋಟೊ ತೆಗೆಯುವಾಗ ಫೋಟೋಗ್ರಾಫರ್ ಸ್ವಲ್ಪ ‘ನಗಿ’ ಎಂದ. ಕಟ್ಟಿದ ಆ ಬ್ಯಾಂಡೆಜ್ ಅಸಹಾಯಕತೆ ನೋವು ಸಂಕಟದಲ್ಲಿಯೂ ನಕ್ಕ. ಇದು ದಲಿತರ ನಗು. ಒಡಲಾಳದಲ್ಲಿ ಎಷ್ಟೇ ದುಃಖ ನೋವುಗಳಿದ್ದರೂ ಸಮಾಜ ಯಾವಾಗ ಬೇಕಿದ್ದರು ನಗಿಸುತ್ತದೆ ಮತ್ತು ಅಳಿಸುತ್ತದೆ. ಈ ನಗುವ ಫೋಟೋವನ್ನು ನೋಡಿದ ಪೊಲೀಸರು ದೂರು ದಾಖಲಿಸಲಿಲ್ಲ. ನ್ಯಾಯಾಲಯಕ್ಕೆ ಪ್ರಕರಣ ಹೋಗಲಿಲ್ಲ. ಇದು ಹೀಗೆಯೆ ನಕ್ಕಂತೆ ನರ್ತಿಸಿ ಜೀವಿಸುವ ಈ ಬದುಕು ನಿರ್ದಯ. ಶತಮಾನದ ಸಂಕಟಗಳ ಕೆತ್ತನೆ.

ತಲೆಮಾರುಗಳ ಕಿಚ್ಚಿನ ಪಂಜು. ಬರಿ ಕತ್ತಲು, ಕಡುಕತ್ತಲು. ಬರಿ ಮೋಡ, ಕಾರ್ಮೋಡ. ಕಡಲು, ಆಕಾಶ, ನೀಲಿ, ಕರಗಾಲಾರದ ಬಂಡೆ. ಕಂಡಾಯದ ಮೆರವಣಿಗೆ. ಕಪ್ಪು ಧೂಳ್ತವ ಹರಡಿ ಕ್ರಾಂತಿಯನ್ನು ಜನರೆದೆಯೊಳಗೆ ಬಿತ್ತಿದ ಕಾಲ. ಯಾವ ವೇದ ಶಾಸ್ತ್ರ ಪುರಾಣಗಳಲ್ಲಿಯೂ ಪ್ರತಿನಿಧಿಸದ ನೋವು ಮೊದಲ ಬಾರಿಗೆ ಕಾವ್ಯವಾಗಿ ಮೂಡಿತ್ತು. ಕಾವ್ಯದಲ್ಲಿ ರಮಣೀಯತೆ ಮರೆಯಾಗಿ ಬೆವರಿನ ವಾಸನೆ ಕಾಣಿಸಿಕೊಂಡಿತು. ಹೃದಯ ಕಂಪನಗಳ ಶಬ್ದಕ್ಕಿಂತ ಭೂಕಂಪನದ ಶಬ್ದ ಕೇಳಿಸಲಾರಂಬಿಸಿತು. ಸಂಘಟನೆ ಪ್ರತಿಭಟನೆಗಳು, ಬರಡು ಭೂಮಿಯಲ್ಲಿ ಮೊಳೆತು, ಊರು ಕೇರಿಗಳಲ್ಲಿ ಸುರಿಯುವ ಚಾವಣಿ, ಬೀಳುವ ಗುಡಿಸಲುಗಳಲ್ಲಿಯೂ ಗುಡುಗು. ನೋವು ಸಂಕಟ ಕಂಬನಿ ಹಸಿವು ಆಕ್ರೋಶಗಳ ನಡುವೆ “ತನ್ನ ಜನ” ಎಂದ ಆ ಪದವೇ ಕಣ್ಣಿಗೆ ಬಿದ್ದ ನಕ್ಷತ್ರವಾಗಿ. ದಲಿತ ಕವಿಯ ಜನನವಾಗಿ. ಕಪ್ಪು ಜನರೊಳೂ ಹೋರಾಟ ಉದಯವಾಯಿತು.

