ಮೂವರು ಸಾಧಕರಿಗೆ ಸಾಹಿತ್ಯಶ್ರೀ ಹಾಗೂ ವಚನಶ್ರೀ ಪ್ರಶಸ್ತಿ

154

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರದ ಕಲಬುರ್ಗಿ ಫೌಂಡೇಶನ್ ವತಿಯಿಂದ ಕೊಡ ಮಾಡುವ ಸಾಹಿತ್ಯಶ್ರೀ ಹಾಗೂ ವಚನಶ್ರೀ ಪ್ರಶಸ್ತಿ ಈ ವರ್ಷ ಮೂವರು ಸಾಧಕರಿಗೆ ನೀಡಲಾಗುತ್ತಿದೆ ಎಂದು ಫೌಂಡೇಶನ್ ಅಧ್ಯಕ್ಷ ಶಿವಲಿಂಗಪ್ಪ ಕಲಬುರ್ಗಿ ತಿಳಿಸಿದ್ದಾರೆ. ಇತ್ತೀಚೆಗೆ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದ ಡಾ.ಎಂ.ಎಸ್ ಮದಭಾವಿ ಅವರಿಗೆ ಸಾಹಿತ್ಯಶ್ರೀ ಹಾಗೂ ಕಲಬುರ್ಗಿಯ ಡಾ.ಮೀನಾಕ್ಷಿ ಬಾಳಿ ಮತ್ತು ಬಾಗಲಕೋಟೆಯ ಗೌರಮ್ಮ ನಾಶಿ ಅವರಿಗೆ ವಚನಶ್ರೀ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಹಿರಿಯ ಜಾನಪದ ವಿದ್ವಾಂಸ ಡಾ.ಎಂ.ಎಂ ಪಡಶೆಟ್ಟಿ ಮಾತನಾಡಿ, ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಎಂ.ಎಸ್ ಮದಭಾವಿ ವಚನ ಪಿತಾಮಹ ಫ.ಗು ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಬಬಲಾದಿ ಚಿಕ್ಕಯ್ಯ ಸ್ವಾಮಿಗಳ ಜೀವನ ಕೃತಿ, ಡಾ.ಎಂ.ಎಂ ಕಲಬುರ್ಗಿ ಅವರ ಕುರಿತಾದ ಸಾಂಸ್ಥಿಕಪ್ರಜ್ಞೆ ಅನ್ನೋ ಕೃತಿ, ಸಮೀಕ್ಷೆ ಹೆಸರಿನ ಸಂಶೋಧನ ಮಹಾಪ್ರಬಂಧ ಮಂಡಿಸಿದ್ದಾರೆ. ಇವರಿಗೆ ಸಾಹಿತ್ಯಶ್ರೀ ಪ್ರಶಸ್ತಿ ನೀಡಲಾಗುತ್ತಿದೆ.

ನಿವೃತ್ತ ಕನ್ನಡ ಪ್ರಾಧ್ಯಾಪಕಿ, ಸಾಮಾಜಿಕ ಹೋರಾಟಗಾರ್ತಿ, ಬರಹಗಾರ್ತಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿರುವ, ನಿರಂತರ ಹೋರಾಟಗಳನ್ನು ಮಾಡಿಕೊಂಡು ಬರುತ್ತಿರುವ ಡಾ.ಮೀನಾಕ್ಷಿ ಬಾಳಿ ಅವರು ಕಡಕೋಳ ಮಡಿವಾಳಪ್ಪನವರ ಕುರಿತು ಸಂಶೋಧನ ಕೃತಿ ರಚಿಸಿದ್ದಾರೆ. ತತ್ವಪದಗಳ ಸಂಪಾದನೆ, ವಿಶ್ಲೇಷಣೆ ಮಾಡುತ್ತಾ ಬರುತ್ತಿದ್ದಾರೆ. ಇವರಿಗೆ ವಚನಶ್ರೀ ಪ್ರಶಸ್ತಿ ನೀಡಲಾಗುತ್ತಿದೆ.

ಬಾಲಕೋಟೆಯ ಕನ್ನಡ ಪ್ರಾಧ್ಯಾಪಕಿ ಗೌರಮ್ಮ ನಾಶಿ ಅವರು, ಅನುಭವ ಕಳಸ, ಅಮೃತವರ್ಷ, ಅನುಭವಸಿರಿ ಅಭಿನಂದನಾ ಗ್ರಂಥಗಳ ಗೌರವ ಸಂಪಾದಕರಾಗಿದ್ದಾರೆ. ಅಕ್ಕನ ಅರಿವು ವಚನ ಅಧ್ಯಯನ ವೇದಿಕೆಯ ಮೂಲಕ ಶರಣ ಸಾಹಿತ್ಯ, ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದಾರೆ. ಇವರಿಗೆ ವಚನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿ ಫಲಕ, ಸ್ಮರಣಿಕೆ, ತಲಾ 10 ಸಾವಿರ ನಗದು ನೀಡಿ, ಮಾರ್ಚ್ 3ರಂದು ವಿಜಯಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ವೇಳೆ ಹಿರಿಯ ಕಥೆಗಾರರಾದ ಡಾ.ಚನ್ನಪ್ಪ ಕಟ್ಟಿ, ಶಿವಾನಂದ ಕಲಬುರಗಿ, ಎಂ.ಎಂ ಹಂಗರಗಿ, ಡಿ.ಎಸ್ ಹಣಮಶೆಟ್ಟಿ ಸೇರಿ ಇತರರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!