ಅರೆಕಾಲಿಕ ಬ್ರಹ್ಮಚಾರಿಗಳ ಟೆಕಿಲಾ ಲೈಫ್

875

ಪರ್ಷಿಯನ್ ಕವಿ ಉಮರ್ ಖಯ್ಯಾಮ್ ಹೇಳ್ತಾನೆ, ಒಂದು ಮದ್ಯದ ಬಟ್ಟಲು, ಒಂದು ಚೂರು ರೊಟ್ಟಿ, ಒಂದು ಹಾಡು ಮತ್ತು ನೀನು ಇದ್ದರೆ ಸಾಕು ಎಂದು.. ಅಂದ್ರೆ, ಜಗತ್ತಿನ ಯಾವ ಜಂಜಾಟವಿಲ್ಲದೆ ಮನಸ್ಸಿಗೆ ಯಾವುದು ಖುಷಿ ಕೊಡುತ್ತೋ ಅಷ್ಟು ಇದ್ದರೆ ಸಾಕು. ಹೆಚ್ಚಿಗೆ ಯಾವುದರ ಆಸೆ ನನಗಿಲ್ಲ ಅನ್ನೋದು. ಮೀಡಿಯಾದಲ್ಲಿರುವ ಈ ಅರೆಕಾಲಿಕ ಬ್ರಹ್ಮಚಾರಿಗಳ ಮನಸ್ಸು ಸಹ ಇಷ್ಟನ್ನೆ ಬಯಸುತ್ತಿರುತ್ತೆ. ಸರಿಯಾದ ಟೈಂಗೆ ಸಂಬಳ, ಬೇಕಾದ ಟೈಂಗೆ ಒಂದಿಷ್ಟು ಎಣ್ಣೆ, ತುಂಡು, ಧಮ್ ಇದ್ರೆ ಜಿಂದಗಿ ಚಲೇಗಾ ಅಂತಾರೆ.

ಆರಂಭದಲ್ಲಿ ಕೆಲಸಕ್ಕೆ ಸೇರಿದ ಹುಡ್ಗರ ಸಂಬಳ 10 ಸಾವಿರ ರೂಪಾಯಿ. ಅದರಲ್ಲಿ ಪಿಎಫ್ ಕಟ್ ಆಗಿ ಎಂಟೂವರೆಯಿಂದ ಒಂಬತ್ತು ಸಾವಿರ ಬರಬಹುದು. ಈ ದುಡ್ಡಿನಲ್ಲಿ ರೂಮ್ ಬಾಡಿಗೆ, ಬಸ್ ಪಾಸ್, ತಿಂಗಳ ಪೂರ್ತಿ ಟಿಫಿನ್, ಊಟ, ಸಣ್ಣಪುಟ್ಟ ಖರ್ಚಗಳು ಅಂತಾ ಏನೇ ಲೆಕ್ಕಾ ಹಾಕಿದ್ರೂ ಎರಡು ವರ್ಷದ ತನಕ ಪ್ರತಿ ತಿಂಗಳ ಕೊನೆ ವಾರದಲ್ಲಿ ಆಫೀಸ್ ಸೀನಿಯರ್ಸ್ ಬಳಿ ಕೈಚಾಚುವುದು ತಪ್ಪಲ್ಲ. ಹೀಗಿದ್ರೂ, ಇವರಿಗೆ ಒಬ್ಬಳು ಗರ್ಲ್ಡ್ ಫ್ರೆಂಡ್ ಇರ್ತಾಳೆ. ಊರಲ್ಲಿದ್ರೆ ಫೋನ್ ಗೆ ಕೆಲಸ. ಆಫೀಸ್ ನಲ್ಲಿದ್ರೆ ಕ್ಯಾಂಟೀನ್, ಸಿನ್ಮಾ, ಮಾಲ್ ಸುತ್ತಾಟ. ಯಾವುದ್ಯಾವುದೋ ನೆಪದಲ್ಲಿ ತೀರ್ಥ ಸಮಾರಾಧನೆ ನಡೆಯುತ್ತಲೇ ಇರುತ್ತೆ. ಏನೂ ಇಲ್ಲದವನು ತನ್ನ ಒಂಟಿತನಕ್ಕೆ ತಾನೆ ಒಟಒಟ ಅಂತಾ ಒಬ್ಬೊಬ್ಬನೆ ಮಾತ್ನಾಡಿಕೊಳ್ಳತಾನೆ.

