ತಲೆ ಮೇಲೆ ಕಲ್ಲು ಹೊತ್ತು ಸಿಂದಗಿಯಲ್ಲಿ ತಳವಾರ ಸಮಾಜದವರ ಹೋರಾಟ

950

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪರಿಶಿಷ್ಟ ಪಂಗಡ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ತಳವಾರ ಹಾಗೂ ಪರಿವಾರ ಸಮಾಜದವರು ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದ್ರು. ಪಟ್ಟಣದ ಸಾತವೀರೇಶ್ವರ ಸಭಾಭವನದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು, ಕುಂದು ಕೊರತೆ ಸಭೆ ಆಯೋಜಿಸಿದ್ದರು‌. ಈ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯ್ತು.

ಕಳೆದ ಮಾರ್ಚ್ 2020 ರಲ್ಲಿ ಕೇಂದ್ರ ಸರ್ಕಾರ ತಳವಾರ ಮತ್ತು ಪರಿವಾರ ಸಮುದಾಯವನ್ನು ಎಸ್ ಟಿಗೆ ಸೇರ್ಪಡೆ ಮಾಡಿ ರಾಜ್ಯಪತ್ರ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರ ಈವರೆಗೂ ಜಾತಿ ಪ್ರಮಾಣ ಪತ್ರ ನೀಡದೇ ಅನ್ಯಾಯ ಮಾಡ್ತಿದೆ. ಈ ಕೂಡಲೇ ಜಿಲ್ಲಾ ಉಸ್ತುವಾರಿ ಮಂತ್ರಿಗಳು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಬಿಸಿಲಲ್ಲಿ ಹೋರಾಟಗಾರರು..

ಜಾತಿ ಪ್ರಮಾಣ ಪತ್ರ ನೀಡದ ಸರ್ಕಾರದ ವಿರುದ್ಧ ತಲೆ ಮೇಲೆ ಕಲ್ಲು ಹೊತ್ತುಕೊಂಡು ಬಿಸಿಲಲ್ಲಿ ಹೋರಾಟ ಮಾಡ್ತಿದ್ದರೆ, ಸಚಿವರು ಹೊರಗೆ ಬಂದು ತಮ್ಮ ಸಮಸ್ಯೆ ಕೇಳ್ತಿಲ್ಲವೆಂದು ಕಿಡಿ ಕಾರಿದ್ರು. ಪೊಲೀಸ್ ಅಧಿಕಾರಿಗಳ ಮೂಲಕ ಮನವಿ ಪತ್ರ ಪಡೆಯುವ ಕೆಲಸ ಮಾಡಲಾಯ್ತು. ಆದ್ರೆ, ಹೋರಾಟಗಾರರು ಸಚಿವರು ಹೊರಗೆ ಬಂದು ಮನವಿ ಪತ್ರ ಪಡೆದುಕೊಳ್ಳಬೇಕು ಎಂದು ಪಟ್ಟು ಹಿಡಿದ್ರು.

ಈಗಾಗಲೇ ಗ್ರಾ ಪಂಚಾಯಿತ ಚುನಾವಣೆಯಿಂದ ಸಮುದಾಯ ವಂಚಿತವಾಗಿದೆ. ಇದೀಗ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಬರುತ್ತಿವೆ. ಕೂಡಲೇ ಜಾತಿ ಪ್ರಮಾಣ ಪತ್ರ ನೀಡದೇ ಹೋದಲ್ಲಿ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಗೆ ತಕ್ಕ ಪಾಠ ಕಲಿಸಲಾಗುವುದು ಎಂದರು. ಈ ವೇಳೆ ಮುಖಂಡರಾದ ಸಿದ್ದಣ್ಣ ಐರೋಡಗಿ,  ರಾಜೇಂದ್ರ ಎಂ.ತಳವಾರ, ಸಾಯಬಣ್ಣ ಯಲಗೋಡ, ಜಗದೀಶ ಕೋರಳ್ಳಿ, ಮಾಣಿಕ ಕಲಬಾ ಮತ್ತಿತರರಿದ್ದರು.




Leave a Reply

Your email address will not be published. Required fields are marked *

error: Content is protected !!