ಕಾಯಿಲೆ ಹಿಡಿದ ವ್ಯವಸ್ಥೆಗೆ ಚಾಟಿಯೇಟು

577

ಡಾ.ವಿನಯ ನಂದಿಹಾಳ ಅವರ ಮೂವಿ ಮಾತು ಅಂಕಣ ಬರಹ ಭಾಗ-7

ನಮ್ಮ ವ್ಯವಸ್ಥೆಯಲ್ಲಿ ಭ್ರಷ್ಟಚಾರದ ಬೇರುಗಳು ಅಲುಗಾಡಿಸದ ಹಾಗೇ ಆಳವಾಗಿ ಬೇರೂರಿವೆ. ಇದು ಮೇಲ್ಮೋಟಕ್ಕೆ ಸರಕಾರಿ ಕಛೇರಿ ಮತ್ತು ಇನ್ನಿತರ ಸ್ಥಳಗಳಲ್ಲಿ ಮಾತ್ರ ಇದೆ ಅನಿಸಬಹುದು. ಆದರೆ ಅವು ನಮ್ಮ ಮನಸ್ಸುಗಳಲ್ಲಿ ಬೇರೂರಿವೆ. ಅದರ ಪ್ರಮಾಣ ಎಷ್ಟೆಂದರೆ ಭ್ರಷ್ಟಾಚಾರ ಸರಿ ಎಂದು ದಿಟ್ಟವಾಗಿ ಸಮರ್ಥನೆ ಮಾಡಿಕೊಳ್ಳವಷ್ಟರ ಮಟ್ಟಿಗೆ ಇದೆ. ಇದಕ್ಕೆ ಕೆಲವರು ಮಾತ್ರ ಕಾರಣವಿರದೆ ನಾವೆಲ್ಲರೂ ಒಂದಲ್ಲ ಒಂದು ರೀತಿ ಕಾರಣ ಎನ್ನುವುದು ಸ್ಪಷ್ಟ. ನಾವು ಲಂಚ ನೀಡುವವರೆಗೂ ತೆಗೆದುಕೊಳ್ಳುವವರು ಇದ್ದೆ ಇರುತ್ತಾರೆ. ಒಮ್ಮೆಯಾದರೂ ಲಂಚ ನೀಡದೆ ಕೆಲಸ ಮಾಡಿಸಿಕೊಳ್ಳುವ ಧೈರ್ಯ ಮತ್ತು ತಾಳ್ಮೆ ನಮ್ಮಲ್ಲಿ ಮೂಡಿದರೆ ಮಾತ್ರ ಬದಲಾವಣೆ ಸಾಧ್ಯ. ಸಾಮಾನ್ಯ ನಾಗರೀಕನೊಬ್ಬ, ಒಂದು ಕೆಲಸವನ್ನು ಲಂಚ ನೀಡದೆ ಮಾಡಿಸಿಕೊಳ್ಳಲು ಪ್ರಯತ್ನಿಸಿದರೆ ಪಡಬಾರದ ಪಾಡುಗಳನ್ನು ಪಡುತ್ತಾನೆ. ಅಂತಹ ಪಾಡುಗಳನ್ನು ಪಟ್ಟು ರೋಷಗೊಂಡ ರೈತನ ಮಗಳೊಬ್ಬಳು, ರೈತ ಹಾಗೂ ವ್ಯವಸಾಯ ಅಭಿವೃದ್ಧಿ ಇಲಾಖೆಯನ್ನು ಹೈಜಾಕ್ ಮಾಡಿ ತನಗಾದ ಅನ್ಯಾಯವನ್ನು ಸರಿ ಪಡಿಸಿಕೊಳ್ಳಲು ಮಾಡುವ ಪ್ರಯತ್ನದ ಕಥಾವಸ್ತುವನ್ನು ಒಳಗೊಂಡ ಚಿತ್ರವೇ ಮಂಸೂರೆ ನಿರ್ದೇಶನದ ಆ್ಯಕ್ಟ್-1978.

