ಕೆಂಪು ಬಸ್ ಹತ್ತಿ ಬರುವ ಕಣ್ಣೊಳಗಿನ ಕನವರಿಕೆ…

871

ಬೆಂಗಳೂರು.. ಸಿಲಿಕಾನ್ ಸಿಟಿ.. ಐಟಿ ಸಿಟಿ.. ಗಾರ್ಡನ್ ಸಿಟಿ ಅಂತೆಲ್ಲಾ ಕರೆಸಿಕೊಳ್ಳುವ ನಗರವನ್ನ, ತನ್ನೂರಿನಿಂದ ನೋಡುವ ಹುಡುಗ, ಹುಡುಗಿ ಕಣ್ಣುಗಳಲ್ಲಿ ಸ್ವರ್ಗದಂತೆ ಕಾಣಿಸುತ್ತೆ. ಹೀಗಾಗಿ ನೂರಾರು ಕನಸುಗಳನ್ನ ಪೋಣಿಸಿಕೊಂಡು ಇಲ್ಲಿಗೆ ಬರುವ ಕಣ್ಣುಗಳಿಗೇನು ಕಡಿಮೆಯಿಲ್ಲ. ಅದರಲ್ಲೂ ಪೇಪರ್ ಆಫೀಸ್, ನ್ಯೂಸ್ ಚಾನೆಲ್ ನಲ್ಲಿ ಕೆಲಸಕ್ಕೆ ಸೇರಿಕೊಳ್ಳುವವರ ಗತ್ತು ಗಮ್ಮತ್ತು ಇನ್ನು ಜೋರಾಗಿರುತ್ತೆ. ಯುವ ಪತ್ರಕರ್ತ ಅನ್ನೋ ಬೋರ್ಡ್ ಹಾಕಿಕೊಂಡು ಮೊದಲ ಒಂದಿಷ್ಟು ತಿಂಗಳು ಓಡಾಡುವಾಗ ಎಲ್ಲಿಲ್ಲದ ಖುಷಿ.

ಊರು, ಜನ, ನೌಕರಿ, ಊಟ, ಭಾಷೆ ಸೇರಿದಂತೆ ಪ್ರತಿಯೊಂದೂ ಹೊಸತು. ಹೊಸಬ ಅನ್ನೋ ಕಾರಣಕ್ಕೆ ಆಫೀಸ್ ನಲ್ಲಿ ರಿಕಾರ, ಶ್ರೀಕಾರ. ಅಲ್ಲಿಯ ರೀತು ರಿವಾಜು ತಿಳಿದುಕೊಂಡು ನಡೆಯಲು ಮತ್ತಷ್ಟು ತಿಂಗಳು ತೆಗೆದುಕೊಳ್ಳುತ್ತೆ. ಇದರ ನಡುವೆ ದಿನಕ್ಕೊಂದು ಬಾರಿ ಮನೆಗೆ ಫೋನ್ ಮಾಡಿ ಮಾತ್ನಾಡುವುದು. ವಾರಕ್ಕೊಮ್ಮೆ ಸ್ನೇಹಿತರೊಂದಿಗೆ ಮಾತ್ನಾಡುತ್ತಾ ಬೆಂಗಳೂರನ್ನ ಹಲವು ಬಣ್ಣಗಳಲ್ಲಿ ವರ್ಣಿಸುವುದು. ಮುಂದೆ ನಿಧಾನವಾಗಿ ಆಫೀಸಿನ ಬಿಸಿ ತಟ್ಟಲು ಶುರುವಾಗುತ್ತೆ. ರೌಂಡ್ ದಿ ಕ್ಲಾಕ್ ಎಚ್ಚರವಾಗಿರುವ ಸಿಟಿಯಲ್ಲಿ, ಸೂರ್ಯ ಚಂದ್ರರಂತೆ ಡೇ ಆ್ಯಂಡ್ ನೈಟ್ ಡ್ಯೂಟಿಗೆ ಸಜ್ಜಾಗಬೇಕು. ಆಫೀಸು, ರೂಮು.. ರೂಮು, ಆಫೀಸು ಬಿಟ್ರೆ ಮತ್ತೊಂದು ಗೊತ್ತಿರುವುದಿಲ್ಲ. ರಿಪೋರ್ಟರ್ ಆಗಿದ್ದರೆ, ಒಂದಿಷ್ಟು ಏರಿಯಾ, ಬೇರೆ ಬೇರೆ ಪತ್ರಿಕೆ, ಚಾನೆಲ್ ನವರ ಪರಿಚಯವಾಗಿರುತ್ತೆ. ಅದು ಜೊತೆಗಿರುವ ಸೀನಿಯರ್ ಪರಿಚಯ ಮಾಡಿಕೊಟ್ರೆ! ಡೆಸ್ಕ್ ನಲ್ಲಿ ಕೆಲಸ ಮಾಡ್ತಿದ್ರೆ, ಆಫೀಸ್ ಗೆ ಹೋಗಿ ಬರುವ ರೂಟಿನ ಬಸ್ ಬಿಟ್ರೆ ಮತ್ತೊಂದು ಗೊತ್ತಿರುವುದಿಲ್ಲ.

