ಗೋಲ್ಡನ್ ಬಾಯ್ ಮತ್ತು ಜರ್ಸಿ ನಂಬರ್ 10

430

ಪೊಲೀಸ್ ಇಲಾಖೆಯ ಬೆಂಗಳೂರಿನ ನಿವೃತ್ತ  ಸಹಾಯಕ ಆಡಳಿತ ಅಧಿಕಾರಿ ಎಸ್.ಎಲ್ ಶ್ರೀಧರಮೂರ್ತಿ ಅವರು ಬರೆದಿರುವ ವಿಶೇಷ ಲೇಖನ ಇಲ್ಲಿದೆ..

ಸಾಕರ್ ಪ್ರಪಂಚದಲ್ಲೇ ಮುಕುಟವಿಲ್ಲದ ಮಹಾರಾಜನಂತೆ ಮೆರೆದ ಫುಟ್ಬಾಲ್ ಆಟಗಾರ ಮರಡೋನಾ ಹೃದಯಾಘಾತದಿಂದ 25-11-2020 ರಂದು ಮರಣ ಹೊಂದಿದ್ದರು. ಇದು ಲಕ್ಷಾಂತರ ಫುಟ್ಬಾಲ್ ಆಟಗಾರರ, ಅಭಿಮಾನಿಗಳಿಗೆ ಮುಖ್ಯವಾಗಿ ಅರ್ಜೆಂಟೀನಾಕ್ಕೆ ಬಹು ದುಃಖದ ಸಂಗತಿಯಾಗಿದೆ.

ಅಕ್ಟೋಬರ್ 30, 1960 ರಂದು ಅರ್ಜೆಂಟೀನಾದಲ್ಲಿಯ ಲಾನಸ್, ಬ್ಯೂನಸ್ ಎಯಿರ್ಸ್ನಲ್ಲಿ ಹುಟ್ಟಿದ ಮರಡೋನಾ ಪೂರ್ಣ ಹೆಸರು ಡೀಗೋ ಆರ್ಮಾಂಡೋ ಮರಡೋನಾ. ಚಿಕ್ಕಂದಿನಿಂದಲೂ ಫುಟ್ಬಾಲ್ ಆಟದಲ್ಲಿ ನಿಪುಣನಾಗಿದ್ದ. ಯಾವ ಕ್ರೀಡಾಪಟು ಆಗಲಿ ತನ್ನ ಆಟದಲ್ಲಿ ಹಿಡಿತ ಸಾಧಿಸಿ ಉತ್ತಮ ಕ್ರೀಡಾಪಟು ಎಂದು ಪ್ರಶಸ್ತಿಗಳು, ಪದಕಗಳು ಪಡೆದಿರುವುದು ಸಹಜ. ಆದರೆ ಮರಡೋನಾ ಫುಟ್ಬಾಲ್ ಆಟಕ್ಕೆ ಪರ್ಯಾಯ ಪದವಾಗಿ ಬೆಳೆದು ನಿಂತಿದ್ದ. 1986ರ ಫಿಫಾ ವಿಶ್ವಕಪ್ ಗಾಗಿ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಮಾಡಿದ ‘ಹ್ಯಾಂಡ್ ಆಫ್ ಗಾಡ್’ ಅಂದರೆ ‘ದೇವರ ಕೈ ಗೋಲು’ ಎಲ್ಲರ ಮನದಲ್ಲೂ ಅಚ್ಚಳಿಯದೇ ಉಳಿದಿದೆ.

ಇವನ ಆಟ ಹೇಗಿತ್ತೆಂದರೆ ಗೂಳಿಗಳ ಕಾಳಗದಂತೆ ಮುನ್ನುಗ್ಗುತ್ತಾ ಕಾಲ್ಚೆಂಡನ್ನು ತನಗೆ ಬೇಕಾದ ರೀತಿಯಲ್ಲಿ ತಳ್ಳುತ್ತಾ ತನ್ನ ಕಾಲ್ಚಳಕದಿಂದ ಗೋಲ್ ಮಾಡಿಯೇ ತೀರುತ್ತಿದ್ದ. ಈ ರೀತಿ ಅರ್ಜೆಂಟೀನಾಗೆ ಎರಡನೇ ಬಾರಿ ಫಿಫಾ ವಿಶ್ವಕಪ್ ಗೆದ್ದು ಕೊಟ್ಟ ಮರಡೋನಾಗೆ ಗೋಲ್ಡನ್ ಬಾಲ್ ಪ್ರಶಸ್ತಿ ನೀಡಲಾಯಿತು. ಅನಂತರ ಬ್ರೇಜಿಲ್ ನ ಖ್ಯಾತ ಫುಟ್ಬಾಲ್ ಆಟಗಾರ ದಿಗ್ಗಜ ಪೀಲೆನನ್ನು ಮೀರಿ ಇವನ ಹೆಸರು ಖ್ಯಾತಿ ಪಡಿಯಿತು. ಇನ್ನು ಈ ಸಂದರ್ಭದಲ್ಲಿ ಪೀಲೆ ಬಗ್ಗೆ ಎರಡು ಮಾತು ಹೇಳಬೇಕು. ಫುಟ್ಬಾಲ್ ಚರಿತ್ರೆಯಲ್ಲೆ ಅತ್ಯುತ್ತಮ ಪಟು ಪೀಲೆ. ಅವನು ಎಂಥಹ ಪರಿಸ್ಥಿತಿಯಲ್ಲಾದರೂ ಚೆಂಡನ್ನು ಬಿಟ್ಟು ಕೊಡುವುದಿಲ್ಲ. ಹಾಗೆಯೇ ಎಲ್ಲಾ ಮೂಲೆಗಳಿಂದ ತನ್ನ ಹಿಂಬದಿ ಗೋಲ್ ಪೋಸ್ ಇದ್ದರೂ ಆಕ್ರಮಣಕಾರಿ ಆಟವಾಡಿ ಗೋಲ್ ಹೊಡೆದು ಜಯ ತರುತಿದ್ದ.