ಲಾಕ್ ಡೌನ್ ನಂತರ ಥಿಯೇಟರ್ ನಲ್ಲಿ ಬಿಡುಗಡೆಯಾದ ಕನ್ನಡದ ಮೊದಲ ಚಿತ್ರ. ಹೀಗೆ ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕರ ಧೈರ್ಯ ಮತ್ತು ನಿರ್ದೇಶಕರ ಆತ್ಮವಿಶ್ವಾಸ ಕಾರಣವಾಗಿವೆ. ಇವರೆಡಕ್ಕೂ ಮುಖ್ಯವಾದದ್ದು ಚಿತ್ರದ ಕಟೆಂಟ್. ಕಟೆಂಟ್ ಚೆನ್ನಾಗಿದ್ದರೆ ಪ್ರೇಕ್ಷಕರು ಕೈಹಿಡಿದು ಪ್ರೋತ್ಸಾಹಿಸುತ್ತಾರೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಸದ್ಯ ಇದು ಅಮೇಜಾನ್ ಪ್ರೈಮ್, ಓಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಸ್ಟ್ರೀಮಿಂಗ್ ಗೊಳ್ಳುತ್ತಿದೆ. ಚಿತ್ರ ತಂಡಕ್ಕೆ ಮತ್ತೊಮ್ಮೆ ಥೇಟರ್ ನಲ್ಲಿ ಬಿಡುಗಡೆಗೊಂಡ ಸಂಭ್ರಮ ಭಾವವಿದೆ. ಇದು ಚಿತ್ರತಂಡದ ಸಿನಿಮಾ ಪ್ರೀತಿಯನ್ನು ತೋರಿಸುತ್ತದೆ. ಯಾಕೆ ಇದು ಪ್ರೇಕ್ಷಕನಿಗೆ ಕನೆಕ್ಟ್ ಆಗುತ್ತದೆ ಎಂದರೆ ಇಂತಹ ಸಂದರ್ಭವನ್ನು ಎಲ್ಲರು ಒಂದಲ್ಲ ಒಂದು ಬಾರಿ ಅನುಭವಿಸಿರುತ್ತಾರೆ. ಇದೊಂದು ನಿರ್ದಿಷ್ಟ ಜಾನರ್ ಸಿನಿಮಾ ಅಂತ ಹೇಳುವುದಕ್ಕೆ ಬರದಿದ್ದರು ಎಲ್ಲರಿಗೂ ಅನ್ವಯವಾಗುವ ಅಂಶಗಳು ಇದರಲ್ಲಿವೆ. ತುಂಬು ಗರ್ಭಿಣಿಯೊಬ್ಬಳು ತನಗಾದ ಅನ್ಯಾಯವನ್ನು ಸರಿ ಪಡಿಸಿಕೊಳ್ಳಲು ಒಂದು ಸರಕಾರಿ ಕಛೇರಿಯನ್ನು ಹೈಜಾಕ್ ಮಾಡುವುದು ಎಕ್ಸಟ್ರಿಮ್ ಅನಿಸುತ್ತದೆ. ಆದರೆ ಅದರ ಅನಿವಾರ್ಯತೆ ಎಷ್ಟಿತ್ತು ಎಂಬುದನ್ನು ನಿರ್ದೇಶಕರು ಮನಗಾಣಿಸುತ್ತಾರೆ. ಅದಕ್ಕೆ ಪೂರಕವಾಗಿ ಸುಮಾರು ದಿನಗಳಿಂದ ಹೋರಾಟಕ್ಕೆ ಕುಳಿತ ಗಾಂಧಿ ವೇಷದಾರಿಯೊಬ್ಬರನ್ನು ಬಳಸಿಕೊಂಡಿದ್ದಾರೆ.

