ವಾಜಪೇಯಿ ಗರಡಿಯ ಸಿನ್ಹಾ ವಿಪ್ಷಕಗಳ ರಾಷ್ಟ್ರಪತಿ ಅಭ್ಯರ್ಥಿ ಆಗಿದ್ದೇಗೆ?

839

ಪ್ರಜಾಸ್ತ್ರ ವಿಶೇಷ ಲೇಖನ

ರಾಷ್ಟ್ರಪತಿ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅವರನ್ನು ಘೋಷಿಸಲಾಗಿದೆ. ಹೀಗಾಗಿ ಟಿಎಂಸಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಯಾಕಂದರೆ ಪಕ್ಷಾತೀತವಾದ ವ್ಯಕ್ತಿ ಸ್ಪರ್ಧೆಯಲ್ಲಿರಬೇಕು ಅನ್ನೋ ವಿಪಕ್ಷಗಳ ಮಾತಿಗೆ ಸಿನ್ಹಾ ಟಿಎಂಸಿಯಿಂದ ಹೊರ ಬಂದಿದ್ದಾರೆ. ಇಂತಹ ಸಿನ್ಹಾ ರಾಜಕೀಯದ ಉತ್ತುಂಗಕ್ಕೆ ಹೋಗಿದ್ದು ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ.

ರಾಜಕೀಯಕ್ಕೆ ಬಂದ ಐಎಎಸ್ ಅಧಿಕಾರಿ:

84 ವರ್ಷದ ಸಿನ್ಹಾ ಮೂಲತಃ 1960ರ ಸಾಲಿನ ಐಎಎಸ್ ಅಧಿಕಾರಿ. ಬಿಹಾರದ ಅಶ್ವಥಾನ್ ನಲ್ಲಿ ಜನಿಸಿದ ಸಿನ್ಹಾ ಪಾಟ್ನಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಐಎಎಸ್ ಅಧಿಕಾರಿಯಾಗಿ 24 ವರ್ಷಗಳ ಸೇವೆ ಸಲ್ಲಿಸಿದ ಸಿನ್ಹಾ 1984ರಲ್ಲಿ ರಾಜೀನಾಮೆ ಸಲ್ಲಿಸಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು.

ರಾಜಕೀಯ ಪ್ರವೇಶ:

1984ರಲ್ಲಿ ಜನತಾ ದಳದ ಮೂಲಕ ಸಕ್ರಿಯ ರಾಜಕೀಯ ಶುರು ಮಾಡಿದರು. 86ರಲ್ಲಿ ಜನತಾ ದಳದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾದರು. ಮುಂದೆ 1990-91ರಲ್ಲಿ ಚಂದ್ರಶೇಖರ್ ಸರ್ಕಾರದಲ್ಲಿ ಹಣಕಾಸು ಸಚಿವರಾದರು. 1996ರಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರರಾದರು. 1998ರಲ್ಲಿ ವಾಜಪೇಯಿ ಸರ್ಕಾರದಲ್ಲಿ ಮತ್ತೊಮ್ಮೆ ಹಣಕಾಸು ಸಚಿವರಾದರು. 2002ರಲ್ಲಿ ವಿದೇಶಾಂಗ ಸಚಿವರಾದರು. ವಾಜಪೇಯಿ ಸರ್ಕಾರದ ಆರ್ಥಿಕ ನೀತಿಗಳನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಸಂಜೆ ಸಮಯದಲ್ಲಿ ಬಜೆಟ್ ಮಂಡಿಸಿ ಹೊಸತನಕ್ಕೆ ನಾಂದಿ ಹಾಡಿದ್ದರು. 1884ರಿಂದ 2018ರಲ್ಲಿ ಪಕ್ಷ ಬಿಡುವ ತನಕ ಬಿಜೆಪಿಯೊಂದಿಗೆ ಇದ್ದವರು. ಅಟಲ್ ಬಿಹಾರಿ ವಾಜಪೇಯಿ ಗರಡಿಯಲ್ಲಿ ಬೆಳೆದ ಸಿನ್ಹಾ ಸೈಡ್ ಲೈನ್ ಆಗಿದ್ದು ಮೋದಿ, ಅಮಿತ್ ಶಾ ಜೋಡಿ ಬಂದ ಮೇಲೆ.

ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಆಗಬೇಕಾಗಿತ್ತು!

ಬಿಜೆಪಿಯ ಚುಕ್ಕಾಣಿಯನ್ನು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಹಿಡಿದ ಮೇಲೆ ಅನೇಕ ಹಿರಿಯ ತಲೆಗಳು ಪರದೆ ಹಿಂದಕ್ಕೆ ಸರೆದವು. ಇವತ್ತಿನ ದೈತ್ಯ ಬಿಜೆಪಿಯ ಹಿಂದೆ ಹಗಲು ರಾತ್ರಿ ಕೆಲಸ ಮಾಡಿದವರು ಮೂಲೆಗುಂಪಾದರು. ಅಂತವರಲ್ಲಿ ಯಶವಂತ್ ಸಿನ್ಹಾ ಒಬ್ಬರು. ಒಂದು ಕಾಲದಲ್ಲಿ ಎಲ್.ಕೆ ಅಡ್ವಾನಿ ಪ್ರಧಾನ ಮಂತ್ರಿ ಕುರ್ಚಿಯ ಮೇಲೆ ಕುಳಿತುಕೊಳ್ಳಬೇಕು ಎಂದುಕೊಂಡಿದ್ದರು. ಅಡ್ವಾನಿಯವರನ್ನು ಹೀಗೆ ಸೈಡ್ ಲೈನ್ ಮಾಡಲಾಯಿತೋ ಹಾಗೇ ಸಿನ್ಹಾನಂತವರು ಸೈಡ್ ವಿಂಗ್ ಗೆ ಸರೆದರು.

ಬಿಜೆಪಿಯಿಂದ ದೂರ ಸರೆದಿದ್ದು:

2005ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಆದರು. 2009ರಲ್ಲಿ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. 2017ರಲ್ಲಿ ಜೇಟ್ಲಿ ವಿರುದ್ಧ ನೀಡಿದ್ದ ಹೇಳಿಕೆ ವಿವಾದ ಪಡೆದುಕೊಂಡಿತು. 2018ರಲ್ಲಿ ಬಿಜೆಪಿಯಿಂದಲೇ ಹೊರ ಬಂದರು. ಮೋದಿ ಆಡಳಿತ ವೈಖರಿಯನ್ನು, ಆರ್ಥಿಕ ನೀತಿಗಳನ್ನು, ಇತ್ತೀಚಿನ ನ್ಯಾಯಾಂಗ ವ್ಯವಸ್ಥೆಯ ಪರಿಸ್ಥಿತಿಯನ್ನು ಟೀಕಿಸುತ್ತಿದ್ದ ಸಿನ್ಹಾ ಬಿಜೆಪಿಯಿಂದ ಅವಮಾನ ಎದುರಿಸಿದರು. ಇದರ ಪರಿಣಾಮ 2018ರಲ್ಲಿ ಅಧಿಕೃತವಾಗಿ ಬಿಜೆಪಿಗೆ ರಾಜೀನಾಮೆ ಸಲ್ಲಿಸಿದರು. ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಡಲು ರಾಷ್ಟ್ರಮಂಚ್ ಅನ್ನೋ ಸರ್ಕಾರೇತರ ಸಂಸ್ಥೆ ಸ್ಥಾಪಿಸಿದರು. ನಂತರದ ದಿನಗಳಲ್ಲಿ ಟಿಎಂಸಿ ಪಕ್ಷ ಸೇರ್ಪಡೆಯಾದರು.

ಅಟಲ್ ಬಿಹಾರಿ ವಾಜಪೇಯಿ ಗರಡಿಯಲ್ಲಿ ಬೆಳೆದ ಸಿನ್ಹಾ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿದ್ದರು. ಈ ಬಗ್ಗೆ ಬಹಿರಂಗವಾಗಿ ಅನೇಕ ಬಾರಿ ಹೇಳಿದ್ದರು. ಆದರೆ, ಮೋದಿ, ಅಮಿತ್ ಶಾ ಪಡೆಯ ಹೊಡೆತಕ್ಕೆ ಸಿಲುಕಿ ಹೋದರು. ಅದರ ಪರಿಣಾಮ ಇಂದು ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!