ಮರಡೋನಾ ಅರ್ಜೆಂಟೀನಾ ಪರವಾಗಿ 91 ಅಂತರಾಷ್ಟ್ರೀಯ ಆಟಗಳಲ್ಲಿ 34 ಗೋಲ್ ಮಾತ್ರ ಮಾಡಿದ್ದರು, ಅವನ ಆಟದಲ್ಲಿ ಚಾಕಚಕ್ಯತೆ, ನೈಪುಣ್ಯತೆ, ಎದುರಾಳಿಗೆ ಚೆಂಡು ಸಿಗದಂತೆ ಕಕ್ಕಾಬಿಕ್ಕಿ ಮಾಡಿ ಅಭಿಮಾನಿಗಳನ್ನು ಉಸಿರುಗಟ್ಟಿಸಿ ನೋಡುವಂತೆ ಮಾಡುವ ಫುಟ್ಬಾಲ್ ಮಾಂತ್ರಿಕನಾಗಿದ್ದ. ಅದಕ್ಕೆ ಜನರು ಇವನನ್ನು ‘ಗೋಲ್ಡನ್ ಬಾಯ್’ ಎಂದು ಕರೆಯುತ್ತಿದ್ದರು. ಎಲ್ಲಿ ಮರಡೋನಾ ಇದ್ದರೆ, ಜನರು ಅದೇ ತಂಡದತ್ತ ಗಮನ ಇಡುತ್ತಿದ್ದರು.

ಮತ್ತೊಂದು ವಿಶೇಷ ಮರಡೋನಾ ಬಗ್ಗೆ ವಿವರಿಸುವುದೇನೆಂದರೆ ಇವನು ಯಾವಾಗಲೂ ಜರ್ಸಿ ಸಂಖ್ಯೆ 10 ಹಾಕುತ್ತಿದ್ದ. ಆ ಸಂಖ್ಯೆ ಅಷ್ಟು ಪ್ರಚಾರವಾಗಿತ್ತು. ಅಲ್ಲದೆ ಖ್ಯಾತ ಫುಟ್ಬಾಲ್ ಆಟಗಾರರಾದ ಪೀಲೆ, ಫ್ರಾನ್ಸ್ ನ ಲಿಯೋನಿಲ್ ಮೆಸ್ಸಿ ಇವರು ಸಹ ಜರ್ಸಿ ಸಂಖ್ಯೆ 10 ಹೊಂದಿದ್ದರು. ಖ್ಯಾತ ಕ್ರಿಕೆಟ್ ಕ್ರೀಡಾಪಟು ಸಚಿನ್ ತೆಂಡೂಲ್ಕರ್ ಸಹ ಇದರ ಸ್ಫೂರ್ತಿ ಹೊಂದಿ ಜರ್ಸಿ ಸಂಖ್ಯೆ 10 ಪಡೆದಿದ್ದರು. ಸಚಿನ್ ರಿಟೈರ್ ಆದ ಮೇಲೆ ಈ ಸಂಖ್ಯೆಯನ್ನು ಅವರ ಗೌರವವಾರ್ಥ ಯಾರಿಗೂ ನೀಡಬಾರದೆಂದು ಬಿಸಿಸಿಐ ನಿರ್ಣಯಿಸಿತು. ಈ ಹಿಂದೆಯೂ ಡೀಗೋ ಮರಡೋನಾಗೆ ನೀಡಿದ ಜರ್ಸಿ ಸಂಖ್ಯೆ 10ನ್ನು ರಿಟೈರ್ ಮಾಡಬೇಕೆಂದು ಫಿಫಾಗೆ ಅರ್ಜೆಂಟೀನಾ ಫುಟ್ಬಾಲ್ ಸಂಘ ಕೋರಿಕೆ ಸಿಲ್ಲಿಸಿದ್ದರೂ, ಫಿಫಾ ಅಂಗೀಕರಿಸಲಿಲ್ಲ ಎಂದರೆ, ಮರಡೋನಾಗಿರುವ ಗೌರವ ಎಂಥಹದ್ದು ಎನ್ನುವುದು ತಿಳಿಯುತ್ತದೆ. ಯಾವುದೇನೇ ಹೇಳಿದರೂ, ಈತನಿಗಿರುವ ಕೆಟ್ಟ ಹವ್ಯಾಸ ವೈಯಕ್ತಿಕ ಎಂದು ಭಾವಿಸುತ್ತಾ, ಪ್ರಪಂಚದ ಎಲ್ಲಾ ಫುಟ್ಬಾಲ್ ಆಟಗಾರರಿಗೆ ಮತ್ತು ಅಭಿಮಾನಿಗಳಿಗೆ ಡೀಗೋ ಮರಡೋನಾರ ಮರಣ ಆಘಾತವೇ ಆಗಿದೆ. ಮರಡೋನಾ ಎಂಬ ಫುಟ್ಬಾಲ್ ಮಾಂತ್ರಿಕನನ್ನು ಮರೆಯಲು ಯಾರಿಗೂ ಸಾಧ್ಯವೇ ಇಲ್ಲ.

ಲೇಖಕರು



Leave a Reply

Your email address will not be published. Required fields are marked *

error: Content is protected !!