ವಚನಗಳಿಗೆ ಮರುಹುಟ್ಟು ಕೊಟ್ಟ ಮಹಾನ್ ಚೇತನ…

1226

ಸಿವ್ಹಿಲ್ ಇಂಜಿನಿಯರ್ ಆಕಾಶ ಅಶೋಕ ತಿಮ್ಮಶೆಟ್ಟಿ ಅವರು ಬರೆದ ಲೇಖನ…

ಕೆರೆಯನ್ನು ಕಟ್ಟಿಸಿ, ಸಂಘ ಸಂಸ್ಥೆಗಳನ್ನು ಸ್ಥಾಪಿಸಿ, ಶಾಲೆ ಕಾಲೇಜು ತೆರೆಸಿ, ಜನರ ಉದ್ದಾರಗೈದ ಮಹಾಪುರುಷ ಶ್ರೀ ಫ ಗು ಹಳಕಟ್ಟಿಯವರು, ಹಾಳಾಗುತ್ತಿದ್ದ 12ನೇ ಶತಮಾನದ ಬಸವಾದಿ ಶರಣರ ವಚನಗಳ ತಾಳೆಗರಿಗಳನ್ನು ಸಂಗ್ರಹಿಸಿ ರಕ್ಷಿಸಿದ ಶರಣ ಸರಳ ಜೀವಿ ಅಧುನಿಕ ವಿಜಯಪುರದ ನಿರ್ಮಾತೃ. ಕನ್ನಡದ ಕಣ್ವ ಬಿಎಂಶ್ರೀ ವಿಜಯಪುರಕ್ಕೆ ಬಂದಾಗ ಸ್ಥಳೀಯ ಸಾಹಿತಿಯೊಬ್ಬರು ಗೋಳಗುಮ್ಮಟ ನೋಡಲು ಕರೆದುಕೊಂಡು ಹೋರಟರು. ಆದರೆ ಬಿಎಂಶ್ರೀ ಮೊದಲು ನನ್ನನ್ನು ವಚನ ಗುಮ್ಮಟಕ್ಕೆ ಕರೆದೊಯ್ಯಿರಿ ಎಂದರು. ಇಂಥಾ ಮಹಾನ್ ಚೇತನದ 139ನೇ ಜನ್ಮದಿನ.

ಫಕೀರಪ್ಪ ಗುರಬಸಪ್ಪ ಹಳಕಟ್ಟಿಯವರು ಶರಣ ದಂಪತಿಗಾಳಾದ ದಾನಮ್ಮ ಮತ್ತು ಗುರಬಸಪ್ಪನವರ ಮಗನಾಗಿ 1880 ರ ಜುಲೈ 2 ರಂದು ಜನಿಸಿದರು. ‌ತಂದೆ ಗುರಬಸಪ್ಪ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಫಕೀರಪ್ಪ ತನ್ನ ಬಾಲ್ಯವನ್ನು ಮುಗಿಸಿ ಮೆಟ್ರಿಕ್ ಶಿಕ್ಷಣವನ್ನು 1896ರಲ್ಲಿ ಮುಗಿಸಿ ಮುಂಬೈ ಸೇಂಟ್ ಝೇವಿಯರ್ ಕಾಲೇಜ ಸೇರಿ 1901ರಲ್ಲಿ ಬಿಎಸ್.ಸಿ ಪಾಸಾಗಿ 1904 ರಲ್ಲಿ ಎಲ್ ಎಲ್ ಬಿ ಪದವಿ ಪಡೆಯುತ್ತಾರೆ.

ಬೆಳಗಾವಿಯಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿ ಮುಂದೆ ವಿಜಯಪುರವನ್ನ ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡರು. ಸರ್ಕಾರ ಅವರನ್ನು ಪಬ್ಲಿಕ್ ಪ್ರಾಸಿಕ್ಯುಟರಾಗಿ ನೇಮಿಸಿತು. ವಚನ ‌ಸಾಹಿತ್ಯಕ್ಕೆ ಪ್ರೇರಿತರಾಗಿ ವಕೀಲ ವೃತ್ತಿಗೆ ರಾಜೀನಾಮೆ ನೀಡಿ, ವಚನ ಸಂಗ್ರಹಕ್ಕಾಗಿ ಶರಣರ ನಾಡಲ್ಲಿ ತಿರುಗಾಡಿ ತಾಳೆಗರಿಗಳನ್ನು ಕಲೆಹಾಕಿದರು. ಬದುಕಿಗೆ ಸರಳ ಮತ್ತು ಮಾತೃಭಾಷೆಯಲ್ಲಿ ಉತ್ತಮ ಸಂದೇಶ ನೀಡುವ ವಚನಗಳು ನಾಶವಾಗುತ್ತಿದ್ದ ಕಾಲದಲ್ಲಿ, ಅವುಗಳನ್ನು ರಕ್ಷಿಸಲೆಂದೆ ಧರೆಗಿಳಿದ ಮಹಾನ್ ಶರಣ ಈ ಹಳಕಟ್ಟಿಯವರು.