ಕೆಲವೊಮ್ಮೆ ನ್ಯಾಯಕ್ಕಾಗಿ, ಸರಕಾರದ, ಜನರ ಗಮನ ಸೆಳೆಯುವುದಕ್ಕಾಗಿ ಅತೀರೇಕದ ಹೆಜ್ಜೆಗಳು ಅನಿವಾರ್ಯ ಎನ್ನುವಂತಿದೆ. ಇಂತಹ ಅಂಶಗಳನ್ನು ಗೀತಾ ಮತ್ತು ಅಜ್ಜ ಪ್ರತಿನಿಧಿಸುತ್ತಾರೆ. ತುಂಬು ಗರ್ಭಿಣಿ ಒಬ್ಬಳು ದೇಹಕ್ಕೆ ಬಾಂಬ್ ಕಟ್ಟಿಕೊಂಡು, ಕೈಯಲ್ಲಿ ಗನ್ ಹಿಡಿದುಕೊಂಡು ಸರಕಾರಿ ಕಛೇರಿಯನ್ನು ಹಿಡಿತಕ್ಕೆ ತೆಗೆದುಕೊಳ್ಳುವುದು ಅವಳ ಆತ್ಮ ವಿಶ್ವಾಸ ಹಾಗೂ ಅಸಹಾಯಕತೆ ಎರಡನ್ನು ಸೂಚಿಸುತ್ತದೆ. ಚಿತ್ರದಲ್ಲಿ ಆರಂಭದ ಸಂಭಾಷಣೆ ‘ಯಾರು ತಡೆಯುವವರು’ ಎಂದು ಪ್ರಾರಂಭವಾಗುತ್ತದೆ. ಅದಕ್ಕೆ ಉತ್ತರವಾಗಿ ಗೀತಾ ಇಲ್ಲಿ ಪಾತ್ರ ನಿರ್ವಹಿಸುತ್ತಾಳೆ. ಭ್ರಷ್ಟಚಾರದ ತಡೆ ಕೇವಲ ಕೆಲವರಿಂದಲ್ಲ, ಪ್ರತಿಯೊಬ್ಬರಿಂದ ಪ್ರಾರಂಭವಾಗಬೇಕೆಂಬುದನ್ನು ಗೀತಾ ಪಾತ್ರ ಒತ್ತಿ ಹೇಳುತ್ತದೆ. ಇದರಲ್ಲಿ ಎಲ್ಲರಿಗೂ ಅವರದೆಯಾದ ವೀವ್ ಆಫ್ ಪಾಯಿಂಟ್ಸ್ ಇವೆ. ಅದರಲ್ಲೂ ಸರಕಾರಿ ಅಧಿಕಾರಿಗಳು ತಾವು ಏಕೆ ಲಂಚ ತೆಗೆದುಕೊಳ್ಳುತ್ತವೆ ಎನ್ನುವುದಕ್ಕೆ ಅವರು ನೀಡುವ ಕಾರಣಗಳು ಎಲ್ಲರೂ ಹೀಗೆ ಮಾಡುತ್ತಾರೆ ನಾವಷ್ಟೇ ಅಲ್ಲ ಎನ್ನುವ ರೀತಿಯಲ್ಲಿವೇ ಮತ್ತು ಅವರು ನಿರ್ಮಿಸಿಕೊಂಡಿರುವ ಭೋಗ ಜೀವನ ಶೈಲಿಗೆ ಅನಿವಾರ್ಯ ಎನ್ನುವುದು ಅವರ ವಾದ. ಇದಕ್ಕೆ ಇಡೀ ಸಮಾಜವೇ ಹೊಣೆ ಎಂದರೆ ಅತಿಶೋಕ್ತಿಯಾಗಲಾರದು. ಒಟ್ಟು ಇಂತಹ ಅಂಶಗಳಿಗೆ ಚಿಕಿತ್ಸಕ ನೆಲೆಯಲ್ಲಿ ಈ ಚಿತ್ರ ರೂಪಗೊಂಡಿದೆ.

