ಸಿಂದಗಿಯಲ್ಲಿ ಸರ್ಕಾರಿ ನೌಕರರ ಮೇಲಿನ ಹಲ್ಲೆಗಳು ಮುಚ್ಚಿ ಹೋಗೋದ್ಯಾಕೆ?

466

ಪ್ರಜಾಸ್ತ್ರ ವಿಶೇಷ

ಸಿಂದಗಿ: ಯಾವುದೇ ಒಬ್ಬ ಸರ್ಕಾರಿ ಉನ್ನತ ಅಧಿಕಾರಿ ಸೇರಿದಂತೆ ಗುಮಾಸ್ತನವರೆಗೂ ಎಲ್ಲರೂ ಸಾರ್ವಜನಿಕರ ಸೇವೆಯಲ್ಲಿರುವವರು. ಅವರಿಗೆ ಅವರದೆಯಾದ ಸ್ಥಾನಮಾನ ಇರುತ್ತೆ. ತಪ್ಪು ಮಾಡಿದಾಗ ಕಾನೂನು ರೀತಿಯ ಶಿಕ್ಷೆಗಳು ಸಹ ಆಗುತ್ತವೆ. ಆದ್ರೆ, ಕೆಲವೊಮ್ಮೆ ಸಣ್ಣಪುಟ್ಟ ವಿಚಾರಗಳಿಗೆ ಹಲ್ಲೆ ನಡೆಸಲಾಗುತ್ತೆ. ಇಂಥಾ ಪ್ರಕರಣಗಳು ಪಟ್ಟಣದಲ್ಲಿ ಪದೆಪದೆ ನಡೆಯುತ್ತಿದ್ರೂ ಬೆಳಕಿಗೆ ಬರ್ತಿಲ್ಲ.

ಹೌದು, ಸಿಂದಗಿ ಪಟ್ಟಣದಲ್ಲಿ ಸರ್ಕಾರಿ ಅಧಿಕಾರಿಗಳು, ನೌಕರಸ್ಥರ ಮೇಲೆ ರಾಜಕೀಯ ಹಿಂಬಾಲಕರು, ಪುಡಾರಿಗಳಿಂದ ಹಲ್ಲೆ ಆದ ಘಟನೆಗಳು ನಡೆದಿವೆ. ಇದರಲ್ಲಿ ಕೆಲವು ಬೆಳಕಿಗೆ ಬಂದಷ್ಟೇ ವೇಗದಲ್ಲಿ ಮುಚ್ಚಿ ಹೋಗಿವೆ. ಇನ್ನು ಕೆಲವು ಆ ಇಲಾಖೆ ಕಚೇರಿಯ ಗೇಟು ದಾಟಿ ಆಚೆ ಬಂದೇ ಇಲ್ಲ. ಇಂಥಾ ಘಟನೆಗಳು ಹೇಗೆ ಮುಚ್ಚಿ ಹೋಗ್ತಿವೆ ಅನ್ನೋ ಪ್ರಶ್ನೆ ಜನರಲ್ಲಿ ಮೂಡಿದೆ.

ಕಳೆದ ನಾಲ್ಕೈದು ದಿನಗಳ ಹಿಂದೆ ಸರ್ಕಾರಿ ಇಲಾಖೆಯೊಂದರ ಕೆಳ ದರ್ಜೆಯ ನೌಕರನ ಮೇಲೆ ಹಲ್ಲೆ ಮಾಡಲಾಗಿದೆ. ಆ ಘಟನೆ ತಡವಾಗಿ ಹೊರಗೆ ಬಂದಿದ್ದು, ಅಲ್ಲಲಲ್ಲಿ ಗುಸುಗುಸು ಪಿಸುಪಿಸು ಮಾತುಗಳು ಕೇಳಿ ಬರ್ತಿವೆ. ಕ್ಷುಲ್ಲಕ ಕಾರಣಕ್ಕೆ ಹೊಡೆಯಲಾಗಿದೆಯಂತೆ. ಯಾವ ಕಾರಣಕ್ಕೆ ಹೊಡೆದ್ರು ಅನ್ನೋದು ಇವತ್ತಲ್ಲ ನಾಳೆ ಹೊರ ಬರುತ್ತೆ. ಆದ್ರೆ, ಸರ್ಕಾರಿ ನೌಕರನ ಮೇಲೆ ಹಲ್ಲೆ ಮಾಡಿದೆಷ್ಟು ಸರಿ? ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗೆ ಫೋನ್ ಮಾಡಿದ್ರೆ ಉತ್ತರಿಸ್ತಿಲ್ಲ.

ಈ ಘಟನೆ ಕುರಿತು ಆ ಇಲಾಖೆ ಜನರೇ ಮಾತ್ನಾಡಿಕೊಳ್ಳುವುದು ಏನಂದ್ರೆ, ಸ್ವಜಾತಿ ಅನ್ನೋ ಕಾರಣಕ್ಕೆ ರಾಜಿ ಸಂಧಾನ ಮಾಡಿ ಬಗೆಹರಿಸಲಾಗಿದೆಯಂತೆ. ಹೀಗಾಗಿ ಯಾರಿಗೂ ಗೊತ್ತಾಗಿಲ್ಲ ಎಂದು ಹೇಳಲಾಗ್ತಿದೆ. ಈ ಹಿಂದೆ ಸಹ ಇದೆ ರೀತಿಯಾಗಿವೆ. ಅಧಿಕಾರಿಗಳ ಮೇಲೆ ಹಲ್ಲೆಯಾದ್ರೂ ಅಲ್ಲೇ ಸೈಲೆಂಟ್ ಆಗಿವೆ. ಕಾರಣ, ಅವರವರು ಒಂದೇ ಅನ್ನೋ ಕಾರಣಕ್ಕೆ. ಕುವೆಂಪು ಹೇಳ್ತಾರೆ, ನಮ್ಮವರು ಚುಚ್ಚಿದರೂ ನೋವೆ ಎಂದು. ಆದ್ರೆ, ಇಲ್ಲಿ ಅಧಿಕಾರ, ತೋಳ್ಬಲ್ಕಿಂತ ಸ್ವಜಾತಿ, ಧರ್ಮ ಪ್ರೇಮದಿಂದಾಗಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ತಿದ್ರೂ ಮುಚ್ಚಿ ಹೋಗ್ತಿರುವುದು ದುರಂತವೇ ಸರಿ.




Leave a Reply

Your email address will not be published. Required fields are marked *

error: Content is protected !!