ವಿನಯವಂತಿಕೆಯ ಹಿಮಾಲಯ

791

ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಅನುವಾದಕರು ಆಗಿರುವ ಡಾ.ಮಲರ್ ವಿಳಿ.ಕೆ ಅವರು ಕವಿ ಡಾ.ಸಿದ್ಧಲಿಂಗಯ್ಯನವರ 40 ಕವಿತೆಗಳನ್ನು ಕವಯತ್ರಿ ಮಧುಮಿತ ಅವರ ಜೊತೆ ಕೂಡಿಕೊಂಡು ಅನುವಾದ ಮಾಡಿ ಪುಸ್ತಕ ಪ್ರಕಟಿಸಿರುವ ಬಗ್ಗೆ ಬರೆದಿರುವ ವಿಶೇಷ ಲೇಖನ..

ಡಾ. ಸಿದ್ಧಲಿಂಗಯ್ಯಗುರುಗಳನ್ನು1986-87ರಲ್ಲಿ ನಾನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಓದುವಾಗ ಮೊಟ್ಟ ಮೊದಲ ಬಾರಿಗೆ ನೋಡುವ ಅವಕಾಶ ಸಿಕ್ಕಿತು. ಅಲ್ಲದೇ ಅವರು ನನ್ನ ವಿದ್ಯಾಗುರುಗಳು. ನಾನು 2001ರಲ್ಲಿ ಪದವಿ ತರಗತಿಗೆ ʼಊರುಕೇರಿʼ ಪಾಠ ಮಾಡುವಾಗಷ್ಟೇ ನನಗೆ ತಿಳಿದದ್ದು ಡಾ. ಸಿದ್ಧಲಿಂಗಯ್ಯನವರು ಎಷ್ಟು ಕಷ್ಟಪಟ್ಟು ತಮ್ಮ ಪ್ರತಿಭೆಯಿಂದ ಇಡೀ ಕರ್ನಾಟಕ, ಭಾರತ ಮಾತ್ರವಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದ್ದಾರೆ ಎಂದು. ಅದರಲ್ಲೂ ನನಗೆ ತಿಳಿದ ಹಾಗೆ ತಮಿಳುನಾಡಿನಲ್ಲಿಯೂ ಆರಾಧ್ಯ ಕವಿಗಳಾಗಿ ಮೆಚ್ಚುಗೆ ಪಡೆದಿದ್ದಾರೆ.

ಇಲ್ಲಿ ಒಂದು ಅನುಭವವನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ. ನಾನು ಮತ್ತು ತಮಿಳುನಾಡಿನ ಕವಯಿತ್ರಿ, ಅನುವಾದಕಿ ಮಧುಮಿತ ಇಬ್ಬರೂ ಸಹ ಸಿದ್ಧಲಿಂಗಯ್ಯ ಗುರುಗಳ ಕವಿತೆಯನ್ನು ಅನುವಾದಿಸೋಣ ಎಂದು ನಿರ್ಧರಿಸಿದೆವು. (ಆಗಲೇ ಮಧುಮಿತ ತಮಿಳುನಾಡಿನಲ್ಲಿ ಹಾಗೂ ಬೆಂಗಳೂರಿನ ನಯ ನಸಭಾಂಗಣದಲ್ಲಿ ಗುರುಗಳ ಕವಿತೆಯನ್ನು ಕೇಳಿ ಅವರೊಂದಿಗೆ ಮಾತನಾಡಿದ್ದ ಕಾರಣ) ಸರಿ ಗುರುಗಳ ಬಳಿ ನಾನು ಅನುವಾದದ ಬಗ್ಗೆ ಪ್ರಸ್ತಾಪಿಸಿದೆ. ಸಮ್ಮತಿ ಸೂಚಿಸಿದರು. ಅನುವಾದಿಸಿದೆವು. ಕೆಲವು ಕವಿತೆಗಳ ಪದಗಳಲ್ಲಿ ಸಂದೇಹವಿತ್ತು. ಸರ್‌ ನನಗೆ ಕತ್ತು ನೋವಿನ ಕಾರಣ ತಲೆಸುತ್ತು ಇದೆ ಆರೋಗ್ಯ ಸರಿ ಇಲ್ಲ. ವಾಸಿಯಾದ ಮೇಲೆ ನಿಮ್ಮ ಬಳಿ ಬಂದು ಕೆಲವು ಪದಗಳಸಂದೇಹವನ್ನು ಕೇಳಿ ತಿಳಿದುಕೊಂಡು ನಂತರ ಪುದುಪ್ಪುನಲ್‌ ಪ್ರಕಾಶಕರಲ್ಲಿ ಪ್ರಕಟಣೆಗೆ ಕೊಡುವೆ ಎಂದೆ. ನಿಮ್ಮ ಮನೆಯ ವಿಳಾಸ ಕೊಡಿ ನಾನೇ ನಿಮ್ಮ ಮನೆಗೆ ಬರುತ್ತೇನೆ ಎಂದರು.