ಇದೊಂದು ತರ ಕಾಲೇಜ್ ಹಾಸ್ಟೆಲ್ ಲೈಫ್. ಆ ಕಡೆ ತುಂಬಾ ಖುಷಿನೂ ಪಡೋದಕ್ಕೆ ಆಗಲ್ಲ. ಈ ಕಡೆ ಬೇಸರ ಮಾಡಿಕೊಳ್ಳುವುದಕ್ಕೂ ಆಗಲ್ಲ. ರೂಮಿನಲ್ಲಿ ಮೂರ್ನಾಲ್ಕು ಜನ ಸ್ನೇಹಿತರಿದ್ರೂ ಎಲ್ಲರೂ ಒಟ್ಟಿಗೆ ಇರೋದು ಏನಾದ್ರೂ ಪವಾಡ ನಡೆದಾಗ್ಲೇ. ಯಾಕಂದ್ರೆ, ಇರೋರೆಲ್ಲ ಒಂದೇ ಆಫೀಸ್ ನಲ್ಲಿ ಕೆಲಸ ಮಾಡ್ತಿದ್ರೂ, ಶಿಪ್ಟ್ ಪ್ರಕಾರ ರೂಮ್ ಖಾಲಿ ಮಾಡ್ತಿರಬೇಕು. ಅದರಲ್ಲೂ ಒಬ್ಬ ಡೆಸ್ಕ್ ನಲ್ಲಿ, ಇನ್ನೊಬ್ಬ ರಿಪೋರ್ಟಿಂಗ್, ಮಗದೊಬ್ಬ ಎಡಿಟಿಂಗ್ ಅಂತಾನೋ ಅಥವ ಇನ್ಯಾವುದೋ ಡಿಪಾರ್ಟ್ ಮೆಂಟ್ ನಲ್ಲಿ ಇದ್ರೆ ಒಟ್ಟಿಗೆ ಇರೋದೆಲ್ಲಿಂದ ಬಂತು. ನಿನ್ನ ಪಾಡಿಗೆ ನೀನು ಆಫೀಸಿಗೆ ಹೋಗು. ಅವನ ಪಾಡಿಗೆ ಅವನು ರೂಮಿಗೆ ಬರ್ತಾನೆ.

ಹೀಗೆ ಇರುವ ಹುಡ್ಗರು ನಳಮಹಾರಾಜರಾಗಿರ್ತಾರೆ. ಮುಂಜಾನೆ ಟಿಫಿನ್ ಒಬ್ನು ಮಾಡ್ತಾನೆ. ಸೆಕೆಂಡ್ ಶಿಪ್ಟ್ ಇದ್ದವನು ಮಧ್ಯಾಹ್ನ ರಾತ್ರಿ ಸೇರಿಸಿ ಅಡುಗೆ ಮಾಡಿಟ್ಟು ಹೋಗ್ತಾನೆ. ಸಂಜೆ ಬಂದವನು ಇನ್ನೊಂದು ಏನೋ ಮಾಡಿ ತಿಂದ್ಕೊಂಡು ಇರ್ತಾನೆ. ಹೀಗಾಗಿ ಬರೋ ಕಡಿಮೆ ಸ್ಯಾಲರಿಯಲ್ಲಿ ತಿಂಗಳಪೂರ್ತಿ ಒದ್ದಾಟದ ಜೀವನ ನಡೆಸೋ ಹುಡ್ಗರು ಅಪರೂಪಕ್ಕೆ ರೂಮಿನಲ್ಲಿ ಎಲ್ಲರೂ ಒಟ್ಟಿಗೆ ಇದ್ರೆ ಸಾಕು, ಫಾಸ್ಟ್, ಪ್ರಸಂಟ್, ಪ್ಯೂಚರ್ ಮಿಕ್ಸ್ ಮಾಡಿ ಟೆಕಿಲಾ ಲೈಫ್ ಬಗ್ಗೆ ಚರ್ಚೆ ಮಾಡ್ತಾರೆ. ಇವರ ಪರ್ಸ್ ಗಳು ಖಾಲಿ ಇದ್ರೂ, ಕಾಣುವ ಕನಸುಗಳು ಯಾವತ್ತೂ ಖಾಲಿಯಾಗುವುದಿಲ್ಲ. ಯಾಕಂದ್ರೆ, ಈ ಮೀಡಿಯಾ ಬದುಕು ಅಷ್ಟೊಂದು ಪಾಠ ಕಲಿಸಲು ಶುರು ಮಾಡಿರುತ್ತೆ.

