ಉತ್ಸವಮೂರ್ತಿಯಾದ್ರಾ ಸಿಂದಗಿ ಶಾಸಕರು?

689

ಪ್ರಜಾಸ್ತ್ರ ವಿಶೇಷ ವರದಿ

ಸಿಂದಗಿ: ರಾಜಕೀಯದಲ್ಲಿ ಒಬ್ಬರಿಗೆ ಅಧಿಕಾರ ಇದ್ರೆ ಮನೆ ಮಂದಿಯಲ್ಲ ಅದನ್ನ ಚಾಲಾಯಿಸ್ತಾರೆ. ಸಿಎಂ ಕುರ್ಚಿಯಿಂದ ಶುರುವಾಗಿ ಗ್ರಾಮ ಪಂಚಾಯ್ತಿ ಸದಸ್ಯನ ತನಕ ಇದು ನಡೆಯುತ್ತೆ. ಅಪ್ಪನ ಹೆಸರಿನಲ್ಲಿ ಮಕ್ಕಳು, ಹೆಂಡ್ತಿ ಹೆಸರಿನಲ್ಲಿ ಗಂಡ, ಗಂಡನ ಹೆಸರಿನಲ್ಲಿ ಹೆಂಡ್ತಿ ಅಧಿಕಾರ ಚಾಲಾಯಿಸುವುದು ಎಷ್ಟೊಂದು ಕಾಮನ್ ಆಗಿದೆ ಅಂದ್ರೆ, ಅವರ ಬಗ್ಗೆ ವರದಿ ಮಾಡುವ ಕೆಲ ಮಾಧ್ಯಮದವರೆ ಸೊಲ್ಲೆತ್ತುವುದಿಲ್ಲ. ಪಕ್ಷದ ಕಾರ್ಯಕರ್ತನಂತೆ ಹಾಡಿ ಹೊಗಳಿ ಸುದ್ದಿ ಮಾಡ್ತಾರೆ. ಅದಕ್ಕೆ ಸಿಂದಗಿ ಹೊರತಾಗಿಲ್ಲ.

ಸಿಂದಗಿ ವಿಧಾನಸಭೆ ಮತಕ್ಷೇತ್ರದ ಶಾಸಕರಾಗಿ ಎಂ.ಸಿ ಮನಗೂಳಿ ಅವರಿದ್ದಾರೆ. ಸಚಿವರಾಗಿಯೂ ಅವರಿಗೆ ಅನುಭವ ಇದೆ. ಈ ಭಾಗದ ಹಿರಿಯ ರಾಜಕಾರಣಿ. ಇವರ ಮತಕ್ಷೇತ್ರದಲ್ಲಿ ನಡೆಯುವ ಕಾಮಗಾರಿ, ಯೋಜನೆ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಬೇಕು. ಆದ್ರೆ, ಆ ಕೆಲಸವನ್ನ ಇವರು ಮಾಡದೆ ಬಹುತೇಕ ಇವರ ಮಗ ಅಶೋಕ ಮನಗೂಳಿ ಮಾಡ್ತಾರೆ ಎಂತಿದ್ದಾರೆ ಸ್ಥಳೀಯರು.

ಪಟ್ಟಣದಲ್ಲಿರುವ ಕೆರೆ ಒಡ್ಡು ದುರಸ್ಥಿತಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಕೆಲಸ ಬಗ್ಗೆ ಸೂಚನೆ ನೀಡಿದ್ದು ಮೊದಲು ಅವರ ಮಗ. ನಂತರ ಶಾಸಕರು ಭೇಟಿ ನೀಡಿದ್ರು. ಇನ್ನು 1 ಕೋಟಿ ವೆಚ್ಚದಲ್ಲಿ ಗಣಿಹಾರ-ಚಾಂದಕವಟೆಗೆ ರಸ್ತೆಯ ಕಾಮಗಾರಿ ನಿರ್ಮಾಣ ಹಂತದಲ್ಲಿ ಸ್ಥಳ ವೀಕ್ಷಣೆ ಮಾಡಿ ಅಧಿಕಾರಿಗಳ ಜೊತೆ ಚರ್ಚಿಸಿ, ಅಂಕಿಸಂಖ್ಯೆ ವಿವರ ನೀಡಿದ್ದು ಸಹ ಶಾಸಕರ ಪುತ್ರ.

