ಸಿಂದಗಿ ಪುರಸಭೆ ವಾಹನದಲ್ಲಿ ಹಿಂದಿ ಹಾಡು

287

ಪ್ರಜಾಸ್ತ್ರ ಸುದ್ದಿ, ನಾಗೇಶ ತಳವಾರ

ಸಿಂದಗಿ: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು ಹೇಳುತ್ತೇವೆ. ಆದರೆ, ವಾಸ್ತವದಲ್ಲಿ ಭಿನ್ನವಾಗಿರುವುದು ಸತ್ಯ. ಗಡಿ ಪ್ರದೇಶ ಜೊತೆಗೆ ಇದೀಗ ಎಲ್ಲೆಡೆ ಕನ್ನಡದ ಕಡೆಗಣನೆಯಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆ, ಪಟ್ಟಣದ ಪುರಸಭೆ ವತಿಯಿಂದ ಪ್ರತಿ ದಿನ ಮುಂಜಾನೆ ಕಸ ಸಂಗ್ರಹಿಸುವ ವಾಹನದಲ್ಲಿ ಕೇಳಿ ಬರುವ ಹಿಂದಿ ಹಾಡು.

ಹೌದು, ಪುರಸಭೆ ವತಿಯಿಂದ ಪಟ್ಟಣದ ವಾರ್ಡ್ ಗಳಿಗೆ ತೆರಳಿ ಕಸ ಸಂಗ್ರಹಿಸುವ ವಾಹನದಲ್ಲಿ ‘ಗಾಡಿ ವಾಲಾ ಆಯಾ ಘರ್ ಸೆ ಕಚ್ಡಾ ನಿಕಾಲ್’ ಅನ್ನೋ ಸಾಲುಗಳುಳ್ಳ ಹಿಂದಿ ಹಾಡಿನ ಮೂಲಕ ಕಸ ಸಂಗ್ರಹಕ್ಕೆ ವಾಹನ ಬರುತ್ತೆ. ಸಾರ್ವಜನಿಕ ಕಚೇರಿಯಿಂದಲೇ ಕನ್ನಡ ಮರೆಯಾಗುತ್ತಿದೆ. ಈ ಬಗ್ಗೆ ಇದುವರೆಗೂ ಯಾರೊಬ್ಬರು ಗಮನ ಹರಿಸುತ್ತಿಲ್ಲವೆಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಹಿಂದಿಯಲ್ಲಿ ಇದ್ದರೆ ಕೆಲವರಿಗೆ ಮಾತ್ರ ಗೊತ್ತಾಗುತ್ತೆ. ಬಹುತೇಕರಿಗೆ ಗೊತ್ತಾಗುವುದಿಲ್ಲ. ಕನ್ನಡದಲ್ಲಿ ಹಾಡು ಇದ್ದರೆ ಕಸದ ಗಾಡಿ ಬಂತು ಎಂದು ಜನರು ಕಸದ ಡಬ್ಬಿ ತೆಗೆದುಕೊಂಡು ಬರುತ್ತಾರೆ ಅಥವ ಅದಕ್ಕೂ ಮೊದಲೇ ಕಸದ ಡಬ್ಬಿ ತಂದು ಇಡುತ್ತಾರೆ. ಹೀಗಾಗಿ ಪುರಸಭೆ ಕಸದ ಗಾಡಿಯಲ್ಲಿ ಕನ್ನಡದ ಹಾಡು ಹಾಕಬೇಕು.

ಬಸವರಾಜ ಬಡಗೇರ, ಸ್ಥಳೀಯರು

ಪಟ್ಟಣದಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಸಾಕಷ್ಟು ಕೆಲಸ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು, ಸಿಬ್ಬಂದಿ ಹೇಳುತ್ತಾರೆ. ಆದರೆ, ಪ್ರಮುಖ ರಸ್ತೆಯಲ್ಲಿಯೇ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಕಸ ಬಿದ್ದಿರುತ್ತೆ. ಕಸದ ಗಾಡಿಯೂ ಪ್ರತಿ ವಾರ್ಡಿಗೆ ಸರಿಯಾಗಿ ಬರುವುದಿಲ್ಲ. ಕೆಲವು ವಾರ್ಡ್ ಗಳಿಗೆ ಮಾತ್ರ ಸಿಮೀತವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೂಡಲೇ ಕಸ ಸಂಗ್ರಹಿಸುವ ವಾಹನದಲ್ಲಿನ ಹಿಂದಿ ಹಾಡು ತೆಗೆಯುವುದರ ಜೊತೆಗೆ ಸರಿಯಾಗಿ ಕಸ ಸಂಗ್ರಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕನ್ನಡ ಹಾಡು ಹುಡುಕುತ್ತಿದ್ದೇವೆ. ಎಲ್ಲಿಯೂ ಸಿಗುತ್ತಿಲ್ಲ. ಸ್ವಚ್ಛ ಭಾರತ ಅಭಿಯಾನದ ಹಾಡು ಹಾಕುವ ಬಗ್ಗೆ ಸಿಬ್ಬಂದಿಗೆ ಹೇಳಿದ್ದೇನೆ. ಅವರು ಹಾಕಿಲ್ಲ ಎನಿಸುತ್ತದೆ. ನಾನು ಸಹ ಕೇಳಿಲ್ಲ. ಆದಷ್ಟು ಬೇಗ ಹಿಂದಿ ಹಾಡು ತೆಗೆಯುತ್ತೇವೆ.

ರಾಜಶ್ರೀ ತುಂಗಳ, ಪುರಸಭೆ ಮುಖ್ಯಾಧಿಕಾರಿ

ಈ ಬಗ್ಗೆ ಮುಖ್ಯಾಧಿಕಾರಿಗಳ ಜೊತೆಗೆ ಚರ್ಚೆ ಮಾಡಿ, ಈ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು.

ಡಾ.ಶಾಂತವೀರ ಮನಗೂಳಿ, ಅಧ್ಯಕ್ಷರು, ಪುರಸಭೆ



Leave a Reply

Your email address will not be published. Required fields are marked *

error: Content is protected !!