ತಾರಾಪುರ ವರ್ಸಸ್ ತಾರಾಪುರ.. ಭೀಮಾ ತಟದ ಇನ್ ಸೈಡ್ ಸ್ಟೋರಿ..

476

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಸಣ್ಣ ಗ್ರಾಮ ತಾರಾಪುರ. ಸುಮಾರು 150 ಮನೆಗಳಿದ್ದು 800 ಜನರ ವೋಟಿಂಗ್ ಇದೆ. ಈ ಊರು ಭೀಮಾ ನದಿಗೆ ಹೊಂದಿಕೊಂಡಿದ್ದು, ಹಲವು ವರ್ಷಗಳ ಹಿಂದೆ ನೆರೆಗೆ ತುತ್ತಾಗಿತ್ತು. ಹೀಗಾಗಿ 2 ಕಿಲೋ ಮೀಟರ್ ಅಂತರದಲ್ಲಿ ಹೊಸ ತಾರಾಪುರವಿದೆ. ನೆರೆಯಿಂದ ಗ್ರಾಮಸ್ಥರಿಗೆ ಮತ್ತೆ ತೊಂದ್ರೆಯಾಗಬಾರದೆಂದು ಸರ್ಕಾರ 18 ಎಕರೆ ಜಾಗ ಗುರುತಿಸಿದೆ.

ಹೀಗೆ ಗುರುತಿಸಿದ 18 ಎಕರೆ ಜಾಗದಲ್ಲಿ ಜನರಿಗೆ ಹಕ್ಕುಪತ್ರ ವಿತರಣೆ ಸಹ ಮಾಡಲಾಗಿದೆ. ಆದ್ರೆ, ಗ್ರಾಮಸ್ಥರು ಮಾತ್ರ ಅಲ್ಲಿ ಹೋಗಿ ಮನೆ ಕಟ್ಟಿಕೊಳ್ಳಲು ಸುತಾರಂ ತಯಾರಿಲ್ಲ. ಕಾರಣ, 9ನೇ ನಂಬರ್ ಬುಕ್ ಪ್ರಕಾರ ಜಾಗ ಹಂಚಿಕೆಯಾಗಿಲ್ಲ ಅನ್ನೋದು.

ಒಂದೇ ಮನೆಯಲ್ಲಿ ಮೂರ್ನಾಲ್ಕು ಜನರ ಹೆಸರಿನಲ್ಲಿ ಜಾಗ ನೀಡಲಾಗಿದೆ ಅನ್ನೋ ಆರೋಪ ಸಹ ಕೆಲ ಗ್ರಾಮಸ್ಥರು ಮಾಡ್ತಿದ್ದಾರೆ. ಇದ್ರಿಂದಾಗಿ ಕೆಲವರಿಗೆ ಜಾಗ ಸಿಕ್ಕಿಲ್ಲ ಅಂತಾ ಹೇಳಲಾಗ್ತಿದೆ.

ತಮ್ಗೆ ಚಲೋ ಜಾಗ ಸಿಕ್ಕವರು ಸುಮ್ನ ಇದಾರಿ. ಸಿಗ್ದೇ ಇರೋರು ಅಲ್ಲಿ ಹೋಗಕ್ಕೆ ತಯಾರಿಲ್ಲರಿ. 9ನೇ ನಂಬರ್ ಬುಕ್ ಪ್ರಕಾರ ಜಾಗ ಹಂಚಲ್ರಿ. ಅವರು ಕೊಟ್ಟಲ್ಲಿ ನಾವು ಹೋಗ್ತೀವಿ. ಅದು ಬಿಟ್ಟು ಕೆಲವರು ತಮ್ಗ ಎಲ್ಲಿ ಬೇಕು ಅಲ್ಲಿ ಜಾಗ ತಗೊಂಡ ಕುಂತಾರ್ರಿ. ಸರ್ವೆ ಮಾಡಿ ಕೊಟ್ಟರ ನಾಳೆನೆ ಊರಾಗಿನ ಮಂದಿ ಹೋಗ್ತಾರ್ರಿ.

ಅಣ್ಣಾರಾಯಿ ಪಾಳಕಿ, ಗ್ರಾಮಸ್ಥ

ಈ ಬಗ್ಗೆ ಶಾಸಕರಾದ ಎಂ.ಸಿ ಮನಗೂಳಿ ಅವರನ್ನ ಸಂಪರ್ಕಿಸಲು ಪ್ರಯತ್ನಿಸಿದ್ವಿ. ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿರುವುದ್ರಿಂದ ಅವರ ಸಂಪರ್ಕ ಸಾಧ್ಯವಾಗ್ಲಿಲ್ಲ. ಶಾಸಕರು ಸಹ ಕೆಲ ದಿನಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿ ಮಾತ್ನಾಡಿದ್ದಾರೆ. ಆದ್ರೆ, ಇಲ್ಲಿ ಗ್ರಾಮಸ್ಥರ ಸಮಸ್ಯೆ ಇರೋದ್ರಿಂದ ಶಾಸಕರು ಎಷ್ಟೇ ಪ್ರಯತ್ನ ಪಟ್ರೂ ಏನು ಮಾಡಲು ಆಗ್ತಿಲ್ಲ. ಊರಿನ ಮಂದಿ ಒಗ್ಗಟ್ಟಾಗಿರದ ಕಾರಣ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ ಎನ್ನಲಾಗ್ತಿದೆ.