ಬದಲಾವಣೆಯನ್ನು ಬಯಸುವ ಗೀತಾಗೆ ಈ ಭಾವ ಬರಲು ವಿಧ್ಯಾರ್ಥಿಯಾಗಿ ಇದ್ದಾಗಲೇ ‘ಲಂಚ ನೀಡುವುದಿಲ್ಲ ಮತ್ತು ಪಡೆಯುವುದಿಲ್ಲ’ ಎಂದು ಮಾಡಿದ ಪ್ರಮಾಣ ಕಾರಣವಾಗುತ್ತದೆ. ಶಾಲೆಯಲ್ಲಿಯೇ ಮಕ್ಕಳಿಗೆ ಭ್ರಷ್ಟಾಚಾರದ ವಿರೋಧಿ ಭಾವನೆಗಳನ್ನು ಬೆಳಸಬೇಕೆಂದು ಇದು ಸೂಚನೆಗೈಯುತ್ತದೆ. ಅವಳು ಎಷ್ಟು ಬುದ್ದಿವಂತಳು ಮತ್ತು ಅವಳು ಹೊಂದಿದ ಕಾನೂನಿನ ತಿಳುವಳಿಕೆ ಪ್ರೇಕ್ಷಕನಿಗೆ ತಿಳಿಸಲು ರೂಪಿಸಿಕೊಂಡ ದೃಶ್ಯ ಮಹತ್ವದಾಗಿದೆ. ಅವಳು ಮನೆಯಿಂದ ಬರುವಾಗ ಸೊಳ್ಳೆಯನ್ನು ಕೊಲ್ಲುವುದು, ಮೀಡಿಯಾಗಳ ವರ್ತನೆ, ಗಾಂಧಿಜಿ, ಜಯಪ್ರಕಾಶ ನಾರಾಯಣ, ಲೋಹಿಯಾರ ಉಲ್ಲೇಖಗಳು ಇವೆಲ್ಲ ನಿರ್ದೇಶಕ ಮನೋರಂಜನೆ ಮೂಲಕ ಪ್ರೇಕ್ಷಕರನ್ನು ಎಜ್ಯುಕಟ್ ಮಾಡುವ ಪ್ರಯತ್ನದ ಭಾಗದಂತೆ ಗೋಚರಿಸುತ್ತದೆ. ಇನ್ನು ‘ಐ ನೀಡ್ ರೆಸ್ ಪೆಕ್ಟ್’ ಎಂದು ಗೀತಾ ಹೇಳುವ ಮಾತು ಪ್ರತಿಯೊಬ್ಬರಿಗೂ ದೊರಕಬೇಕಾದ ಗೌರವದ ಮಹತ್ವವನ್ನು ವಿವರಿಸುತ್ತದೆ. ಗರ್ಭಿಣಿ ತನ್ನ ನೋವಿನಲ್ಲಿ ‘ಎಲ್ಲ ಸರಿ ಹೋಗುತ್ತದೆ ಕಂದ’ ಎಂದು ಹೇಳುವುದು ಭವಿಷ್ಯದ ಕನಸಿನಂತೆ ಇದೆ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಒಬ್ಬರಾದರೂ ಒಂದು ಭಿನ್ನ ಹೆಜ್ಜೆ ಇಡಬೇಕಾದ ಅನಿವಾರ್ಯತೆಯ ರೂಪಕದಂತಿದೆ ಈ ಚಿತ್ರ. ಅಧಿಕಾರಿಗಳ ಮನಃಪರಿವರ್ತನೆ ಪ್ರಸಂಗ ನಾಟಕೀಯವಾಗಿದ್ದರು, ಹಣ ಮತ್ತು ಅಧಿಕಾರಕ್ಕಿಂತಲೂ ಜೀವ ಮತ್ತು ಮಾನವೀಯತೆ ಮುಖ್ಯವೆಂದು ಸಾರುತ್ತದೆ.

ಇಂತಹ ಕಥೆಯನ್ನು ಮಾಡಿಕೊಂಡಾಗ ಪಾತ್ರವರ್ಗದ ಆಯ್ಕೆ ಬಹುಮುಖ್ಯವಾಗುತ್ತದೆ. ಇದರಲ್ಲಿ ನಟ-ನಟಿಯರ ಒಂದು ದೊಡ್ಡ ದಂಡೇ ಇದೆ. ಇವೆರಲ್ಲರ ಡೇಟ್ ಹೇಗೆ ಹೊಂದಿಸಿದರು ಎಂಬುದು ಆಶ್ಚರ್ಯವಾಗುತ್ತದೆ. ಯಜ್ಞ ಶೆಟ್ಟಿ, ಬಿ.ಸುರೇಶ, ಪ್ರಮೋದ ಶೆಟ್ಟಿ, ದತ್ತಣ್ಣ, ಶೃತಿ, ಅವಿನಾಶ, ಅಚ್ಯುತಕುಮಾರ, ಶೋಭರಾಜ್, ಸುಧಾ ಬೆಳವಡಿ, ಕೃಷ್ಣ ಹೆಬ್ಬಾಳೆ, ಸಂಚಾರಿ ವಿಜಯ ಹೀಗೆ ಒಂದು ದೊಡ್ಡ ಪಟ್ಟಿ ಬೆಳೆಯುತ್ತದೆ. ಪರಿಚಿತ ಮುಖಗಳಷ್ಟೆ ಹೊಸ ಪ್ರತಿಭಾವಂತರ ಮುಖಗಳ ದರ್ಶನವು ಇದರಲ್ಲಿ ಲಭ್ಯವಿದೆ. ಈ ಎಲ್ಲರ ಸಹಜ ನಟನೆಯೇ ಚಿತ್ರದ ಶಕ್ತಿಯಾಗಿದೆ. ಯಜ್ಞ ಶೆಟ್ಟಿಯವರು ನಡೆದಾಡುವ, ಕುಳಿತುಕೊಳ್ಳುವ ಭಾವಭಂಗಿಗಳೆಲ್ಲವು ಅದ್ಭುತವಾಗಿವೆ. ಅವರ ಸಹಜ ನಟನೆ ಚಿತ್ರದ ಮಹತ್ವದ ಅಂಶವಾಗಿದೆ.

