ಸಿಂದಗಿ ಉಪ ಕದನ.. ಯಾರಿಗೆ ‘ಕೈ’ ಟಿಕೆಟ್?

356

ಪ್ರಜಾಸ್ತ್ರ ವಿಶೇಷ, ನಾಗೇಶ ತಳವಾರ

ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ಕಾವು ಜೋರಾಗುತ್ತಿದೆ. ಬೇಸಿಗೆ ಬಿಸಿಲಿನ ಜೊತೆಗೆ ಉಪ ಕದನದ ಬಿಸಿ ಹೆಚ್ಚಾಗುತ್ತಿದೆ. ಸಿಂದಗಿಯ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಉಪ ಚುನಾವಣೆ ನಡೆಯುತ್ತಿದ್ದು, ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಕಮಲದ ಕಿಂಗ್ ಆಗಲು ಹಳಬರು, ಹೊಸಬರ ನಡುವೆ ಫೈಟ್ ನಡೆದಿದೆ. ಕೈ ಪಾಳೆಯದಲ್ಲಿ ಮೂಲ ಹಾಗೂ ವಲಸಿಗ ನಾಯಕರ ಮಧ್ಯೆ ಹೋರಾಟ. ಇದರ ನಡುವೆ ‘ದಳ’ಪತಿ ಯಾರು ಅನ್ನೋ ಪ್ರಶ್ನೆ. ಈ ಎಲ್ಲ ಚದುರಂಗದಾಟದಲ್ಲಿ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಕಾಂಗ್ರೆಸ್ ನಲ್ಲಿ ಮೂಲ ನಾಯಕರಿಗೆ ಟಿಕೆಟ್ ತಪ್ಪುತ್ತಾ ಅನ್ನೋದು.

ಸಿಂದಗಿ ರಾಜಕೀಯದಲ್ಲಿ ಅಹಿಂದ ಮುಖಂಡರಿಗೆ ಭರವಸೆ ಇರುವುದು ಕಾಂಗ್ರೆಸ್ ಪಕ್ಷದಲ್ಲಿ. ಐಎನ್ ಸಿ ಎರಡಾಗಿ ಇಂದಿರಾ ಗಾಂಧಿ ಕಾಂಗ್ರೆಸ್ ನಿಂದ 1978ರಲ್ಲಿ ಮುಸ್ಲಿಂ ಸಮುದಾಯದಿಂದ ಮಹಿಬೂಬ್ ಬೆಕಿನಾಳಕರ ಶಾಸಕರಾದ್ರೆ, 1999ರಲ್ಲಿ ಕಾಂಗ್ರೆಸ್ ನಿಂದ ತಳವಾರ ಸಮಾಜದ ಶರಣಪ್ಪ ಸುಣಗಾರ ಶಾಸಕರಾಗಿದ್ದರು. 2018ರಲ್ಲಿ ಹಾಲುಮತ ಸಮಾಜದಿಂದ ಮಲ್ಲಣ್ಣ ಸಾಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು.

ಹೀಗೆ ಒಂದಲ್ಲ ಒಂದು ಚುನಾವಣೆಯಲ್ಲಿ ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಮೂಲಕ ಹಿಂದುಳಿದ ಹಾಗೂ ಮೂಲ ಕಾಂಗ್ರೆಸ್ ನಾಯಕರಿಗೆ ಅವಕಾಶ ನೀಡುತ್ತಾ ಬರ್ತಿದೆ. ಆದ್ರೆ, ಉಪ ಚುನಾವಣೆಯಲ್ಲಿ ಇದು ಅಸಾಧ್ಯ ಅನ್ನೋ ಮಾತುಗಳು ಕೇಳಿ ಬರ್ತಿವೆ. ಕಾರಣ, ಮೂಲ ಹಾಗೂ ವಲಸಿಗ ನಾಯಕರ ನಡುವಿನ ಫೈಟ್. ಈ ಹೋರಾಟದಲ್ಲಿ ಅಶೋಕ ಮನಗೂಳಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಇದ್ರಿಂದಾಗಿ ಕಾಂಗ್ರೆಸ್ ನ ಮೂಲ ನಾಯಕರು ಭವಿಷ್ಯದಲ್ಲಿ ಶಾಸಕರಾಗುವುದು ಕಷ್ಟಸಾಧ್ಯ ಅನ್ನೋ ವಿಶ್ಲೇಷಣೆ ನಡೆದಿದೆ.

ಇನ್ನು ಅಲ್ಪಸಂಖ್ಯಾತ ಸಮುದಾಯದ ನಾಯಕರು ಕಾಂಗ್ರೆಸ್ ಟಿಕೆಟ್ ಕೇಳುತ್ತಿದ್ದಾರೆ. ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ್ದೇವೆ. ನಮಗೆ ಒಂದು ಅವಕಾಶ ಕೊಡಿ ಎನ್ನುತ್ತಿದ್ದಾರೆ. ಹೀಗಾಗಿ ಮೂಲ ನಾಯಕರು ಹಾಗೂ ವಲಸಿಗ ನಾಯಕರ ನಡುವೆ ಟಿಕೆಟ್ ಫೈಟ್ ಬಿರುಸಿನಿಂದ ಕೂಡಿದೆ. ಮಾರ್ಚ್ 19ರಂದು ಸಿಂದಗಿಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ಆಯೋಜನೆ ಮಾಡಿದ್ದು, ಇದಾದ ಬಳಿಕ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತೆ ಅನ್ನೋದಕ್ಕೆ ಉತ್ತರ ಸಿಗಲಿದೆ.




Leave a Reply

Your email address will not be published. Required fields are marked *

error: Content is protected !!