ಕ್ಯಾಂಪಸ್ ನಲ್ಲಿದ್ದಾಗ ಕೆಲಸವೊಂದು ಸಿಗ್ಲಿ, ನಾನು ಏನು ಅನ್ನೋದು ತೋರಿಸುತ್ತೇನೆ ಅಂದವರೆಲ್ಲ ಹೊತ್ತಿಗೆ ಸರಿಯಾಗಿ ಊಟ ಮಾಡುವುದಕ್ಕೂ ಆಗ್ತಿರೋದಿಲ್ಲ. ಕಣ್ತುಂಬ ನಿದ್ದೆ ಬಂಗಾರವಾಗಿರುತ್ತೆ. ಹೊಸಬರಿಗೆ ವಾರದ ರಜೆ ಅನ್ನೋದು ಮೂರ್ನಾಲ್ಕು ತಿಂಗಳು ದೂರದ ಮಾತು. ಮುಂಜಾನೆ 8 ಗಂಟೆಗೆ ಆಫೀಸಿಗೆ ಬಂದ್ರೆ ರಾತ್ರಿ 8 ಆದ್ರೂ 9 ಆದ್ರೂ ಆಗುತ್ತೆ. ರೂಮ್ ಸೇರಿ ಊಟ ಮಾಡಿ ಮಲಗಿಕೊಳ್ಳುವಷ್ಟರಲ್ಲಿ ಗಡಿಯಾರದ ಮುಳ್ಳು 12ರ ಆಚೆ ಈಚೆ ಇರುತ್ತೆ. ಇದು ಬರೀ ಒಂದು ದಿನದ ಕಥೆಯಲ್ಲ. ಶುರುವಿನ ಆರೇಳು ತಿಂಗಳ ಕಥೆ. ಬರೀ ಕೆಲಸ ಕೆಲಸ ಅನ್ನೋ ಧಾವಂತದಲ್ಲಿ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ವರ್ಷಕ್ಕೆ ಮೂರ್ನಾಲ್ಕು ದಿನ ರಜೆ ಸಿಕ್ಕರೆ ಊರಿಗೆ ಬರುವುದಕ್ಕೂ ಹಿಂದೆಮುಂದೆ ನೋಡಬೇಕು. ಯಾಕಂದ್ರೆ, ದುಡಿದ ದುಡ್ಡು ಎಲ್ಲಿ ಹೋಯ್ತು ಅನ್ನೋದಕ್ಕೆ ಉತ್ತರವೇ ಇರೋದಿಲ್ಲ. ಮತ್ತೊಬ್ಬರ ಬಳಿ ಕೈಚಾಚದೆ ವಿಧಿ ಇರೋದಿಲ್ಲ. ಆಗ ಅನಿಸುತ್ತೆ..

