ಮಂತ್ರಿಗಳೇ ಇಲ್ಲದ ಸರ್ಕಾರ.. ಆಡಳಿತ ಯಂತ್ರ ಸ್ತಬ್ಧ.. ಜನರ ಗೋಳು ಕೇಳೋದ್ಯಾರು?

387

ಬೆಂಗಳೂರು: ರಾಜ್ಯ ರಾಜಕೀಯ ಬೆಳವಣಿಗೆಯಿಂದ ಮೈತ್ರಿ ಸರ್ಕಾರದ ಸಚಿವರೆಲ್ಲ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ ಸಿಎಂ ಒಬ್ಬರನ್ನ ಬಿಟ್ಟು ಮಂತ್ರಿಗಳಿಲ್ಲದ ಸರ್ಕಾರವಿದೆ. ರಾಜ್ಯ ರಾಜಕೀಯ ಇತಿಹಾಸದಲ್ಲಿ ಇಂತಹದೊಂದು ಪರಿಸ್ಥಿತಿ ಬಂದಿರ್ಲಿಲ್ಲ. ಆದ್ರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಕೊಟ್ಟ ಏಟಿಗೆ ರಾಜ್ಯದಲ್ಲಿ ವಿಚಿತ್ರ ವಾತಾವರಣ ನಿರ್ಮಾಣವಾಗಿದೆ.

ಕಾಂಗ್ರೆಸ್ ಸಚಿವರು ಮಾಜಿ ಸಿಎಂ ಸಿದ್ದರಾಮಯ್ಯನವರ ಬಳಿ ಹಾಗೂ ಜೆಡಿಎಸ್ ಸಚಿವರು ಸಿಎಂ ಕುಮಾರಸ್ವಾಮಿ ಬಳಿ ರಾಜೀನಾಮೆ ಪತ್ರವನ್ನ ಸಲ್ಲಿಸಿದ್ದಾರೆ. ಇದ್ರಿಂದಾಗಿ ಮಂತ್ರಿಗಳೇ ಇಲ್ಲದ ಸರ್ಕಾರಕ್ಕೆ ನಾಯಕನಾಗಿರೋದು ಕುಮಾರಸ್ವಾಮಿ ಅವರು. ಸಿಎಂ ಹೊರತು ಪಡಿಸಿ ಎಲ್ಲ ಸಚಿವ ಸ್ಥಾನಗಳು ಇದೀಗ ಖಾಲಿ ಖಾಲಿಯಾಗಿವೆ. ಇದ್ರಿಂದಾಗಿ ಆಡಳಿತ ಯಂತ್ರ ಸಂಪೂರ್ಣವಾಗಿ ಸ್ತಬ್ಧವಾಗಿದೆ ಎನ್ನಬಹುದು. ಇಲಾಖಾವಾರು ಆಗಬೇಕಿರುವ ಕೆಲಸಗಳಿಗೆಲ್ಲ ಬ್ರೇಕ್ ಬಿದ್ದಿರುತ್ತೆ.

ಆಯಾ ಇಲಾಖೆಗೆ ಸಂಬಂಧಿಸಿದ ಸಚಿವರೇ ಇಲ್ಲದ್ಮೇಲೆ, ಸರ್ಕಾರಿ ಅಧಿಕಾರಿಗಳು ಎಷ್ಟರ ಮಟ್ಟಿಗೆ ಕೆಲಸ ಮಾಡ್ತಾರೆ. ಅವರ ಇಲಾಖೆಯ ಯೋಜನೆಗಳ ಕುರಿತು ಯಾರ ಜೊತೆ ಚರ್ಚಿಸಬೇಕು. ಸಾರ್ವಜನಿಕರಿಗೆ ಯಾವ ರೀತಿ ಕೆಲಸ ಮಾಡಿಕೊಡಬೇಕು ಅನ್ನೋದು ಗೊತ್ತಾಗ್ತಿಲ್ಲ. ಅನುಭವಿ ಅಧಿಕಾರಿಗಳಿದ್ರೂ ಸಹ ಪ್ರಮುಖ ಯೋಜನೆಗಳಿಗೆ ಸಚಿವಾಲಯದ ಒಪ್ಪಿಗೆ ಜೊತೆಗೆ ಹಣ ಬಿಡುಗಡೆ ಮಾಡಬೇಕಾಗುತ್ತೆ. ಇದೀಗ ಅದೆಲ್ಲವೂ ಬಂದ್ ಆಗಿರುವ ಸಾಧ್ಯತೆ ಹೆಚ್ಚು. ಇದ್ರಿಂದಾಗಿ ಸಾರ್ವಜನಿಕರ ಗೋಳು ಕೇಳೋದ್ಯಾರು ಅನ್ನೋ ಪ್ರಶ್ನೆ ಮೂಡಿದೆ.

ಈಗಾಗ್ಲೇ ಕೃಷಿಹೊಂಡ ಯೋಜನೆ ಸೇರಿದಂತೆ ಅನೇಕ ಯೋಜನೆಗಳಿಗೆ ಬಿಡುಗಡೆಯಾಗಬೇಕಿದ್ದ ಹಣ ಇನ್ನೂ ಬಿಡುಗಡೆಯಾಗಿಲ್ಲ. ಸರಿಯಾಗಿ ಮಳೆಯಿಲ್ಲದಕ್ಕೆ ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಬರಗಾಲದ ಪರಿಸ್ಥಿತಿ ಮುಂದುವರೆದಿದೆ. ಹೀಗೆ ಮೂಲಭೂತ ಸೌಕರ್ಯಗಳನ್ನ ಒದಗಿಸಬೇಕಾದ ಇಲಾಖೆಯ ಸಚಿವರಿಲ್ಲದ ಕಾರಣ, ಜನರು ಪಡಬಾರದ ಪಾಡು ಪಡ್ತಿರುವುದು ಮಾತ್ರ ಸತ್ಯ.




Leave a Reply

Your email address will not be published. Required fields are marked *

error: Content is protected !!