ತಮಿಳಿಗೆ ಅನುವಾದವಾದ 40 ಕವಿತೆಗಳು

ಸರ್‌, ನಾನು ನಿಮ್ಮ ವಿದ್ಯಾರ್ಥಿನಿ. ನಿಮ್ಮನ್ನು ನಾನೇ ಬಂದು ನೋಡಬೇಕು ಎಂದು ವಿನಯದಿಂದ ಹೇಳಿದೆ. ಮಲರ್‌ ಶ್ರಮ ಪಡಬೇಡಿ ನಾನೇ ಬರುತ್ತೇನೆ ಎಂದು ಹೇಳಿ ಅವರ ಕಾರಿನ ಚಾಲಕರೊಂದಿಗೆ ಬಂದು ನನಗೆ ಪದಗಳ ಅರ್ಥವನ್ನು ತಿಳಿಸಿಕೊಟ್ಟರು.ಅವರೊಂದಿಗೆ ಅಂದು ನಮ್ಮ ಕುಟುಂಬದವರು ಒಂದು ಭಾವಚಿತ್ರವನ್ನು ತೆಗೆಸಿಕೊಂಡೆವು. ಇಂತಹ ವಿನಯಶೀಲ ಸರಳ ಸಜ್ಜನಿಕೆಯ ವ್ಯಕ್ತಿಯನ್ನು ನಿಜಕ್ಕೂ ನಾನು ನನ್ನ ಜೀವಮಾನದಲ್ಲಿ ಕಂಡದ್ದಿಲ್ಲ. ಕವಿತೆಗಳ ಅನುವಾದವನ್ನು ತಮಿಳುನಾಡಿನ ಪುದುಪ್ಪುನಲ್‌ ಪ್ರಕಾಶಕರಾದ ಶ್ರೀರವಿಚಂದ್ರನ್‌ ಅವರಿಗೆ ನೀಡಿದೆವು. ಅವರು ತುಂಬಾ ಸೊಗಸಾಗಿ ಪುಸ್ತಕವನ್ನು 2014ರಲ್ಲಿ ಪ್ರಕಟಿಸಿದರು ಹಾಗೂ ಅನುವಾದಿತ ಕೃತಿಯನ್ನು ಚೆನ್ನೈ ಪುಸ್ತಕ ಪ್ರದರ್ಶನದಲ್ಲಿಟ್ಟು ಗುರುಗಳ ದೊಡ್ಡ ಭಾವಚಿತ್ರವನ್ನುಹಾಕಿದ್ದರಂತೆ. ಅಲ್ಲಿಗೆ ಬಂದ ತಮಿಳುನಾಡಿನ ಗೀತೆ ರಚನೆಕಾರರಾದ ನಾ ಮುತ್ತುಕುಮಾರ್‌, ಕವಯಿತ್ರಿ ಸುಕೃತರಾಣಿ ಹಾಗೂ ತಮಿಳಿನಲ್ಲಿ ಪ್ರಸಿದ್ಧ ವಿದ್ವಾಂಸರಾದ ಮಾ.ಪೊ. ಸಿ ಅವರ ಮೊಮ್ಮಗಳಾದ ಕವಯಿತ್ರಿ ಪರಮೇಶ್ವರಿ ಇವರೆಲ್ಲರ ಜೊತೆ ಮಧುಮಿತ ಪುಸ್ತಕವನ್ನು ಬಿಡುಗಡೆಮಾಡಿಸಿ ಸಂಭ್ರಮಿಸಿದ ಭಾವಚಿತ್ರ ಹಾಗೂ ದೃಶ್ಯಸುರುಳಿಯನ್ನು ನನ್ನ ಇ–ಮೇಲ್‌ ಗೆ ಕಳುಹಿಸಿದರು. ಅದನ್ನು ಸರ್‌ ಅವರಿಗೂ ಕವಿ ಮುದಲ್‌ ವಿಜಯ್‌ ಅವರಿಗೂ ಸವಿವರವಾಗಿ ತಿಳಿಸಿ ಕಳುಹಿಸಿಕೊಟ್ಟೆ ಹಾಗೂ ಅದನ್ನು ಓದಿದ ತಮಿಳಿನ ಕವಯಿತ್ರಿ ಸುಕೃತರಾಣಿ ಅವರು ಇವರ ಕವಿತಾ ಸಂಕಲನದ ಕವಿತೆಗಳನ್ನು ಕುರಿತು ಒಂದು ವಿಚಾರ ಸಂಕಿರಣವನ್ನು ಏರ್ಪಡಿಸಬೇಕು ಎಂದರಂತೆ.