ಹಿರಿಯ ಕವಿ ಡಾ.ಸಿದ್ಧಲಿಂಗಯ್ಯನವರೊಂದಿಗೆ ಲೇಖಕ ಮಲ್ಕುಂಡಿ ಮಹಾದೇವಸ್ವಾಮಿ

ಕಿರಿಯ ತಲೆಮಾರನ್ನು ಅತ್ಯಂತ ಆಪ್ತತೆಯಿಂದ ಅಪ್ಪಿಕೊಳ್ಳುತ್ತಿದ್ದ ಕವಿ, ಅವರಿರುವ ಎತ್ತರಕ್ಕೆ ಎಲ್ಲರಿಗೂ ಹತ್ತಿರವಿದ್ದವರು. ಒಮ್ಮೆ ಪರಿಚಯವಾದರೆ ಅವರ ಆಪ್ತತೆ ಆರಂಭ. ಅವರ ಭೇಟಿ  ಔಪಚಾರಿಕ ಎನಿಸುತ್ತಿರಲ್ಲಲ್ಲ. ಎಲ್ಲವೂ ಆತ್ಮೀಯತೆ ಆಪ್ತತೆಯ ಭೇಟಿಗಳೆ. ಗಂಟೆಗಟ್ಟಲೆ ದಿನಗಟ್ಟಲೆ ಚರ್ಚೆ ವಿಮರ್ಶೆ ಹಳೆಯ ನೆನಪುಗಳ ಅನಾವರಣ. ಹೋರಾಟಗಳ  ಮೆಲುಕು, ತಾವು ಸವೆಸಿದ ಹಾದಿ, ಅನುಭವಿಸಿದ ನೋವುಗಳ ಯಾತನೆ, ದೊಡ್ಡವರ ಸಹವಾಸ, ಕಾವ್ಯ ಹಾಡು ಸಂವೇದನೆ ಇವೆಲ್ಲವೂ ಒಂದೇ ಸಿಟ್ಟಿಂಗ್ ನಲ್ಲಿ ಸಿಗುತ್ತಿತ್ತು. ಇಂತಹದೊಂದು ಆಪ್ತತೆ ನನ್ನ ಬದುಕಿನಲ್ಲಿ ಇವರಿಂದ 40 ವರ್ಷಗಳ ಹಿಂದಿನ ಪ್ರಪಂಚಕ್ಕೆ ಕೊಂಡ್ಯೋಯ್ಯುತ್ತದೆ.

ಕನ್ನಡ ಕಾವ್ಯ ಜಗತ್ತಿನಲ್ಲಿ ಆದಿಕವಿ “ಪಂಪ” ಆದರೆ ಭಾರತೀಯ ಸಾಹಿತ್ಯ ಜಗತ್ತಿನಲ್ಲಿ ದಲಿತ ಕವಿ ಎಂದು ನಾಮಾಂಕಿತ ತರಾದವರು “ಸಿದ್ದಲಿಂಗಯ್ಯ” ಹಾಗಾಗಿ ನಾವು ಇವರನ್ನು “ದಲಿತ ಆದಿಕವಿ” “ಹೋರಾಟದ ಹಾಡುಗಳ ಜನಕ” ವಚನ ಕಾಲದ ಅಂಬಿಗರ ಚೌಡಯ್ಯನ ನಂತರ ಈ ನೆಲದಲ್ಲಿ ಹುಟ್ಟಿದ ಬಹುದೊಡ್ಡ ಪ್ರತಿಭಟನಾತ್ಮಕ ಸಿಡಿಲು, ಕಪ್ಪು ಕಾವ್ಯ, ಆಫ್ರಿಕಾದ ಗೆರೆಗಳು ನೀಲಿ ಅಲೆಗಳ ಮೇಲೆ ಜನರ ಎದೆಗಳ ಮೇಲೆ ತೇಲಿ ಬಂದ ಕಪ್ಪು ಹವಳ ಎನ್ನಬಹುದು.

