ಸಿಂದಗಿಯಲ್ಲಿ ಪತ್ನಿ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

372

ಪ್ರಜಾಸ್ತ್ರ ಅಪರಾಧ ಸುದ್ದಿ

ಸಿಂದಗಿ: ತಾಲೂಕಿನ ಚಾಂದಕವಟೆ ಗ್ರಾಮದ ಜಮೀನುವೊಂದರಲ್ಲಿ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪತಿ ಅಪರಾಧಿ ಎಂದು ಸಾಬೀತಾಗಿದ್ದು, 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಗುರುಬಾಳ ಗುರಪ್ಪ ಕನ್ನಾಳಗೆ ನ್ಯಾಯಾಧೀಶರಾದ ಸುಭಾಶ ಸಂಕದ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಐಪಿಸಿ 302ರ ಅಡಿ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ. ಐಪಿಸಿ 201ರ ಅಡಿಯಲ್ಲಿ 7 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ, ಐಪಿಸಿ 506(2)ರ ಅಡಿಯಲ್ಲಿ 2 ವರ್ಷ ಜೈಲು ಶಿಕ್ಷೆ ವಿಧಿಶಿ ತೀರ್ಪು ನೀಡಲಾಗಿದೆ. ಅಪರಾಧಿಗೆ ವಿಧಿಸಿರುವ ದಂಡದ ಮೊತ್ತವನ್ನು ಮಕ್ಕಳಿಗೆ ಪರಿಹಾರ ನೀಡಲು ಆದೇಶಿಸಲಾಗಿದೆ.

ಘಟನೆ ಹಿನ್ನೆಲೆ:

ನಿಂಗಪ್ಪ ಎಳೂರೆ ಎಂಬುವರ ಮಗಳಾದ ಶೀಲವಂತಿಯನ್ನು ಗುರುಬಾಳ ಕನ್ನಾಳ ಎಂಬಾತನಿಗೆ 2ನೇ ಮದುವೆ ಮಾಡಿಕೊಡಲಾಗಿದೆ. 10 ವರ್ಷಗಳ ಸಂಸಾರದಲ್ಲಿ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆರಂಭದಿಂದಲೂ ಗುರುಬಾಳ ಸರಿಯಾಗಿ ಸಂಸಾರ ನಡೆಸಿದೆ ಸದಾ ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದ. ಕುಟುಂಬಸ್ಥರು ಎಷ್ಟೇ ಬುದ್ದಿವಾದ ಹೇಳಿದರೂ ಆತ ಕೇಳಲಿಲ್ಲ. ಕೊನೆಗೆ ಶೀಲವಂತಿ ತಂದೆ, ಮಗಳು ಹಾಗೂ ಅಳಿಯನನ್ನು ತನ್ನ ಊರಿಗೆ ಕರೆದುಕೊಂಡು ಬಂದು ತಮ್ಮೂರಿನ ಹೊಲದಲ್ಲಿ ಕೆಲಸಕ್ಕೆ ಇಟ್ಟಿದ್ದ. ಅಲ್ಲಿಯೂ ಮದ್ಯಪಾನ ಗಲಾಟೆ ಮಾಡುತ್ತಾ ಒಂದು ದಿನ ಕೆಲಸ ಬಿಟ್ಟು ಹೋದ.

ಇತ್ತ ಶೀಲವಂತಿ ಮಕ್ಕಳನ್ನು ಕರೆದುಕೊಂಡು ತಂದೆಯ ಜಮೀನಿನಲ್ಲಿ ಬಂದು ನೆಲೆಸಿದಳು. ಆಕೆಯ ತಂದೆ, ತಾಯಿ ಕಬ್ಬಿನ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಂದರೆ ಜನವರಿ 10, 2022ರಂದು ಗುರುಬಾಳ ಸಂಜೆ ಸುಮಾರು 7ಗಂಟೆಗೆ ಶೀಲವಂತಿ ಬಳಿ ಬಂದು, ಇಲ್ಲಿ ಇರುವುದು ಬೇಡ ನನ್ನ ಜೊತೆ ಬಾ ಎಂದು ಗಲಾಟೆ ಮಾಡಿದ್ದಾನೆ. ನೀನು ಸರಿಯಾಗಿ ಕೆಲಸ ಮಾಡುವುದಿಲ್ಲ. ಬಿರೀ ಕುಡಿದು ಜಗಳಾ ಮಾಡ್ತಿ ಎಂದು ಹೇಳಿ ಹೊಲದಲ್ಲಿ ಹೋಗಿದ್ದಾಳೆ. ಆಕೆಯ ಬೆನ್ನು ಹತ್ತಿದ ಪತಿ ಕಬ್ಬು ಕಡಿಯುವ ಕೊಯ್ತಾ ತೆಗೆದುಕೊಂಡು ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಆಕೆಯ ತಾಯಿಗೂ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದ.

ಈ ಕುರಿತು ಕೊಲೆಯಾದ ಶೀಲವಂತಿ ತಾಯಿ ಮಾಯಮ್ಮ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಅಂದಿನ ಸಿಪಿಐ ರವಿ ಉಕ್ಕಂದ, ಎಎಸ್ಐ ಎಂ.ಜಿ ಬಿರಾದಾರ ಇವರ ತಂಡ ತನಿಖೆ ನಡೆಸಿ ಸಾಕ್ಷಿಗಳನ್ನು ಕೋರ್ಟಿಗೆ ಸಲ್ಲಿಸಿದರು. ಈ ಕುರಿತು ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಗುರುಬಾಳ ಅಪರಾಧಿ ಎಂದು ಆದೇಶಿಸಿ ಜೀವಾವಧಿ ಶಿಕ್ಷೆಯನ್ನು ಏಪ್ರಿಲ್ 13, 2023ರಂದು ಪ್ರಕಟಿಸಿದೆ.




Leave a Reply

Your email address will not be published. Required fields are marked *

error: Content is protected !!