ಕವಿ ಸಿದ್ಧಲಿಂಗಯ್ಯನವರ ಜೊತೆ ಅನುವಾದಕಿ ಡಾ.ಮಲರ್ ವಿಳಿ ಕೆ ಅವರ ಕುಟುಂಬ

ಈ ಅನುವಾದಿತ ಕೃತಿಯನ್ನು ನಾನು ಕನ್ನಡದ ಹಿರಿಯ ಲೇಖಕರು ಅನುವಾದಕರು ಆಗಿದ್ದ ಶ್ರೀಶೇಷನಾರಾಯಣ ಸರ್‌ ಅವರಿಗೆ ನೀಡಿದ್ದೆ. ಅನುವಾದ ಸೊಗಸಾಗಿದೆ ಎಂದು ಹೇಳಿದ್ದರು. ತಮಿಳಿನ ಕವಿಗಳಾದ ಡಾ.ವೈರಮುತ್ತು, ಡಾ. ನಾಚಿಮುತ್ತು, ಡಾ.ಎ.ಎಸ್ ಇಳಂಗೋವನ್‌, ಡಾ.ಮ ರಾಜೇಂದ್ರನ್‌, ಕವಿ ಸುಪ್ರಭಾರತಿಮಣಿಯನ್‌ ಇವರಿಗೆಲ್ಲ ಕಳುಹಿಸಿಕೊಟ್ಟಿದ್ದೆ. ಡಾ.ವೈರಮುತ್ತುರವರು ಕವಿಯಕವಿತೆಗಳನ್ನು ಕುರಿತು ಮೆಚ್ಚುಗೆಯನ್ನು ಸೂಚಿಸಿ ಶೋಷಿತರನ್ನು ಕುರಿತು ರಚಿಸಿದ ಈ ಕವಿವರ್ಯರನ್ನು ಮೊದಲಿನಿಂದಲೂ ನಾನು ಬಲ್ಲೆ. ನನಗೆ ಪ್ರಿಯವಾದ ಕವಿ ಎಂದು ಪುಸ್ತಕ ವಿಮರ್ಶೆಯನ್ನು ಬರೆದು ಕಳುಹಿಸಿದ್ದು ಈಗಲೂ ನನ್ನಲ್ಲಿ ದಾಖಲೆಯಾಗಿ ಇದೆ. ಡಾ.ನಾಚಿಮುತ್ತುರವರು ಸಹ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಪ್ರಸಿದ್ಧ ಕನೈಯಾಳಿ ಪತ್ರಿಕೆಯ ಸಂಪಾದಕರಾದ ಮ.ರಾಜೇಂದ್ರನ್‌ ಅವರು ಪುಸ್ತಕ ಪರಿಚಯಿಸಿದ್ದರು. ಪುದುಪ್ಪುನಲ್‌ ಪತ್ರಿಕೆಯಲ್ಲಿ ನಳಿನಿ ಎಂಬುವವರು ಕವಿತಾ ಸಂಕಲನದ ಬಗ್ಗೆ ದೊಡ್ಡ ವಿಮರ್ಶಾಲೇಖನವನ್ನು ಬರೆದಿದ್ದರು.