ಮಠಮಾನ್ಯಗಳಲ್ಲಿ ಕೆಲವು ಮನೆಗಳಲ್ಲಿ ಪೂಜೆಗೊಳ್ಳುತ್ತಿದ್ದ ತಾಡೋಲೆಗಳನ್ನು ಕಲೆಹಾಕಲು ಮತ್ತು ಅವುಗಳಿಗೆ ಅರ್ಥ ಬರೆದು ಸಾಮಾನ್ಯ ಜನರಿಗೆ ತಲುಪಿಸುವ ಹೊನೆ ಕೈಗೆತ್ತುಕೊಂಡರು. ತೀವ್ರ ಅನಾರೋಗ್ಯದ ಸಮಸ್ಯೆ ಇದ್ದರು “ವಚನ ಶಾಸ್ತ್ರ ಸಂಪುಟ1 ರಚಿಸಿದರು. ಇದು ಹಸ್ತಪ್ರತಿಯಲ್ಲಿದ್ದು ಎಲ್ಲರ ಗಮನ ಸೆಳೆಯಿತು. ಮಾವ ತಮ್ಮನ್ನಪ್ಪ ಚಿಕ್ಕೊಡಿಯವರು ವಚನ ಸಾಹಿತ್ಯ ಕಂಡು ಬೆರಗಾದರು. ಈ ವಿಷಯ ಹಾನಗಲ್ಲ ಕುಮಾರಸ್ವಾಮಿಗಳ ಕಿವಿಗೆ ಬಿದ್ದು ನಂತರ ಅವರು ಜಂಗಿನ‌ಮುರಗಯ್ಯ ಮತ್ತು ಬುದ್ದಯ್ಯ ನವರ ಜೊತೆ ವಿಜಯಪುರಕ್ಕೆ ಬಂದ ವಚನಗಳನ್ನು ಪ್ರಕಟಿಸುವ ಕುರಿತು ಪ್ರೋತ್ಸಹಿಸಿದರು.

 ವಚನಶಾಸ್ತ್ರಸಾರ 1ನ್ನು ಮುದ್ರಿಸಲು ಹಸ್ತಪ್ರತಿಗಳನ್ನು ಮತ್ತು ಹಣವನ್ನು ಮಂಗಳೂರಿನ ಬಾಸೆಲ್ ಮಿಶನ್ ಗೆ ಕಳುಹಿಸಿದರು. ಬಾಸೆಲ್‌ ಮಿಶನ್ ನವರು ತಿರಸ್ಕರಿಸಿ ಹಿಂತಿರುಗಿಸಿದರು. ಹಳಕಟ್ಟಿಯವರು ಹಿಂಜರಿಯದೇ ನಾಡಿನುದ್ದಕ್ಕೂ ಬಂದ ದೇಣಿಗೆ ಮತ್ತು ತಮ್ಮ ಸ್ವಂತ ಮನೆಯನ್ನು ಮಾರಿ ಮುದ್ರಣಯಂತ್ರವನ್ನು ಖರೀದಿಸಿ ಮತ್ತಷ್ಟು ವಚನ ಸಾಹಿತ್ಯ ಮುದ್ರಣಕ್ಕಾಗಿ ಮತ್ತು ಅದರ ಪ್ರಚಾರ ಪಡಿಸುವಲ್ಲಿ ಶ್ರಮವಹಿಸಿದರು. ಹಿತಚಿಂತಕ ಮುದ್ರಣಾಲಯ ಪ್ರಾರಂಭಿಸಿದರು.

