ಗೃಹ ಸಚಿವ ಪರಮೇಶ್ವರ್ ರಾಜೀನಾಮೆಗೆ ಕೆಆರ್ ಎಸ್ ಆಗ್ರಹ

200

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ನಿರಂತರವಾಗಿ ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ, ಅತ್ಯಾಚಾರಗಳು ನಡೆಯುತ್ತಿವೆ. ಇದನ್ನು ತಡೆಯುವಲ್ಲಿ ವಿಫಲರಾದ ಗೃಹ ಸಚಿವ ಪರಮೇಶ್ವರ್ ರಾಜೀನಾಮೆ ನೀಡಬೇಕೆಂದು ಕೆಆರ್ ಎಸ್ ಪಕ್ಷ ಆಗ್ರಹಿಸಿದೆ.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಲಾಯಿತು. ಈ ವೇಳೆ ಮಾತನಾಡಿದ ಪಕ್ಷದ ಉಪಾಧ್ಯಕ್ಷ ಲಿಂಗೇಗೌಡ, ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಲ್ಲಿ ಗೃಹ ಸಚಿವ ಪರಮೇಶ್ವರ್ ಅವರು ಉಡಾಫೆ ತನದಿಂದ ನಡೆದುಕೊಳ್ಳುತ್ತಿದ್ದಾರೆ. ಅವರಿಗೆ ಇಲಾಖೆ ಮೇಲೆ ಹಿಡಿತವಿಲ್ಲ. ತಮಗೂ ಗೃಹ ಇಲಾಖೆಗೂ ಸಂಬಂಧವಿಲ್ಲದಂತೆ ಇದ್ದಾರೆ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಕಾರ್ಯದರ್ಶಿ ಹಾಗೂ ಯುವ ಘಟಕದ ಉಸ್ತುವಾರಿ ರಘು ಜಾಣಗೆರೆ ಮಾತನಾಡಿ, ಸೌಜನ್ಯ ಪ್ರಕರಣದಿಂದ ಹಿಡಿದು ಇತ್ತೀಚಿನ ಹಾನಗಲ್ ಪ್ರಕರಣದ ತನಕ ಪರಮೇಶ್ವರ್ ಅವರು ಉಡಾಫೆಯಿಂದ ಮಾತನಾಡುತ್ತಿದ್ದಾರೆ. ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗಬೇಕೆಂದು ಕೆಆರ್ ಎಸ್ ಪಕ್ಷ ಧರ್ಮಸ್ಥಳದಿಂದ ಬೆಂಗಳೂರು ಅವರೆಗೂ ಪಾದಯಾತ್ರೆ ಮಾಡಿತು. ಆದರೆ, ಇದುವರೆಗೂ ಯಾವುದೇ ಕ್ರಮವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್, ರಾಜ್ಯ ಕಾರ್ಯದರ್ಶಿಗಳಾದ ಮಂಜುನಾಥ್ ಎಸ್, ವಿ.ಆರ್ ಮರಾಠೆ, ಸೊಣ್ಣಪ್ಪಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಎಲ್.ಜೀವನ್, ಬಿ.ಜಿ ಕುಂಬಾರ್, ಕೇಶವಮೂರ್ತಿ, ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷೆ ಜನನಿ ವತ್ಸಲ ಹಾಗೂ ರಾಜ್ಯದ ವಿವಿಧ ಭಾಗದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು ಎಂದು ಪಕ್ಷದ ಮಾಧ್ಯಮ ಸಂಯೋಜಕಿ ಗೀತಾ ರಾಮು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!