ತಮಿಳಿನ ಕವಿತಾ ಸಂಕಲನದ ಹೆಸರು ʼಕನ್ನಡಕವಿಞರ್‌ ಸಿದ್ದಲಿಂಗಯ್ಯ‌ ನಾರ್ಪದುಕವಿದೈಗಳ್‌ʼ ಈ ಕೃತಿಗೆ ತಮಿಳು ಲೇಖಕರಾದ ಕನ್ನಡ ನಾಡಿನಲ್ಲಿದ್ದ ಪಾವಣ್ಣನ್‌ ಅವರು ಮುನ್ನುಡಿಯಲ್ಲಿ ಕವಿಗಳ ಬಗ್ಗೆ ಸುದೀರ್ಘವಾಗಿ ಕನ್ನಡ ಸಾಹಿತ್ಯ ಲೋಕವನ್ನು ಕುರಿತು ಇಲ್ಲಿನ ಸಾಹಿತ್ಯದ ಪ್ರಕಾರಗಳು ಹಾಗೂ ಚಳುವಳಿಗಳನ್ನುಕುರಿತು ಬರೆದಿದ್ದರು. ಜೊತೆಗೆ ನಾನು ಸಿದ್ಧಲಿಂಗಯ್ಯ ಎಂಬ ಕವಿಯನ್ನು ಸಾಹಿತ್ಯ ಲೋಕದಲ್ಲಿ ಪರಿಚಯಿಸಿದ ಹಿರಿಯ ಲೇಖಕರಾದ ಶೂದ್ರ ಶ್ರೀನಿವಾಸ್‌ ಸರ್‌ ಹಾಗೂ ಕವಿಗಳ ಮೊದಲ ಕವನ ಸಂಕಲವನ್ನು ಮೆಚ್ಚಿ ಹುರಿದುಂಬಿಸಿದ ಡಿ.ಆರ್‌ ನಾಗರಾಜ್‌ ಸರ್‌ ಅವರನ್ನು ಕುರಿತು ದಾಖಲಿಸಿದ್ದೆ. ತಮಿಳಿನ ಪ್ರಸಿದ್ಧ ಪತ್ರಿಕೆಗಳಾದ ತಿಣೈ, ದಿಸೈಎಟ್ಟುಂಪುದುಪ್ಪುನಲ್‌ ಪತ್ರಿಕೆಗಳೂ ಸಹ ಸಿದ್ಧಲಿಂಗಯ್ಯ ಅವರ ಕವಿತೆಗಳನ್ನು ಪ್ರಕಟಿಸಿದ್ದವು.ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಅಂಬೇಡ್ಕರ್‌ ಅಧ್ಯಯನ ಕೇಂದ್ರವು ದಕ್ಷಿಣ ಭಾರತದಲ್ಲಿನ ಸಾಹಿತ್ಯವನ್ನು ಕುರಿತು ಒಂದು ವಿಚಾರ ಸಂಕಿರಣವನ್ನು ಏರ್ಪಡಿಸಿತ್ತು.ಆ ವಿಚಾರ ಸಂಕಿರಣದಲ್ಲಿ ತಮಿಳು ಲೇಖಕರಾದ ಶ್ರೀರವಿಕುಮಾರ್‌ ಎಂಬುವವರು ಸಿದ್ಧಲಿಂಗಯ್ಯ ಅವರ ಕವಿತೆಗಳು ತಮಿಳುನಾಡಿನ ಅನೇಕ ಕವಿಗಳಿಗೆ ಪ್ರಭಾವ ಬೀರಿವೆ ಹಾಗೂ ಜನಮನ್ನಣೆ ಪಡೆದಿವೆ ಎಂಬುದರ ಬಗ್ಗೆ ಹೇಳಿದುದನ್ನು ಕೇಳಿನನಗೆ ಸಂತೋಷವಾಯಿತು. ಮಾತ್ರವಲ್ಲ ಇವರನ್ನು ಶ್ರೀಲಂಕಾದ ತಮಿಳು ಕವಿಗಳೂ ಮಚ್ಚಿಕೊಂಡಿದ್ದಾರೆ.

