ಅಭಿವೃದ್ಧಿ ವಿಷಯದಲ್ಲಿ ಅಹಂಕಾರವಿಲ್ಲ: ಶಾಸಕ ಭೂಸನೂರ

202

ಪ್ರಜಾಸ್ತ್ರ ಸುದ್ದಿ

ಸಿಂದಗಿ: ರೈತನ ಮಗನಾಗಿ ಹಂತ ಹಂತವಾಗಿ ಬೆಳೆದು ವಿಧಾನಸೌಧದವರೆಗೂ ಹೋಗುವಂತೆ ಮಾಡಿದ್ದು ನೀವು, ಹೀಗಾಗಿ ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯವಿಲ್ಲ. ಅಹಂಕಾರವಿಲ್ಲ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ರಿಟಿಷರ ಕಪಿಮುಷ್ಠಿಯಿಂದ ಭಾರತವನ್ನು ಸ್ವತಂತ್ರಗೊಳಿಸಿದ ವೀರರನ್ನೆಲ್ಲ ನೆನಪಿಸಕೊಳ್ಳಬೇಕು. ಜೊತೆಗೆ ನಮಗೆ ವಿಶ್ವದ ಅತ್ಯುನ್ನತ ಸಂವಿಧಾನ ನೀಡಿದ ಡಾ.ಬಿ.ಆರ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ದೇಶಕ್ಕಾಗಿ ಹುತಾತ್ಮರಾದ ಸಂಗೊಳ್ಳಿ ರಾಯಣ್ಣನವರನ್ನು ಸಹ ನಾವೆಲ್ಲ ಸ್ಮರಿಸಬೇಕು ಎಂದರು.

ಗ್ರಾಮಗಳಿಗೆ ಸಿಸಿ ರಸ್ತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, 10 ಕೋಟಿ ವೆಚ್ಚದಲ್ಲಿ 8 ಎಕರೆಯಲ್ಲಿ ಅಲ್ಪಸಂಖ್ಯಾತರ ಮೂರಾರ್ಜಿ ಶಾಲೆ, ಗುತ್ತಿ ಬಸವಣ್ಣ ಏತನೀರಾವರಿಯ 8 ಮೋಟರ್ ಸರಿಪಡಿಸಿ ಶಾಶ್ವತ ನೀರಿನ ವ್ಯವಸ್ಥೆ, ಉಪ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ತಳವಾರ ಸಮಾಜಕ್ಕೆ ಎಸ್ಟಿ ಪ್ರಮಾಣಪತ್ರ ಕೊಟ್ಟಿರುವುದು ಸೇರಿದಂತೆ ತಾಲೂಕಿನ ಅಭಿವೃದ್ಧಿಗೆ ಸದಾ ಸಿದ್ಧ ಎಂದರು.

2021-22ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಗಣಿಹಾರ ಜಿಎಚ್ಎಸ್ ಶಾಲೆಯ ಪವಿತ್ರಾ ಮಲ್ಲಪ್ಪಾ ಬಿರಾದಾರ, ಬಳಗಾನೂರ ಜಿಯುಎಚ್ ಶಾಲೆಯ ಮೆಹವಿಶ್ ಬಿಲ್ಕಿಶ್ ತಾಂಬೆ ಹಾಗೂ ಯಂಕಂಚಿಯ ಕೆಪಿಎಸ್ ಶಾಲೆಯ ಪ್ರಜ್ವಲ ಮಲ್ಲಪ್ಪ ಜಮಾದಾರ ಅನ್ನೋ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಅಂಬೇಡ್ಕರ್ ಅವರು ನೀಡಿದ ಸಂವಿಧಾನ ವಿಶ್ವದ ಅತ್ಯುನ್ನತ ಸಂವಿಧಾನ. ಹೀಗಾಗಿ ನಮ್ಮ ಕರ್ತವ್ಯ ಪಾಲಿಸಿ ನಮ್ಮ ಹಕ್ಕು ಚಲಾಯಿಸೋಣ. ಇನ್ನು ಪಟ್ಟಣದಲ್ಲಿ ಕಾಮಗಾರಿಗಳು ನಡೆಯುತ್ತಿದ್ದು ಜನರು ಸಹಕರಿಸಬೇಕು ಎಂದರು. ಧ್ವಜಾರೋಹಣ ಮಾಡಿ ತಹಶೀಲ್ದಾರ್ ನಿಂಗಪ್ಪ ಬಿರಾದಾರ ಮಾತನಾಡಿದರು.

ಸರ್ಕಾರಿ ಶಾಲೆಗಳ ನಿರ್ಲಕ್ಷ್ಯ

ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ವಿವಿಧ ಚಟುವಟಿಕೆಗಳಲ್ಲಿ ಪಟ್ಟಣದ ಸರ್ಕಾರಿ ಶಾಲೆಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಅನ್ನೋ ಆಕ್ರೋಶ ವ್ಯಕ್ತವಾಗಿದೆ. ಒಂದೆರಡು ಕಾರ್ಯಕ್ರಮ ಬಿಟ್ಟರೆ ಬೇರೆ ಯಾವುದೇ ಚಟುವಟಿಕೆಯಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅವಕಾಶ ನೀಡಿಲ್ಲ. ಹೀಗಾದರೆ ಸರ್ಕಾರಿ ಶಾಲೆಗಳಿಗೆ ಪ್ರೋತ್ಸಾಹ ಸಿಗೋದು ಹೇಗೆ ಅನ್ನೋ ಪ್ರಶ್ನೆ ಮೂಡಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕೇಳಿದರೆ ಅವರು ಹೇಳಿದ್ದು ಹೀಗೆ..

‘’ಆದರ್ಶ ಮಹಾವಿದ್ಯಾಲಯ ಹಾಗೂ ಮುರುಗೆಮ್ಮ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತೇವೆ. ಆದರೆ, ಸಿಂದಗಿಯಲ್ಲಿ ಖಾಸಗಿ ಶಾಲೆಗಳ ಪ್ರಾಬಲ್ಯವಿದೆ.’’

ಹಣಮಂತ್ರಾಯ ಹರನಾಳ, ಕ್ಷೇತ್ರ ಶಿಕ್ಷಣಾಧಿಕಾರಿ, ಸಿಂದಗಿ

ಆಗಸ್ಟ್ 15, ಜನವರಿ 26ರ ಸಂದರ್ಭದಲ್ಲಿಯಾದರೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಒಂದಿಷ್ಟು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ಅದನ್ನು ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಮಾಡಿದರೆ ಅದೆಷ್ಟೋ ಬಡ, ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎನ್ನೋದು ಎಲ್ಲರ ಆಶಯ.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯ್ತಿ ಇಒ ಬಾಬು ರಾಠೋಡ, ಸಿಪಿಐ ಡಿ.ಹುಲಗಪ್ಪ, ಪುರಸಭೆ ಮುಖ್ಯಾಧಿಕಾರಿ ರಾಜೇಶ್ವರಿ ತುಂಗಳ, ಬಿಇಒ ಹಣಮಂತ್ರಾಯ ಹರನಾಳ, ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ ಸೇರಿ ಇತರರು ಉಪಸ್ಥಿತರಿದ್ದರು.
Leave a Reply

Your email address will not be published. Required fields are marked *

error: Content is protected !!