ಈ ಚಿತ್ರದ ಬರವಣಿಗೆ ಗಟ್ಟಿಯಾಗಿದೆ. ಅದನ್ನು ನಿರ್ದೇಶಕ ಮಂಸೋರೆಯವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಸತ್ಯ ಹೆಗಡೆಯವರ ಕ್ಯಾಮರ್ ಕೈ ಚಳಕ ಅಲ್ಲಲ್ಲಿ ಕಾಣುತ್ತದೆ. ಇನ್ನೂ ದೊಡ್ಡ ಕ್ಯಾನ್ ವಾಸ್ ಬೇಕಿತೇನೋ ಎನಿಸುತ್ತದೆ. ಹಿನ್ನೆಲೆ ಸಂಗೀತದೆಡೆಗೆ ಇನ್ನೂ ಸ್ವಲ್ಪ ಕಾಳಜಿವಹಿಸಿದರೆ ಚೆನ್ನಾಗಿರುತಿತ್ತು. ‘ಅಧಿಕಾರದಲ್ಲಿರುವವರು ಕೊಡುವ ಗ್ಯಾರಂಟಿಗಳಿಗೆ ಬೆಲೆ ಇದಿದ್ದರೆ ‘ಕೊಲೆ ಮಾಡುವುದು ಅಷ್ಟೇ ಅಪರಾಧವಲ್ಲ, ಅದನ್ನು ನೋಡಿಕೊಂಡು ಸುಮ್ಮನೆ ಇರುವುದು ಸಹ ಅಪರಾಧ’ ‘ವ್ಯವಸ್ಥೆ ಬದುಕುವುದಕ್ಕೆ ಬಿಡುತ್ತಿಲ್ಲ, ಕಾಯಿಲೆ ಹಿಡಿದ ವ್ಯವಸ್ಥೆ’ ಎನ್ನುವಂತಹ ಮಾತುಗಳು ಯೋಚನೆಗೆ ಹಚ್ಚುತ್ತವೆ. ಇನ್ನೊಮ್ಮೆ ಯಾವುದಾದರೂ ಸರಕಾರಿ ಕಚೇರಿಗೆ ಹೋದಾಗ ಲಂಚ ನೀಡುವ ಅನಿವಾರ್ಯತೆ ಬಂದಾಗ, ಸುಮಾರು ಬಾರಿ ಯೋಚಿಸುವಂತೆ ಈ ಚಿತ್ರ ಮಾಡುತ್ತದೆ. ಅಷ್ಟರ ಮಟ್ಟಿಗೆ ಇದು ಯಶಸ್ವಿಯಾಗಿದೆ ಎಂದು ಹೇಳಬಹುದು. ಚಿತ್ರ ಮುಗಿದಾಗ ಎಲ್ಲರೂ ಒಂದು ಸಲ ‘ಆತ್ಮಾವಲೋಕನ’ ಮಾಡಿಕೊಳ್ಳಲು ಪ್ರೇರಪಿಸುತ್ತದೆ.

ನಿಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು vinay99164@gmail.com




Leave a Reply

Your email address will not be published. Required fields are marked *

error: Content is protected !!