2018ರಲ್ಲಿ ಸಿದ್ಧಲಿಂಗಯ್ಯ ಅವರ ಕವಿತಾ ಸಂಕಲನಕ್ಕೆʼಕನವುʼ ವೇದಿಕೆಯ ಸುಪ್ರಭಾರತಿಮಣಿಯನ್‌ ಅವರು ತಿರುಪ್ಪೂರ್‌ ಶಕ್ತಿ ಪ್ರಶಸ್ತಿ ನೀಡಿದ್ದರು. ಶನಿವಾರ ಪುದುಪ್ಪುನಲ್‌ ಪತ್ರಿಕೆಯವರು ಕರೆ ಮಾಡಿ ಸಂತಾಪವನ್ನು ವ್ಯಕ್ತಪಡಿಸಿದರು. 12-06-2021ರಂದು ಡಾ. ವೈರಮುತ್ತುರವರು ಕರೆ ಮಾಡಿ ಕನ್ನಡ ಸಾಹಿತ್ಯ ಲೋಕಕ್ಕೆ ತಮಿಳುನಾಡಿನ ಪರವಾಗಿ ತಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತಾ “ತುಳಿತಕ್ಕೆ ಒಳಗಾದ ವರ್ಗಕ್ಕೆ ಸೇರಿದ ಇಂಥ ಮತ್ತೊಬ್ಬ ಪ್ರಗತಿಪರ ಕವಿರೂಪುಗೊಳ್ಳಲು ಕನ್ನಡ ಸಾಹಿತ್ಯಲೋಕವು ಇನ್ನು ಎಷ್ಟು ಕಾಲಕಾಯಬೇಕೋ” ಎನ್ನುತ್ತಾ ಕವಿಯ ಅಕಾಲಿಕಮರಣಕ್ಕೆ ಸಂತಾಪವನ್ನು ವ್ಯಕ್ತಪಡಿಸಿದರು ಹಾಗೂ ಡಾ. ನಾಚಿಮುತ್ತು ಅವರು ಸಹ ಕರೆ ಮಾಡಿ ಪ್ರಗತಿಪರ ಕವಿ ದಮನಿತರ ದನಿಯಾಗಿ ನಮ್ಮ ನಾಡಿನ ಶ್ರಮಿಕ ವರ್ಗದ ರೂಪಕವಾಗಿ ದೇಶಾತೀತ, ಭಾಷಾತೀತ ಕವಿಯಾಗಿದ್ದರು. ಅವರ ಅಗಲಿಕೆಯಿಂದ ಬಹಳ ನೋವಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ನಾನು ಸಂತಾಪವನ್ನುಸೂಚಿಸುತ್ತೇನೆ ಎಂದು ವಿಷಾದವನ್ನು ವ್ಯಕ್ತಪಡಿಸಿದರು. ತಮಿಳಿನ ಪತ್ರಿಕೆಯವರು ಸಹಕರೆ ಮಾಡಿ ವಿಚಾರಿಸಿದರು. ಕವಿ ಮತ್ತು ಲೇಖಕರು ದೇಶಕಾಲಾತೀತರು ಎಂಬುದಕ್ಕೆ ಸಾಕ್ಷಿ ನಮ್ಮ ನಿಮ್ಮೆಲ್ಲರ ಕವಿ ಸಿದ್ಧಲಿಂಗಯ್ಯ.




Leave a Reply

Your email address will not be published. Required fields are marked *

error: Content is protected !!