ಅಂಬೇಡ್ಕರ್ ಚೌಕ್

681

ಕೈಯೆತ್ತ ನಿಂತಿದೆ ಕಲ್ಲ ಪುತ್ಥಳಿ

ನಗರದ ನಾಲ್ಕು ರಸ್ತೆಗಳು ಕೂಡುವ ಚೌಕದಲ್ಲಿ.

ಧೂಳೆಬ್ಬಿಸಿ ಹೋದ ಬಸ್ಸಿಂದಿಳಿದು

ಮೈಮನಕೆ ಮೆತ್ತಿದ ಮಸಿಯೊರೆಸಿಕೊಳುತಿದೆ ಮಂದಿ

ಆ ಕಲ್ಲ ಪುತ್ಥಳಿಯ ಕಣ್ಣ ಹಣತೆಯ ಬೆಳಕಿನಲ್ಲಿ.

ಬರೀ ಕಲ್ಲೇ ಅದು? ಅಸ್ಪರ್ಶ, ಅವಮಾನ, ಬಡತನಗಳ

ಒಂದೊಂದು ಸಿಟ್ಟು ರಸಘಟ್ಟಿಯಾದ ಜೀವಂತ ಪ್ರತಿಮೆ.

ಕಲ್ಲೆಂದಾದರು ಕೈಯೆತ್ತಬಹುದೇ? ಎಂದ ನೂರು ನಿಂದೆಗಳ

ಕರಗಿಸಿ ಗಾಡಿಯಚ್ಚಿಗೊಗ್ಗಿಸಿದ ಕುಲಮೆ.

ಬಹಿಷ್ಕೃತದ ಮೊಸಳೆ ಬಾಯಿಲಿ ಸಿಕ್ಕು ಉಡಲಿಲ್ಲದ,

ಉಣಲಿಲ್ಲದ ಬಾಲ್ಯ ; ಕುಡಿಯಲವಕಾಶವಿಲ್ಲದ ಕೆರೆಯಂಚಲಿ

ನಿಂತಂದೇ ಕಂಡಿತೇನೊ ಮಸೆದ ಹಲ್ಲಿನ ಮೊಸೆಳೆಯಾಕಾರ!

ಹೊಳೆಯಾದೆ ಹೊಟ್ಟೆಗ್ಹಾಕೊಂಡು ಹರಿವಿಗೆರವಾದ ಎಲ್ಲ ಜಲಚರ.

ಆಗ ಹಿಗ್ಗಿಬಂತು ದೇಶದರುಣೋದಯದ ಕಿರಣ;

ಸಿದ್ಧನಾದೆ ನಂಬಿ ಬುದ್ಧನ ಕರುಣ, ವರ್ಣದಾವರಣ

ಮೀರಿ ಮಸಗಿಸಿತು ರಾಷ್ಟ್ರ ಧರ್ಮದ ದೀಪ.

ನೀನೆಂದು ಚೌಕದಲಿ ಸೂಟು, ಕೋಟು, ಬೂಟು ಉಟ್ಟು

ನಿಂತ ವೈಭವದ ನಿಲುವಿಗಿಂತಲೂ

ಕಣ್ತುಂಬಿದೆ ಕೊನೆಯಲ್ಲಿ ಕಾವಿಯುಟ್ಟ ಆ ನಿನ್ನ ತೀರ್ಥರೂಪ.

ಕೋಶ ಓದಿ, ದೇಶ ನೋಡಲು ಗಡಿಹಾರಿ ಬಂದ

ಪಕ್ಷಗಳು ಪುತ್ಥಳಿಯ ಮೇಲೆ ಕೂಡುತ್ತವೆ;

ತಮ್ಮ ನಾಡಗೂಡು ಕಟ್ಟಲು ಸಂವಿಧಾನದೆಲೆಗಳ

ತಿರಿವಿ ಹೊನ್ನಿನೆಳೆ ಹುಡುಕುತ್ತವೆ.

ಇಂತಹ ಮುತ್ತಿನ ಮೂರು ಅವಸ್ಥೆ ಬದುಕದೀ ಮಂದಿ

ಅಂಬೇಡ್ಕರ್ ಚೌಕನು ಬಳಸಿ ಹೋಗೇ ಬಿಡುತ್ತಾರೆ;

ದೈನಂದಿನ ಧೂಳಿನಲಿ ಮತ್ತೆ ಮುಳುಗಿ ಬಿಡುತ್ತಾರೆ

ಗೀತಯೋಗಿ, ಸಾಹಿತಿ, ವಿಜಯಪುರ



Leave a Reply

Your email address will not be published. Required fields are marked *

error: Content is protected !!