ಬೆಂಗಳೂರು: ಇಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ದಿನ. ಹೀಗಾಗಿ ಜನಿಸಿದ ಮಗುವಿನಿಂದ 5 ವರ್ಷದೊಳಗಿನ ಪ್ರತಿ ಮಗುವಿಗೆ ತಪ್ಪದೆ ಪಲ್ಸ್ ಪೋಲಿಯೋ ಹಾಕಿಸಬೇಕಾಗಿದೆ. ಹೀಗಾಗಿ ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು, ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ನಗರದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ 64 ಲಕ್ಷದ 65 ಸಾವಿರದ 561 ಮಕ್ಕಳಿಗೆ ಪೋಲಿಯೋ ಹಾಕಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯದ ಪ್ರತಿಯಿಂದ ಜಿಲ್ಲೆ, ನಗರ, ಪಟ್ಟಣ, ತಾಲೂಕು, ಹಳ್ಳಿ ಸೇರಿದಂತೆ ಹಲವು ಕಡೆ 33 ಸಾವಿರದ 21 ಪೋಲಿಯೋ ಬೂತ್ ಗಳನ್ನ ನಿರ್ಮಿಸಲಾಗಿದೆ. ಇದರ ಜೊತೆಗೆ ರೈಲು ನಿಲ್ದಾಣ, ಮೆಟ್ರೋ ಸ್ಟೇಷನ್, ವಿಮಾನ ನಿಲ್ದಾಣಗಳಲ್ಲಿಯೂ ಪೋಲಿಯೋ ಹನಿ ಹಾಕಲು ಕ್ರಮಗಳನ್ನ ಕೈಗೊಳ್ಳಲಾಗಿದೆ. ನಿಮ್ಮ ಸಮೀಪದ ಪೋಲಿಯೋ ಕೇಂದ್ರಗಳಿಗೆ ಹೋಗಿ 0-5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಡ್ರಾಪ್ ಹಾಕಿಕೊಂಡು ಬನ್ನಿ.