ವಿದ್ಯಾರ್ಥಿ ಜೀವನದಲ್ಲೆ ಹಸ್ತಪ್ರತಿ ಓದುವ ಆಸಕ್ತಿ ಬೆಳಸಿಕೊಂಡಿದ್ದ ಹಳಕಟ್ಟಿಯವರು, 1920 ರಲ್ಲಿ ಒಂದು ಸಾವಿರ ‌ತಾಡೋಲೆಗಳನ್ನು  ಸಂಗ್ರಹಿಸಿ ವಿಜಯಪುರದಲ್ಲಿ ಸಾರ್ವಜನಿಕ ಪ್ರದರ್ಶನಕ್ಕಿಟ್ಟು ಗಮನಸೆಳೆದರು. ತಾಡೋಲೆಗಳಲ್ಲಿನ ವಿಚಾರಗಳನ್ನು ಕಾಗದದಲ್ಲಿ ಬರೆದು ಕಠಿಣ ಶಬ್ದಗಳಿಗೆ ಅರ್ಥವಿವರ ಬರೆದರು. ಒಂದು ವಿಶ್ವ ವಿದ್ಯಾನಿಲಯ ಮಾಡದ ಕೆಲಸವನ್ನು ಇವರೊಬ್ಬರೆ ಏಕಾಂಗಿಯಾಗಿ ವಚನ ಶಾಸ್ತ್ರದ ಮೂರು ಸಂಪುಟಗಳನ್ನು ಮತ್ತು ಶಿವಶರಣೆಯ ಐದು ಸಂಪುಟಗಳನ್ನು ಬರೆದು ಪ್ರಕಟಿಸಿದರು. ಹಳಕಟ್ಟಿಯವರು ಸಂಪಾದಿಸಿದ ಗ್ರಂಥಗಳು ಲೆಕ್ಕಕ್ಕೆ ಸಿಗವು.

ವಿಜಯಪುರದಲ್ಲಿ 1910ರಲ್ಲಿ ಬಿಎಲ್ ಡಿಇ ಸಂಸ್ಥೆ ಸ್ಥಾಪಿಸಿದರು. ಇಂದು ಈ ಸಂಸ್ಥೆ ರಾಜ್ಯದಲ್ಲೆ ಪ್ರತಿಷ್ಠಿತ ವೈದ್ಯಕೀಯ ಇಂಜಿನಿಯರಿಂಗ್ ಕಾಲೇಜ್ ಮತ್ತಿತರ ವೃತ್ತಿಪರ ಪದವಿ ಕೋರ್ಸ ಗಳನ್ನು ನೀಡಿ, ಉತ್ತಮ ಮತ್ತು ಸ್ವಸ್ತ ಸಮಾಜ ನಿರ್ಮಾಣದಲ್ಲಿ ಕೈಜೊಡಿಸಿದೆ. ಹಳಕಟ್ಟಿಯವರು ಮುಚ್ಚುವ ಹಂತದಲ್ಲಿದ್ದ ಆಂಗ್ಲ ಶಾಲೆಯನ್ನು ಖರೀದಿಸಿ, 1926ರಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನ್ಯೂ ಇಂಗ್ಲಿಷ್ ಸ್ಕೂಲ್ ಹೆಸರು ಬದಲಿಸಿ ಶ್ರೀ ಸಿದ್ದೇಶ್ವರ ಹೈಸ್ಕೂಲ್ ಎಂದು ಹೊಸದಾಗಿ ನಾಮಕಾರಣ ಮಾಡಿದರು. ಉತ್ತಮ ಯೋಜನೆಗಳೊಂದಿಗೆ ಉತ್ತಮ ಶಿಕ್ಷಣ ಮಹತ್ತ ಕೊಟ್ಟು ಗುಣಮಟ್ಟದ ಶಿಕ್ಷಣ ನೀಡಲು ಯಶಸ್ವಿಯಾದರು. ಸಂಸ್ಥೆಯು ಜಿಲ್ಲೆಯಲ್ಲು ಹಲವಾರು ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕುವಲ್ಲಿ ನಾಂದಿ ಹಾಡಿತು.

ಹಳಕಟ್ಟಿಯವರು ಶಿಕ್ಷಣ ಅಷ್ಟೆ ಅಲ್ಲದೆ ಸಹಕಾರಿ ಕ್ಷೇತ್ರದತ್ತ ಹೆಜ್ಜೆ ಹಾಕಿದರು. ಕೇವಲ 2,500 ಬಂಡವಾಳದಿಂದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಪ್ರಾರಂಭಿಸಿದರು. ಇಂದು ರಾಜ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಇದು ಕೂಡ ಒಂದು. ನಗರದ ಹಲವಾರು ವ್ಯಾಪಾರಸ್ಥರಿಗೆ ಉಸಿರು ಕೊಟ್ಟು ವ್ಯಾಪಾರಕ್ಕೆ ಸಹಕರಿಸಿದ್ದೆ ಈ ಬ್ಯಾಂಕ ಎಂದರೆ. ಅದಕ್ಕೆ ಕಾರಣ ನಗರದ ಆರಾದ್ಯ ದೈವ ಶ್ರೀ ಸಿದ್ದೇಶ್ವರನ  ಆಶೀರ್ವಾದ ಮತ್ತು  ಶರಣ ಹಳಕಟ್ಟಿಯವರ ಶ್ರಮ. ಹಳಕಟ್ಟಿಯವರು ವಿಜಯಪುರ ನಗರಸಭೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸರ್ ಎಂ ವಿಶ್ವೇಶ್ವರಯ್ಯ ನವರ ನೀಲನಕ್ಷೆ ಯೊಂದಿಗೆ ವಿಜಯಪುರ ಜೀವ ಜಲ ” ಬೂತನಾಳ ಕೆರೆ” ನಿರ್ಮಿಸಿದ್ದಾರೆ.