ಹೀಗೆ ರೂಮಿನಲ್ಲಿರುವ ಹುಡ್ಗರ ಮಧ್ಯೆ ತುಂಬಾ ಆತ್ಮೀಯತೆ ಬೆಳದಿರುತ್ತೆ. ಊರು ಬಿಟ್ಟು ಬಂದವರಿಗೆ ಇರುವವರೆ ಎಲ್ಲ ಆಗಿರ್ತಾರೆ. ಹೀಗಾಗಿರುವಾಗ ಒಂದಿಷ್ಟು ವೈಮನಸ್ಸು ಏನಾದ್ರೂ ಮೂಡಿದ್ರೆ ರೂಮು ಅನ್ನೋದು ಜೈಲು ಆಗಿ ಬಿಡುತ್ತೆ. ನಗು, ಹರಟೆ ಜಾಗದಲ್ಲಿ ಗಾಢವಾದ ಮೌನ ಆವರಿಸಿಕೊಂಡು ಬಿಡುತ್ತೆ. ಮಾತಿಗೂ ದುಡ್ಡು ಕೊಡಬೇಕು ಅನ್ನೋ ಹಾಗೆ ಮಾತುಗಳು ಮಿತಿಯಲ್ಲಿರುತ್ತವೆ. ಆಗ ಕೆ.ಎಸ್ ನರಸಿಂಹಸ್ವಾಮಿ ಅವರ ‘ಮಾತು ಬರುವುದು ಎಂದು ಮಾತಾಡುವುದು ಬೇಡ, ಒಂದು ಮಾತಿಗೆ ಎರಡು ಅರ್ಥವುಂಟು, ಎದುರಿಗಿರುವವ ಕೂಡ ಮಾತು ಬಲ್ಲವ ಗೆಳೆಯ, ಬರಿದೆ ಆಡುವ ಮಾತಿಗೆ ಅರ್ಥವಿಲ್ಲ’ ಅನ್ನೋ ಸಾಲುಗಳು ಕಾಡಲು ಶುರು ಮಾಡ್ತವೆ.

ಮೌನ ತುಂಬಿದ ಮನಸ್ಸು ಹೊಸ್ತಿಲು ದಾಟಿ ಹೋಗಬೇಕು ಅನ್ನುತ್ತೆ. ಆದ್ರೂ ಯಾವುದೋ ಕಾರಣಕ್ಕೆ ಅಲ್ಲಿಯೇ ಒಂದಿಷ್ಟು ದಿನ ಬೀಡು ಬಿಟ್ಟಿರುತ್ತೆ. ಆ ದಿನಗಳು ನಿಜಕ್ಕೂ ಯಾತನೆಯಿಂದ ಕೂಡಿರುತ್ತೆ. ಅವರವರ ಪಾಡಿಗೆ ಅವರು ಅಡುಗೆ ಮಾಡಿಕೊಂಡು ಊಟ ಮಾಡ್ತಾರೆ. ಆಫೀಸಿಗೆ ಹೋಗ್ತಾರೆ. ಯಾಕೆ ಮಲಗಿದಿಯಾ.. ಊಟ ಆಯ್ತಾ.. ಹುಷಾರ್ ಆಗಿದೆಯಾ ಅನ್ನೋ ಯಾವ ಪದಗಳಿಗೂ ಅಲ್ಲಿ ಜಾಗ ಇರೋದಿಲ್ಲ. ಆಗ ಇಡೀ ಕುಟುಂಬ ಕಣ್ಮುಂದೆ ಬರುತ್ತೆ. ಹೆತ್ತವರು, ಒಡಹುಟ್ಟಿದವರು ನಮ್ಮ ಜೊತೆಗಿದ್ದಿದ್ರೆ, ನಮ್ಮ ಅನುವ ತನುವ ಕೇಳ್ತಾರೆ. ಕಾಳಜಿ ತೋರಿಸ್ತಾರೆ. ಪ್ರೀತಿ ನೀಡ್ತಾರೆ. ನಾನು ಒಂಟಿ ಅಲ್ಲವೆಂಬ ಭಾವನೆಯನ್ನ ದೂರ ಮಾಡ್ತಾರೆ ಅನ್ನೋ ಯೋಚನೆಗಳು ತಲೆ ತುಂಬಾ ತುಂಬಿಕೊಂಡು ಬಿಡುತ್ತೆ. ಹೀಗಾಗಿ ಸಾಕು ರೂಮಿನ ಸಹವಾಸ. ಯಾರೊಂದಿಗೂ ಇರೋದು ಬೇಡ. ಒಂಟಿಯಾಗಿ ಆರಾಮಾಯಾಗಿ ಇರೋದು ಬೆಸ್ಟ್. ಎದುರಿಗೆ ಸಿಕ್ಕಾಗ ಒಂದಿಷ್ಟು ಮಾತು. ಒಂದ್ ಕಪ್ ಟೀ…

ಏನೇ ಆದ್ರೂ ಈ ಅರೆಕಾಲಿಕ ಮೀಡಿಯಾ ಬ್ರಹ್ಮಚಾರಿಗಳ ಲೈಫ್ ಸೂಪರ್. ಈ ಮುರುಕು ಕಪಾಟಿನಲ್ಲಿ ಖಾಲಿ ಬಾಟಲಿಗಳು, ಮೋಟು ಸಿಗರೇಟ್ ಗಳು, ಒಂದಿಷ್ಟು ಸಿನ್ಮಾ ಟಿಕೆಟ್ ಗಳು, ಸೆನ್ಸಾರ್ ಕಟ್ ಮಾತುಗಳು, ಅಡುಗೆ ಮಾಡದೆ ಬಿಟ್ಟಿರುವ ಕಿರಾಣಿ ಐಟಂಗಳು, ಒಣಗಿ ಹೋಗಿರುವ ತರಕಾರಿಗಳು ಇತ್ಯಾದಿ…




Leave a Reply

Your email address will not be published. Required fields are marked *

error: Content is protected !!