ನಾಳೆ ಹುಬ್ಬಳ್ಳಿಗೆ ರಾಷ್ಟ್ರಪತಿ: ಸಿದ್ಧತೆ ಪೂರ್ಣ

196

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಗೆ ಸೆಪ್ಟೆಂಬರ್ 26 ರಂದು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಏರ್ಪಡಿಸಿರುವ ಪೌರಸನ್ಮಾನ ಕಾರ್ಯಕ್ರಮಕ್ಕೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ ಎಂದು ಮಹಾಪೌರ ಈರೇಶ ಅಂಚಟಗೇರಿ ಹೇಳಿದರು.

ದೇಶಪಾಂಡೆ ನಗರದ ಜಿಮಖಾನ್ ಮೈದಾನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ರಾಷ್ಟ್ರಪತಿಯವರು ಮಹಾನಗರಪಾಲಿಕೆಯ ಆಮಂತ್ರಣ ಮನ್ನಿಸಿ,ಪೌರಸನ್ಮಾನ ಸ್ವೀಕರಿಸಲು ಆಗಮಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಶ್ರೀ ಸಿದ್ಧಾರೂಢರ ಪ್ರತಿಮೆ ಹಾಗೂ ಸಿದ್ಧಾರೂಢರ ಮಹಾತ್ಮೆ ಕುರಿತಾದ ಹಿಂದಿ ಮತ್ತು ಇಂಗ್ಲೀಷ್ ಭಾಷೆಯ ಗ್ರಂಥಗಳನ್ನು ನೀಡಿ ಗೌರವಿಸಲಾಗುವುದು.ಪಾರಂಪರಿಕ ಧಾರವಾಡ ಪೇಡೆ ಒಳಗೊಂಡ ಉಡುಗೊರೆಯನ್ನು ನೀಡಲಾಗುತ್ತದೆ .

ಈ ಕಾರ್ಯಕ್ರಮದಲ್ಲಿ, ರಾಜ್ಯಪಾಲರು, ಮುಖ್ಯಮಂತ್ರಿಯವರು, ಕೇಂದ್ರ ಸಚಿವರು, ಶಾಸಕರು, ಪಾಲಿಕೆ ಸದಸ್ಯರು, ಮಾಜಿ ಮಹಾಪೌರರು, ಪಾಲಿಕೆಯ ಮಾಜಿ ಸದಸ್ಯರು,ಅವಳಿನಗರದ ವೈದ್ಯರು, ಹಿರಿಯ ನಾಗರಿಕರು ಸೇರಿದಂತೆ ಇತರರಿಗೆ ಆಹ್ವಾನ ನೀಡಲಾಗಿದೆ. 5 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಮೇಲೆ 27 ಜನರಿಗೆ ಅವಕಾಶ ಕಲ್ಪಿಸಲು ಕೋರಲಾಗಿದೆ. ರಾಷ್ಟ್ರಪತಿಯವರ ಶಿಷ್ಟಾಚಾರ ಹಾಗೂ ಕೋವಿಡ್ ನಿಯಮಗಳನ್ನು ಪಾಲಿಸಲಾಗುವುದು. ಅವಳಿ ನಗರಗಳ ಹಿರಿಮೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಕಾರ್ಯಕ್ರಮ ಇದಾಗಿದೆ.

ರಾಷ್ಟ್ರಪತಿಯವರು ವಿಮಾನ ನಿಲ್ದಾಣದಿಂದ ಬರುವಾಗ ಮತ್ತು ಪುನಃ ಹಿಂದಿರುಗುವ ಮಾರ್ಗದ ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರ ಸ್ಥಗಿತಗೊಳಿಸಲಾಗುವುದು. ನಂತರ ಯಥಾ ಪ್ರಕಾರ ರಸ್ತೆಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು ಎಂದರು.

ಪಾಲಿಕೆ ಆಯುಕ್ತ ಡಾ. ಬಿ.ಗೋಪಾಲಕೃಷ್ಣ,
ಉಪಮೇಯರ್ ಉಮಾ ಮುಕುಂದ, ಸಭಾ ನಾಯಕ ತಿಪ್ಪಣ್ಣ ಮಜ್ಜಗಿ, ವಿರೋಧ ಪಕ್ಷದ ನಾಯಕ ರಾಜಾರಾವ್ ಮನ್ನೆಕುಂಟ್ಲ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ,ಶಿವು ಹಿರೇಮಠ, ರೂಪಾಶೆಟ್ಟಿ, ನಜೀರ ಅಹ್ಮದ್ ಮೆಹಬೂಬಸಾಬ ಹೊನ್ಯಾಳ, ಶಿವಾನಂದ ಮೆಣಸಿನಕಾಯಿ, ವಿಜಯಾನಂದ ಶೆಟ್ಟಿ ಇತರರು ಉಪಸ್ಥಿತರಿದ್ದರು. ಪಾಲಿಕೆ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ ಸ್ವಾಗತಿಸಿದರು.




Leave a Reply

Your email address will not be published. Required fields are marked *

error: Content is protected !!