ಬಿಸಿಲುನಾಡಿನಲ್ಲಿ ಸಿಮ್ಲಾ ಸೇಬು ಬೆಳೆದ ನೇಗಿಲ‘ಯೋಗಿ’

553

ಪ್ರಜಾಸ್ತ್ರ ವಿಶೇಷ ಲೇಖನ

ಕಲಬುರಗಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ಜಿ.ಚಂದ್ರಕಾಂತ್ ಅವರು, ಸೇಬುಗೆ ಪೂರಕ ವಾತಾವರಣವಲ್ಲದ ಪ್ರದೇಶದಲ್ಲಿ ಸೇಬು ಬೆಳೆದು ಯಶಸ್ವಿಯಾದ ಮಾದರಿ ರೈತನ ಕುರಿತು ಬರೆದ ಲೇಖನ ಇಲ್ಲಿದೆ.

ಸಿಮ್ಲಾ ಸೇಬನ್ನು ಬೀದರ ಜಿಲ್ಲೆಯಲ್ಲಿಯೂ ಬೆಳೆಯಬಹುದೆಂದು ಹುಮನಾಬಾದ ತಾಲೂಕಿನ ಘಾಟಬೋರಳ ಗ್ರಾಮದ ಅಪ್ಪಾರಾವ ದಿಗಂಬರರಾವ ಭೋಸಲೆ ಅವರು ತೋರಿಸಿಕೊಟ್ಟು ಜಿಲ್ಲೆಯ ಇತರ ರೈತರಿಗೆ ಮಾದರಿಯಾಗಿದ್ದಾರೆ. ಬಡ ಕೃಷಿಕ ಕುಟುಂಬದಲ್ಲಿ ಹುಟ್ಟಿದ 51 ವರ್ಷದ ಅಪ್ಪಾರಾವ ಶಿಕ್ಷಣವನ್ನು ಏಳನೆಯ ತರಗತಿಗೇ ಮೊಟಕುಗೊಳಿಸಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಕೃಷಿಯಲ್ಲಿ ಪ್ರಯೋಗಶೀಲತೆ ಮತ್ತು ಹೊಸತನ ಕಂಡುಕೊಳ್ಳುವ ಉದ್ದೇಶದಿಂದ 1992ರಲ್ಲಿ ವಿವಿಧ ರಾಜ್ಯ ಮತ್ತು ನಗರಗಳ ಪ್ರವಾಸಗೈದು ಸೇಬು ಬೆಳೆಯ ಮಾಹಿತಿ ಸಂಗ್ರಹಿಸಿದರು. ನಂತರ ತಮ್ಮ ಒಂದು ಎಕರೆ ಕೆಂಪು ಮತ್ತು ಬರಡು ಭೂಮಿಯಲ್ಲಿ ಹಿಮಾಚಲ ಪ್ರದೇಶ ಸಿಮ್ಲಾದ ಹೆಚ್‌ಆರ್‌ಎಂಎನ್-99(ಹರಿಮನ್) ತಳಿಯ ಸೇಬನ್ನು ಯಶಸ್ವಿಯಾಗಿ ಬೆಳೆದಿದ್ದಾರೆ.

ಸೇಬಿನ ಸಸಿಗಳ ನಾಟಿಗಾಗಿ 4×5 ಅಡಿ ಆಳದ ನಾಲೆ ತೆಗೆದು 8 ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರ, 100 ಚೀಲ ಕೋಕೋವಿಟ್ ಗೊಬ್ಬರ ಮತ್ತು ಕೋನಿಕಾ ಔಷಧ ಸಿಂಪಡಿಸಿ ಭೂಮಿ ಹದಗೊಳಿಸಿದರು. ಬಳಿಕ ಹಿಮಾಚಲ ಪ್ರದೇಶದ ರೂಪೇಶ ಸುನವಾನೆಯವರಿಂದ ಪ್ರತಿ ಸೇಬಿನ ಸಸಿಗೆ 210ರೂಪಾಯಿಯಂತೆ 222 ಸಸಿಗಳನ್ನು ಖರೀದಿಸಿ, 2021ರ ನವೆಂಬರಿನಲ್ಲಿ ಗಿಡದಿಂದ ಗಿಡಕ್ಕೆ 14×14 ಅಡಿ ಮತ್ತು ಸಾಲಿನಿಂದ ಸಾಲಿಗೆ 14×14 ಅಡಿ ಅಂತರದಲ್ಲಿ ನಾಟಿ ಮಾಡಿದರು.