ಯಂಕಂಚಿ-ಗುತ್ತರಗಿ ನಡುವೆ ನಡೆದ ಸೇತುವೆ ಕಾಮಗಾರಿ ಹಾಗೂ ರಸ್ತೆ ಡಾಂಬರೀಕರಣದ ಕುರಿತು ವೀಕ್ಷಣೆ ಮಾಡಿದ್ರು. ಈ ವೇಳೆ ಮಾತ್ನಾಡಿದ್ದ ಅವರು, ಯಂಕಂಚಿಯಿಂದ ಗುತ್ತರಗಿವರೆಗಿನ ರಸ್ತೆ ಡಾಂಬರೀಕರಣ, ಸೇತುವೆ ಕಾಮಗಾರಿಗೆ 5.5 ಕೋಟಿ, ಯಂಕಂಚಿಯಿಂದ ಬಂಟನೂರುವರೆಗೆ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ 5.5 ಕೋಟಿ, ಯಂಕಂಚಿಯಿಂದ ಸುಂಗಠಾಣಕ್ಕೆ ಹೋಗುವ 1 ಕಿಲೋ ಮೀಟರ್ ರಸ್ತೆ, ಎರಡು ಬದಿ ಚರಂಡಿ ಹಾಗೂ ಸಿಸಿ ರಸ್ತೆಗೆ 1.30 ಲಕ್ಷ ವೆಚ್ಚದ ಕಾಮಗಾರಿ ನಡೆದಿದೆ ಎಂದು ಹೇಳಿದ್ರು.

ಇನ್ನು ತಾಲೂಕಿನ ಡಂಬಳ ಗ್ರಾಮದಲ್ಲಿನ ಅಣ್ಣಪ್ಪ ಮುತ್ಯಾನ ದೇವಸ್ಥಾನದ ಸಮುದಾಯ ಭವನ ಕಾಮಗಾರಿಯನ್ನ ಸಹ ಶಾಸಕರ ಪುತ್ರ ಅಶೋಕ ಮನಗೂಳಿ ಅವರು ವೀಕ್ಷಿಸಿ, 4.20 ಲಕ್ಷ ವೆಚ್ಚದಲ್ಲಿ ಆಗ್ತಿದ್ದು, ಶಾಸಕರ ಅನುದಾನದಲ್ಲಿ ಒಮ್ಮೆಗೆ ಹಣ ಬರುತ್ತೆ ಎಂದಿದ್ರು. ಹೀಗೆ ತಾಲೂಕಿನಾದ್ಯಂತ ನಡೆಯುತ್ತಿರುವ, ನಡೆಯುವ ಕಾಮಗಾರಿಗಳ ವಿಷಯದಲ್ಲಿ ಸಂವಿಧಾನಬದ್ಧವಾಗಿ ಶಾಸಕರು ಭಾಗಿಯಾಗಿ, ಅದರ ವೀಕ್ಷಣೆ ಮಾಡುವ ಮೂಲಕ ಗುಣಮುಟ್ಟ ಪರೀಕ್ಷಿಸಬೇಕು. ಮಾಧ್ಯಮಗಳಿಗೆ ಮಾಹಿತಿ ನೀಡಬೇಕು. ಆದ್ರೆ, ಶಾಸಕರ ಬದಲು ಅವರ ಪುತ್ರ ಈ ಕೆಲಸಗಳನ್ನ ಮಾಡುತ್ತಾ, ಮಾಧ್ಯಮಕ್ಕೆ ಮಾಹಿತಿ ನೀಡ್ತಾರೆ. ಇದನ್ನ ಮಾಡಲು ಇವರಿಗೆ ಯಾವುದೇ ರೀತಿಯಿಂದ ಸಂವಿಧಾನಬದ್ಧವಾದ ಹಕ್ಕು, ಅಧಿಕಾರ ಇಲ್ಲ. ಆದ್ರೂ, ಕಾಣಿಸಿಕೊಳ್ತಾರೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕ್ತಿದ್ದಾರೆ.

ಶಾಸಕರು ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಚಾಲನೆ ನೀಡಿದ್ಮೇಲೆ ಅತ್ತ ಕಡೆ ಸುಳಿಯುವುದಿಲ್ಲ. ಕಾಮಗಾರಿ ಚಾಲನೆ ಬಳಿಕ ಎಲ್ಲ ಕೆಲಸವೂ ಅವರ ಮಗ ಮಾಡಿಕೊಂಡು ಹೋಗ್ತಾರೆ ಎಂದು ಜನರು ಮಾತ್ನಾಡ್ತಿದ್ದಾರೆ. ಹೀಗಾಗಿ ಶಾಸಕರ ಕಾರ್ಯವೈಖರಿ ಬಗ್ಗೆ ಜನ ಮಾತ್ನಾಡಿಕೊಳ್ತಿದ್ದು, ಎಂ.ಸಿ ಮನಗೂಳಿ ಅವರು ಉತ್ಸವಮೂರ್ತಿಯಾದ್ರಾ ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!