ಅಧಿಕಾರಿಗಳು 9ನೇ ನಂಬರ್ ಬುಕ್ ತಗೊಂಡು ಬಂದ ಜಾಗ ಹಂಚಲ್ರಿ. ಅದನ್ನ ಬಿಟ್ಟು ಬೇಕಾದವರಿಗೆ ಬೇಕಾದಲ್ಲಿ ಜಾಗ ಕೊಟ್ಟರ ಇದು ಮುಗಿದಿಲ್ಲರಿ. ಹಿಂಗ್ ಮುಂದ ಹೋಗ್ತದ್ರಿ. ಶಾಸಕರು ಕೂಡಾ ಬಂದು ಹೋಗ್ಯಾರಿ. ಅವರು ಅದ್ನ ಹೇಳ್ಯಾರಿ, ನೀವು ಊರನವರೆಲ್ಲ ಕೂಡಿ ಬಂದ್ರ ಎಲ್ಲ ಸರಿ ಮಾಡೋಣಂತ.

ಮಲ್ಲಪ್ಪ ಬಡಗೇರಿ , ಗ್ರಾಮಸ್ಥ
ಜಮೀನುಗಳಿಗೆ ನುಗ್ಗಿರುವ ನೀರು

ಇದೀಗ ಭೀಮಾ ಒಡಲು ತುಂಬಿದೆ. ತಾರಾಪುರ ಸುತ್ತಲು ನೀರು. 70 ಎಕರೆಗೂ ಹೆಚ್ಚು ಹೊಲಗಳು ಜಲಾವೃತಗೊಂಡಿವೆ. ಊರೊಳಗಿನ ತಾರಕೇಶ್ವರ, ಲಕ್ಷ್ಮಿ ದೇವಸ್ಥಾನದ ಆಚೆಯಿರುವ ಹೊಲಗಳಿಗೆ ಹೋಗಬೇಕು ಅಂದ್ರೆ, ನೀರಿನಲ್ಲಿ ಈಜಿಕೊಂಡು ಹೋಗಬೇಕು. ಇಲ್ದೇ ಹೋದ್ರೆ 20 ಕಿಲೋ ಮೀಟರ್ ಸುತ್ತಿಕೊಂಡು ಬರಬೇಕು.

ತಾರಕೇಶ್ವರ ದೇಗುಲದ ಆಚೆಗಿನ ಹೊಲಗಳಿಗೆ ರೈತರು ನಿತ್ಯ ಈಜಿಕೊಂಡು ಹೋಗುವುದು

ಇನ್ನೂ ಊರಿನಿಂದ ಆಚೆ ಹೋಗಿ ಬರಲು, ಮಕ್ಕಳು ಶಾಲೆಗೆ ಹೋಗಲು, ರೈತರು ಹೊಲಗಳಿಗೆ ಹೋಗಬೇಕು ಅಂದ್ರೆ, ಸೇತುವೆ ಮೇಲೆ ಹರಿಯುತ್ತಿರುವ ನೀರನ್ನ ದಾಟಿಕೊಂಡು ಹೋಗಬೇಕು.

ತೊಡೆಯ ಮೇಲಿನವರೆಗೂ ಇರುವ ನೀರಿನಲ್ಲಿ ನಿತ್ಯ ಓಡಾಟ

ಸುಮಾರು 50 ವಿದ್ಯಾರ್ಥಿಗಳು ಶಾಲೆಗೆ ಹೋಗ್ತಾರೆ. ತೊಡೆಯ ಮೇಲಿನವರೆಗೂ ನೀರು ಹರಿಯುತ್ತಿರುವುದ್ರಿಂದ ಗ್ರಾಮಸ್ಥರು ನಿತ್ಯ ಹೈರಾಣಾಗ್ತಿದ್ದಾರೆ. ಇದು ಇನ್ನು ಮೂರು ತಿಂಗಳು ಹೀಗೆ ಇರುತ್ತೆ ಅನ್ನೋದು ಗ್ರಾಮಸ್ಥರು ಮಾತು.

ಗ್ರಾಮದಲ್ಲಿನ ಕೆಲ ವಿದ್ಯಾರ್ಥಿಗಳು

9ನೇ ನಂಬರ್ ಬುಕ್ ಪ್ರಕಾರ ಜಾಗ ಹಂಚಿಕೆಯಾದ್ರೆ ನಮ್ಗೆ ಯಾವುದೇ ಮೂಲೆಯಲ್ಲಿ ಕೊಟ್ಟರೂ ನಾವು ಹೋಗಲು ಸಿದ್ಧರಿದ್ದೇವೆ ಅಂತಾ ಕೆಲವು ಗ್ರಾಮಸ್ಥರು ಹೇಳ್ತಿದ್ದಾರೆ. ಅವರ ಬೇಡಿಕೆ ನ್ಯಾಯಯುತವಾಗಿದ್ರೆ ಸಂಬಂಧಪಟ್ಟವರು ಆದಷ್ಟು ಬೇಗ ಇದನ್ನ ಬಗೆಹರಿಸುವುದು ಉತ್ತಮ.




Leave a Reply

Your email address will not be published. Required fields are marked *

error: Content is protected !!