ನಾನಾಗ ಎಲ್ಲಿಯೋ ಗುರುತಿರದ ಅಗೋಚರ ವ್ಯಕ್ತಿ. “ಅಂಬೇಡ್ಕರ್ ಕಣ್ಣಿರಿಟ್ಟ ಕ್ಷಣಗಳು” ಎಂಬ ನಾನೇ ಬರೆದ ಪುಸ್ತಕದ ಜೆರಾಕ್ಸ್ ಪ್ರತಿ ಹಿಡಿದುಕೊಂಡು ಬೆಂಗಳೂರು ವಿಶ್ವವಿದ್ಯಾನಿಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರಕ್ಕೆ ಇವರನ್ನು ಹುಡುಕಿಕೊಂಡು ಸ್ನೇಹಿತರೊಡಗೂಡಿ ಹೋಗಿದ್ದೆ. ವೇದಿಕೆ ಮತ್ತು ಚಿತ್ರಪಟಗಳನ್ನು ಬಿಟ್ಟರೆ ಬಹು ಹತ್ತಿರದಿಂದ ನೋಡಿದೆ ಮೊದಲ ಕ್ಷಣ ಅದಾಗಿತ್ತು. ನಾನು ಪರಿಚಯಿಸಿಕೊಂಡು ಪ್ರತಿ ನೀಡಿದೆ. ಪುಸ್ತಕದ ತಲೆಬರಹವನ್ನು ನೋಡಿ ಮೌನವಾದರು. ಒಂದು ತಾಸಿನಲ್ಲಿ  ಎಲ್ಲವನ್ನು  ಕಣ್ಣಾಡಿಸಿ. ಈ ಪುಸ್ತಕ ತುಂಬ ಪ್ರಸಿದ್ಧಿ ಪಡೆಯುತ್ತದೆ ಎಂದರು. ನಾನು ನೀವೇ ಬಿಡುಗಡೆಗೊಳಿಸಬೇಕೆಂದೆ. ನನಗೆ ಆರು ತಿಂಗಳುಗಳ ಕಾಲ ಟೈಮ್ ಇಲ್ಲ ಎಂದರು. ಪರವಾಗಿಲ್ಲ ಕಾಯುವೆ.  ಆರು ತಿಂಗಳ ನಂತರ ದಿನಾಂಕ ನೀಡಿ ಎಂದೆ. ಸಂಜೆ ನೋಡೋಣ ಎಂದರು. ರಾತ್ರಿ ಕರೆ ಮಾಡಿ ಯಾವುದೋ ಕಾರ್ಯಕ್ರಮ ರದ್ದು ಪಡಿಸಿ, ಇಪ್ಪತ್ತೈದು ದಿನಗಳೊಳಗೆ ದಿನಾಂಕ ನಿಗದಿ ಮಾಡಿಕೊಟ್ಟರು. ಆ ನಂತರ ಆ ಕೃತಿ ಬಿಡುಗಡೆ ಬಂದು ಐಬೋಗವಾಯಿತು. ಎರಡನೇ ಮುದ್ರಣಕ್ಕೆ ಕೃತಿಗೆ ಅವರಿಂದ ಬೆನ್ನುಡಿಯೂ ಸಿಕ್ಕಿತು. ಕೃತಿ ಅವರ ಆಶಯದಂತೆ ಮನ್ನಣೆ ಪಡೆಯಿತು. ಕಾರ್ಯಕ್ರಮಕ್ಕೆ ಸಿದ್ದಲಿಂಗಯ್ಯನವರ ಕರೆಸುವುದು ಕಷ್ಟ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು ಅಸಾಧ್ಯವೆಂದರು. ಆದರೆ ಸಿದ್ದಲಿಂಗಯ್ಯನವರು ಇದೆಲ್ಲವನ್ನು ಸಾಧ್ಯಗೊಳಿಸಿದರು. ಅವರ ಒಡನಾಟದ ಪ್ರತೀಕ ಈ ನನ್ನ ಸಾಹಿತ್ಯದ ಬದುಕು.

ಕನ್ನಡ ಸಾಹಿತ್ಯ ಲೋಕ. ಕಾವ್ಯದಲ್ಲೂ ದಲಿತತ್ವವನ್ನು ಹುಡುಕಿತು. ಕನ್ನಡ ಸಾಹಿತ್ಯದಲ್ಲೂ ದಲಿತ ಸಾಹಿತ್ಯವನ್ನು ಪ್ರತ್ತೇಕಿಸಿ ದಲಿತ ಕವಿ ಬಿರುದನ್ನು ನೀಡಿತು. ಅವರೇ ಹೇಳುತ್ತಿದ್ದಂತೆ ‘ನನಗಾಗ ದಲಿತ ಅನಿಸಿಕೊಳ್ಳುವುದು ಅತ್ಯಂತ ಪ್ರೀತಿ ಮತ್ತು ಶ್ರೇಷ್ಠತೆಯ ಸಂಕೇತವೆನಿಸಿತು. ಹಾಗಾಗಿ ನಾನು ದಲಿತ ಕವಿ ಎಂದೇ ಪ್ರಸಿದ್ಧಿಯಾದೆ ಹಾಗೆ ನನ್ನನ್ನು ಕರೆದರೆ ನನಗೆ ಬಹಳ ಸಂತೋಷವಾಗುತ್ತಿತ್ತು. ಆದರೆ ಕೆಲವು ಸಾಹಿತಿಗಳಿಗೆ ದಲಿತ ಸಾಹಿತಿ, ದಲಿತ ಲೇಖಕ, ದಲಿತ ವಿಮರ್ಶಕ, ಎನಿಸಿಕೊಳ್ಳುವುದು ಅವರಿಗೆ ಮುಜುಗರವನ್ನುಂಟು ಮಾಡುತ್ತದೆ. ಆದರೆ ನಾನದನ್ನು ಅತ್ಯಂತ ಆತ್ಮೀಯವಾಗಿ ಪ್ರೀತಿಸುತ್ತೇನೆ. ನಾನು ಜನರ ನೋವು ಅಸಹಾಯಕತೆ ಅಸಮಾನತೆಗಳನ್ನೇ ಕಾವ್ಯವಾಗಿಸಿದ್ದೇನೆ.




Leave a Reply

Your email address will not be published. Required fields are marked *

error: Content is protected !!