ಹೂವಿನ ಬೇಸಾಯಕ್ಕೆ ತೋಟಗಾರಿಕೆ ಇಲಾಖೆಯ ಸಹಾಯಧನದಿಂದ ಎರಡು ತೆರೆದ ಬಾವಿಗಳಿಗೆ ಅಳವಡಿಸಿಕೊಂಡಿರುವ ಹನಿ ನೀರಾವರಿಯಿಂದ ಪ್ರತಿದಿನ ಒಂದು ಗಂಟೆ ಮತ್ತು ಇಪ್ಪತ್ತು ದಿನಕ್ಕೊಮ್ಮೆ ಕಾಲುವೆಯ ಮೂಲಕ ಸೇಬಿನ ಸಸಿಗಳಿಗೆ ನೀರುಣಿಸುವರು. ಇವುಗಳಿಗೆ ತಂಪು ವಾತಾವರಣ ಕಲ್ಪಿಸಲು ಮಿಶ್ರಬೆಳೆಯಾಗಿ ಗಂಗಾ ತಳಿಯ ತೆಂಗನ್ನೂ ಬೆಳೆದಿದ್ದಾರಲ್ಲದೆ, ರೋಗಗಳ ಬಾಧೆ ತಡೆಗಟ್ಟಲು ಐದು ಹೈನು ದನಗಳ ತ್ಯಾಜ್ಯದಿಂದ ತಯಾರಿಸಿದ ಜೀವಾಮೃತವನ್ನು 20 ದಿನಕ್ಕೊಮ್ಮೆ ಸಿಂಪಡಿಸುವರು.

ನಾಟಿ ಮಾಡಿದ 11 ತಿಂಗಳಿಗೆ ಸಸಿಗಳ ಟ್ರಿಮ್ ಮಾಡಿದ್ದು, ಡಿಸೆಂಬರಿನಲ್ಲಿ ಹೂಬಿಟ್ಟು ಈಗ ಪ್ರತಿ ಗಿಡದಲ್ಲಿ 20-25 ಹಣ್ಣುಗಳು ಬಿಟ್ಟು ಪಕ್ವವಾಗುತ್ತಿವೆ. ಇಲ್ಲಿನ ಹವಾಗುಣಕ್ಕನುಗುಣವಾಗಿ ಸೇಬಿನ ಗಿಡಗಳು ಸಮೃದ್ಧವಾಗಿ ಏಳೆಂಟು ಅಡಿ ಎತ್ತರ ಬೆಳೆದಿವೆ. ಸೇಬಿನ ಬೇಸಾಯಕ್ಕಾಗಿ ಒಟ್ಟು 5.50 ಲಕ್ಷ ರೂಪಾಯಿ ವೆಚ್ಚವಾಗಿದ್ದು, 7-8 ಲಕ್ಷ ರೂಪಾಯಿ ಆದಾಯ ನಿರೀಕ್ಷಿಸಿದ್ದಾರೆ.

ಸಪೋಟಾ, ತೆಂಗು, ಮಾವು, ಕಿತ್ತಳೆ, ಅಂಜೂರ, ನೇರಳೆ, ಲಿಂಬೆ, ಗೋಡಂಬಿ ಗಿಡಗಳನ್ನು ಸಹ ಬೆಳೆದು ವಾರ್ಷಿಕ 12-15 ಲಕ್ಷ ರೂಪಾಯಿ ಲಾಭ ಪಡೆಯುತ್ತಿದ್ದಾರೆ. ಇವರಿಗಿರುವ ಏಳು ಎಕರೆ ಭೂಮಿಯಲ್ಲಿ ಮೊದಲು ಹೀರೇಕಾಯಿ, ಕುಂಬಳಕಾಯಿ, ಜೋಳ, ತೊಗರಿ ಮುಂತಾದ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದರು.

