ನೈಟ್ ಕರ್ಫ್ಯೂ ನೆಪದಲ್ಲಿ ಅನ್ನದಾತನಿಗೆ ಸಿಗದ ಊಟ.. ರಾತ್ರಿಯೇ ಪ್ರತಿಭಟನೆ

586

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ನೈಟ್ ಕರ್ಫ್ಯೂ ಹಿನ್ನೆಲೆ ರಾತ್ರಿ ಊಟ ಸಿಗದ ಕಾರಣಕ್ಕೆ ಅಮರಗೋಳ ಎಪಿಎಂಸಿ ಮುಖ್ಯ‌ಧ್ವಾರದ ಎದುರಿನ ಪಿಬಿ ರಸ್ತೆ ತಡೆ ಮಾಡುವ ಮೂಲಕ ನೂರಾರು ರೈತರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ರಾತ್ರಿ ನಡೆಯಿತು.

ನವಲಗುಂದ, ನರಗುಂದ, ರೋಣ, ಕುಂದಗೋಳ, ಬಾಗಲಕೋಟೆ ಸೇರಿದಂತೆ ವಿವಿಧ ಭಾಗದಿಂದ  ಮೆಣಸಿನಕಾಯಿ ಮಾರಾಟ ಮಾಡಲು ನಗರದ ಎಪಿಎಂಸಿ ಮಾರುಕಟ್ಟೆಗೆ ನೂರಾರು ರೈತರು ಬಂದಿದ್ದರು. ಆದರೆ ರೈತರು ತಂದಿದ್ದ ಮೆಣಸಿನಕಾಯಿ ಬಿಡ್ ಆಗದೆ ವಿಳಂಭವಾದ ಕಾರಣಕ್ಕೆ ರೈತರು ಎಪಿಎಂಸಿ ಆವರಣದಲ್ಲಿಯೇ ವಾಸ್ತವ್ಯ ಹೂಡಿದ್ದರು. ಗುರುವಾರ ರಾತ್ರಿ ಊಟ ಮಾಡಲು ಎಪಿಎಂಸಿ ಬಳಿಯ ಹೋಟೆಲ್ ಗೆ ಆಗಮಿಸಿದಾಗ ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ರೈತರಿಗೆ ಊಟ ನೀಡಲು ಹೋಟೆಲ್ ಮಾಲೀಕರು ನಿರಾಕರಿಸಿದರು.

ಕಳೆದ ಮೂರು ದಿನಗಳಿಂದ‌ ನಾವು ಮೆಣಸಿನಕಾಯಿ ಮಾರಾಟ ಮಾಡಲು ಎಪಿಎಂಸಿಗೆ ಬಂದಿದ್ದೇವೆ. ಮಾರಾಟ ತಡವಾದ ಕಾರಣಕ್ಕೆ ನಾವು ಇಲ್ಲಿಯೆ ಉಳಿದುಕೊಂಡಿದ್ದೇವೆ. ಊಟ ಮಾಡಲು ಹೋಟೆಲ್ ಗೆ ಬಂದರೆ ನೈಟ್ ಕರ್ಫ್ಯೂ ನೆಪದಲ್ಲಿ ಊಟ ನೀಡದೇ ಪೊಲೀಸರು ಹೊರಗೆ ಹಾಕಿದ್ದಾರೆ. ರೈತರ ಜೊತೆ ಪೊಲೀಸರು ಮತ್ತು ಹೊಟೇಲ್ ಮಾಲೀಕರು ನಡೆದುಕೊಂಡ ರೀತಿ ಖಂಡನೀಯ ಎಂದು ರೈತರಾದ ರಸೋಲ್ ಸಾಬ್ ತಹಸೀಲ್ದಾರ, ಮಲ್ಲಪ್ಪ ಬಡಿಗೇರ, ಭೀರಪ್ಪ ಹುಣಸೀಕಟ್ಟಿ, ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕೆಲ ಹೊಟೇಲ್ ನವರು ನಮ್ಮಿಂದ ಹಣ ಪಡೆದು ಊಟ ನೀಡದೇ ಹೊರಗೆ ಹಾಕಿದ್ದಾರೆ ಎಂದು ರೈತರು ಆರೋಪಿಸಿ, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಸುಮಾರು ಅರ್ಧ ಗಂಟೆಗೂ ಅಧಿಕಕಾಲ ರೈತರು ಪಿಬಿ ರಸ್ತೆ ಬಂದ್ ಮಾಡಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ನಂತರ ಸ್ಥಳಕ್ಕೆ ಆಗಮಿಸಿದ ಪೋಲೀಸರು ಪ್ರತಿಭಟನಾ ನಿರತ ರೈತರನ್ನು ಮನವೊಲಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.




Leave a Reply

Your email address will not be published. Required fields are marked *

error: Content is protected !!