ಯತ್ನಾಳಗೆ ಪ್ರತಿಪಕ್ಷ ನಾಯಕನ ಸ್ಥಾನ ಸಿಗುತ್ತಾ?

277

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ರಾಜಕೀಯ ಅಂಗಳದಲ್ಲಿ ಸಧ್ಯ ತೀವ್ರ ಚರ್ಚೆಯಲ್ಲಿರುವ ವಿಷಯಗಳಲ್ಲಿ ಬಿಜೆಪಿ ಯಾರನ್ನು ಪ್ರತಿಪಕ್ಷದ ನಾಯಕನನ್ನಾಗಿ ಮಾಡುತ್ತದೆ ಅನ್ನೋದು. ಚುನಾವಣೆ ಮುಗಿದು ಕಾಂಗ್ರೆಸ್ ಆಡಳಿತ ಶುರುವಾಗಿದೆ. ಆದರೆ, ಇದುವರೆಗೂ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಲು ಬಿಜೆಪಿಗೆ ಆಗಿಲ್ಲ. ಇದರ ನಡುವೆ ಕೆಲ ದಿನಗಳಿಂದ ವಿಪಕ್ಷ ನಾಯಕನ ಸ್ಥಾನಕ್ಕೆ ಕೇಳಿ ಬರುತ್ತಿರುವ ಹೆಸರು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರದ್ದು.

ತಮ್ಮ ಮಾತಿನ ಮೂಲಕ, ಹಿಂದುತ್ವದ ಸಿದ್ಧಾಂತದ ಮೂಲಕ ಗುರುತಿಸಿಕೊಂಡಿರುವ ಯತ್ನಾಳ, ಪ್ರತಿಪಕ್ಷ ನಾಯಕರಾಗುವುದು ಸೂಕ್ತವೆಂದು ಹೇಳಲಾಗಿದೆಯಂತೆ. ಸದನದೊಳಗೆ ಹಾಗೂ ಹೊರಗೆ ಕಾಂಗ್ರೆಸ್ ಕಟ್ಟಿ ಹಾಕಲು, ಪಕ್ಷವನ್ನು ಮುನ್ನಡೆಸಿಕೊಂಡು ಹೋಗಲು ಸಮರ್ಥರಿದ್ದಾರೆ. ಜೊತೆಗೆ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದು, ಇವರಿಗೆ ಪ್ರತಿಪಕ್ಷದ ನಾಯಕ ಮಾಡಿದರೆ ಉತ್ತಮ ಅನ್ನೋದು ಒಂದು ವರ್ಗದ ಮಾತು.

ಇನ್ನೊಂದು ಕಡೆ ಮಾಜಿ ಸಿಎಂ ಯಡಿಯೂರಪ್ಪ ಸೇರಿ ಅನೇಕ ಬಿಜೆಪಿ ನಾಯಕರಿಗೆ ಇದು ಸುತಾರಾಂ ಇಷ್ಟವಿಲ್ಲವಂತೆ. ಸ್ವಪಕ್ಷೀಯರ ವಿರುದ್ಧವೇ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ವಿವಾದಾತ್ಮಕ ಹೇಳಿಕೆಗಳನ್ನು ಪದೆಪದೆ ನೀಡುತ್ತಾರೆ. ಪಕ್ಷದ ಹಿರಿಯ ನಾಯಕರಿಗೂ ಗೌರವ ಕೊಡುವುದಿಲ್ಲ. ಹೀಗಿರುವಾಗ ಯತ್ನಾಳ ಪ್ರತಿಪಕ್ಷದ ನಾಯಕರಾದರೆ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ವಾದಿಸುತ್ತಿದ್ದಾರಂತೆ.

ಬಿಜೆಪಿ ಹಿಂದುತ್ವ ಸಿದ್ಧಾಂತದ ಮೇಲೆ, ಆರ್ ಎಸ್ಎಸ್ ನಾಯಕರ ತೀರ್ಮಾನಗಳ ಮೇಲೆ ರಾಜಕೀಯ ಮಾಡುತ್ತಿದ್ದರೂ, ಯತ್ನಾಳ ರೀತಿಯ ಫೈರ್ ಬ್ರ್ಯಾಂಡ್ ಎಷ್ಟು ಸೂಕ್ತ ಅನ್ನೋ ಪ್ರಶ್ನೆ ಅವರಲ್ಲಿಯೇ ಹುಟ್ಟಿಕೊಂಡಿದೆ. ಪ್ರತಿಪಕ್ಷ ನಾಯಕರಾದರೂ ಸರ್ವ ಜಾತಿ, ಧರ್ಮದ ಜನರ ಪರ ನಿಲ್ಲಬೇಕು. ಯಾರಿಗೆ ಅನ್ಯಾಯವಾದರೂ ಜಾತಿ, ಧರ್ಮ ನೋಡದೆ ಸರ್ಕಾರವನ್ನು ಪ್ರಶ್ನಿಸಬೇಕು. ಇದು ಶಾಸಕ ಯತ್ನಾಳರಿಂದ ಸಾಧ್ಯವೇ ಅನ್ನೋದು. ಪ್ರತಿಪಕ್ಷ ನಾಯಕ ಹಾಗೂ ನೂತನ ರಾಜ್ಯಾಧ್ಯಕ್ಷರ ನೇಮಕದ ಹಿಂದೆ ಮುಂಬರುವ ಲೋಕಸಭಾ ಚುನಾವಣೆಯ ತಂತ್ರಗಾರಿಕೆ ಇರಲೇಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಶಾಸಕ ಯತ್ನಾಳಗೆ ಪ್ರತಿಪಕ್ಷ ನಾಯಕ ಸ್ಥಾನ ಸಿಗುತ್ತಾ ಅನ್ನೋ ಪ್ರಶ್ನೆಗೆ ಶೀಘ್ರದಲ್ಲಿ ಉತ್ತರ ಸಿಗಲಿದೆ.




Leave a Reply

Your email address will not be published. Required fields are marked *

error: Content is protected !!