1921ರಲ್ಲಿ ಚಿಕ್ಕ ಮಂಗಳಿರಿನಲ್ಲಿ ನಡೆದ ಅಖಿಲ ಭಾರತ ಕನ್ನಡ‌ಸಾಹಿತ್ಯ ಸಮ್ಮೆಳನದಲ್ಲಿ ಭಾಗವಹಿಸಿ, ಪ್ರತಿ ಸಮಾರಂಭದ ಪ್ರಾರಂಭದಲ್ಲಿ ಮತ್ತು ಮುಕ್ತಾಯದ ಸಮಯದಲ್ಲಿ ವಚನ ಓದಲು ಕರೆ‌ಕೊಟ್ಟರು. ಅಪಾರ ಜನರ ಮೆಚ್ಚುಗೆ ಗಳಿಸಿದರು. 1922ರಲ್ಲಿ ವಚನಗಳನ್ನು ಇಂಗ್ಲಿಷ್ ಅನುವಾದಿಸಿದರು. 1929ರಲ್ಲಿ ಬಳ್ಳಾರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1926ರಲ್ಲಿ ಶಿವಾನುಭವ ತ್ರೈಮಾಸಿಕ ಪತ್ರಿಕೆ ಹುಟ್ಟುಹಾಕಿ ಪ್ರಾಚೀನ ಸಾಹಿತ್ಯ, ಇತಿಹಾಸ ಸಂಸ್ಕೃತಿಯ ಬಗ್ಗೆ ಮಹತ್ವದ ಲೇಖನ ಪ್ರಕಟಿಸಿದರು. ಇದರ ಬೆನ್ನಲ್ಲೆ ನವಕರ್ನಾಟಕ ವಾರ ಪತ್ರಿಕೆ ಹೊರತಂದರು.

ಹಳಕಟ್ಟಿಯವರಿಗೆ ಕರ್ನಾಟಕ ವಿಶ್ವವಿದ್ಯಾಲಯ 1956ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಸಾವಿರಾರು ತಾಲೊಡೆಗಳನ್ನು ಸಂಗ್ರಹಿಸುವುದು. ವರ್ಗೀಕರಿಸುವುದು. ಅರ್ಥವಿವರ ಬರೆಯುವುದು ಸಾಮಾನ್ಯ ಕೆಲಸವಲ್ಲ. ಇದು ಮಹಾನ್ ಮೇಧಾವಿಗಳಿಂದ‌ ಮಾತ್ರ ಸಾಧ್ಯ. ಇದೆಲ್ಲದರ ನಡುವೆ ಅಗಾಗ ಕೈಕೊಡುವ ಆರೋಗ್ಯ. ದೇಹವನ್ನು ಕರಗಿಸುತ್ತಿತ್ತು ಆದರೆ ಮಾನಸಿಕವಾಗಿ ಸದೃಡರಾಗಿದ್ದರು. ಮಾಡುವ ಕೆಲಸವನ್ನು ನಿಷ್ಠಯಿಂದ ಪೂರ್ಣಗೊಳಿಸಿದರು. ಆರ್ಥಿಕ ‌ಪರಿಸ್ಥಿತಿ ಮತ್ತು ಮಗನ ಸಾವು ಅವರನ್ನು ದೃತಿಗೆಡಿಸುತ್ತಿದ್ದವು. ಮುದ್ರಣಕ್ಕಾಗಿ ಮನೆ ಮಾರಿ ಸೂರು ಕಳೆದುಕೊಂಡವ ಈ ಫಕೀರ!!

ಲೇಖಕರಾದ ಆಕಾಶ ತಿಮ್ಮಶೆಟ್ಟಿ



Leave a Reply

Your email address will not be published. Required fields are marked *

error: Content is protected !!