ನಾವು ಬೆಳೆದ ಸೇಬು ಇಲ್ಲಿನ ವಾತಾವರಣದಲ್ಲಿ ವರ್ಷಕ್ಕೆರಡು ಸಲ ಇಳುವರಿ ಕೊಡುತ್ತವೆ. ಸೇಬು ಗಿಡಗಳ ಜೀವಿತಾವಧಿ ಸುಮಾರು 25 ವರ್ಷವಿರುತ್ತದೆಯಾದರೂ ಹಿತಮಿತ ನೀರು, ಸಾವಯವ ಗೊಬ್ಬರ, ಜೀವಾಮೃತದಿಂದ ಸರಿಯಾಗಿ ನಿರ್ವಹಣೆ ಮಾಡಬೇಕಾಗುತ್ತದೆ. ನಮ್ಮ ಸೇಬು ಹೆಚ್ಚು ರುಚಿಕಟ್ಟಾಗಿದ್ದು, ಬಣ್ಣ ಅತ್ಯಾಕರ್ಷಕವಾಗಿದೆ. ಮುಂದಿನ ಬೆಳೆ ಬಂದಾಗ ಹಣ್ಣು ಮಾರಾಟದ ಯೋಚನೆಯಿದೆ. ಸೇಬಿನ ಬೆಳೆಯನ್ನು ಗಾಳಿಮಳೆಯಿಂದ ಮತ್ತು ಜಾನುವಾರುಗಳಿಂದ ಸಂರಕ್ಷಿಸುವುದಕ್ಕಾಗಿ ಪಾಲಿಹೌಸ್ ನಿರ್ಮಿಸಲು ಮತ್ತು ಹೊಲದ ಸುತ್ತ ತಂತಿಬೇಲಿ ಅಳವಡಿಸಲು ಯೋಜಿಸಲಾಗಿದೆ ಎನ್ನುತ್ತಾರೆ ಅಪ್ಪಾರಾವ ಭೋಸಲೆ.

ಸಾಂಪ್ರದಾಯಿಕವಾಗಿ ಸೇಬು ಬೆಳೆಯಲು ಬೇಸಿಗೆಯಲ್ಲಿ 21 ರಿಂದ 24 ಡಿಗ್ರಿ ಸೆಲ್ಸಿಯಸ್ ತಾಪಮಾನವಿರಬೇಕು. ಬೀದರ ಜಿಲ್ಲೆಯಲ್ಲಿ ಬೇಸಿಗೆ ತಾಪಮಾನ 35-40 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುವುದರಿಂದ ಸೇಬು ಬೆಳೆಯಲು ಜಿಲ್ಲೆಯ ಹವಾಗುಣ ಸೂಕ್ತವಲ್ಲ. ಆದರೂ ಸೇಬು ಕೃಷಿಯ ವಿಧಿವಿಧಾನಗಳನ್ನು ಸರಿಯಾಗಿ ಅಳವಡಿಸಿಕೊಂಡ ಅಪ್ಪಾರಾವ ಭೋಸಲೆ ಸೇಬನ್ನು ಯಶಸ್ವಿಯಾಗಿ ಬೆಳೆದಿದ್ದಾರೆ ಎಂಬುದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ವಿಶ್ವನಾಥ ಝಿಳ್ಳೆ ಮತ್ತು ಹಿರಿಯ ಸಹಾಯಕ ನಿರ್ದೇಶಕ ಮಾರುತಿ ಅವರ ಅಭಿಪ್ರಾಯವಾಗಿದೆ. ಏನನ್ನಾದರೂ ಹೊಸತನ ಮಾಡಬೇಕು ಅನ್ನೋ ಛಲ ಇದ್ದರೆ ಬರಡು ಭೂಮಿಯಲ್ಲೂ ಬಂಗಾರ ತೆಗೆಯಬಹುದು ಅನ್ನೋದಕ್ಕೆ ರೈತ ಅಪ್ಪಾರಾವ ಭೋಸಲೆ ಸಾಕ್ಷಿಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!