ಹಿಕಾಯತ್ ಯೆ ಹಸ್ತೀ ಸುನೀ

ತೊ ದರ್ಮಿಯಾಂ ಸೆ ಸುನೀ

ನಾ ಇಬ್ತಿದಾ ಕೀ ಖಬರ್ ಹೈ

ನಾ ಇಂತಿಹ ಮಾಲೂಮ್

ಅಂದ್ರೆ, ಬದುಕಿನ ಬಗ್ಗೆ ನಾನು ಕೇಳಿದ್ದೆಲ್ಲವೂ ವ್ಯಕ್ತ ಮಧ್ಯ ಮಾತ್ರ. ನನಗೆ ಬದುಕಿನ ಆದಿಯೂ ಗೊತ್ತಿಲ್ಲ. ಅಂತ್ಯವೂ ತಿಳಿದಿಲ್ಲ ಅನ್ನೋದು. ಇದು ಉರ್ದು ಪದ್ಯದ ಸಾಲುಗಳು. ಖ್ಯಾತ ಪತ್ರಕರ್ತ, ಅಂಕಣಗಾರ, ಲೇಖಕ ಖುಷ್ವಂತ್ ಸಿಂಗ್ ಅವರ ಖುಷ್ವಂತ್ ನಾಮ ಪುಸ್ತಕದಿಂದ ಎರವಲು ಪಡೆದಿದ್ದೇನೆ. ಬದುಕಿನ ಮೂಕ್ಕಾಲು ಆಯುಷ್ಯ ಕಳೆದವನು ಆಡಬೇಕಾದ ಮಾತುಗಳನ್ನ, ಇಪ್ಪತ್ತೆರಡು, ಇಪ್ಪತ್ತಮೂರರ ಹುಡುಗ ಆಡಲು ಶುರು ಮಾಡ್ತಾನೆ. ಅದು ಹೆಚ್ಚಾಗಿ ಪತ್ರಕರ್ತರಲ್ಲಿಯೇ ಯಾಕೆ ಅಂತಾ ನೋಡಿದರೆ..

ನೆಮ್ಮದಿಯಿಲ್ಲದ ಬದುಕು. ಯಾವುದಕ್ಕಾಗಿ ದುಡಿಯುತ್ತಿದ್ದೇವೋ ಅದು ಸರಿಯಾಗಿ ಸಿಗದ ಜೀವನ. ಸಣ್ಣ ಸಣ್ಣ ಖುಷಿಗಳನ್ನ ಸಹ ಮೂಟೆ ಕಟ್ಟಿ ಊರಿನಿಂದ ತಂದ ಬ್ಯಾಗ್ ನಲ್ಲಿ ಇಟ್ಟುಬಿಡಬೇಕು. ಎಂಟು ಗಂಟೆ ಕೆಲಸ ಅನ್ನೋದಕ್ಕೆ ಇಲ್ಲಿ ಜಾಗವಿಲ್ಲ. ಇದರ ನಡುವೆ ಸಣ್ಣಪುಟ್ಟ ತಪ್ಪುಗಳಾದ್ರೆ ಕೆಲಸ ಬಿಟ್ಟು ಹೋಗಿ ಅನ್ನುವ ಮಾತುಗಳು ಪದೆಪದೆ ಕೇಳಿ ಬರುತ್ತವೆ. ಇದರಿಂದ ಕೆಲಸ ಕಳೆದುಕೊಳ್ಳುವ ಭಯ ಕಾಡ್ತಾನೆ ಇರುತ್ತೆ. ಸೀನಿಯರ್ ಎನಿಸಿಕೊಂಡ ಕೆಲವರು ಮಾಡುವ ಅವಮಾನ, ಅವಾಂತರ, ಕಾಟ ಕೊಡುವ ಪರಿ ನೋಡಿದ್ರೆ ಕಣ್ಣು ಕೆಂಪು ಮಾಡಿಕೊಳ್ಳುವ ಯುವಕರ ಸಂಖ್ಯೆಯೇನು ಕಡಿಮೆಯಿಲ್ಲ. ಊರಿಗೆ ಫೋನ್ ಮಾಡಿದಾಗ ಮೊದಲಿದ್ದ ಧ್ವನಿಯಾಗ್ಲಿ, ಖುಷಿಯಾಗ್ಲಿ ಇರಲ್ಲ. ಇರುವಂತೆ ನಟಿಸಬೇಕು. ಇದನ್ನ ಅನುಭವಿಸುತ್ತಾ ಬದುಕಿಗೆ ಬೈಯಬೇಕಾ.. ಆಸೆ ಪಟ್ಟು ಪತ್ರಕರ್ತನಾಗಬೇಕೆಂದುಕೊಂಡು ಬಂದ ತಪ್ಪಿಗೆ ತಾವೇ ಬೈಯ್ದುಕೊಳ್ಳಬೇಕಾ ಅನ್ನೋ ಕನ್ ಫ್ಯೂಸ್ ನಲ್ಲಿಯೇ ಒಂದೆರಡು ವರ್ಷ ಕಳೆದು ಹೋಗಿರುತ್ತದೆ. ಬಂದ ದಾರಿಯನ್ನ ಒಮ್ಮೆ ತಿರುಗಿ ನೋಡಿದ್ರೆ, ಸಾಧನೆ ಅನ್ನೋ ಗ್ರಾಫ್ ಒಂದಿಂಚೂ ಕದಲಿರುವುದಿಲ್ಲ.

ಇದರ ನಡುವೆಯೂ ಕೆಲಸ ಮಾಡ್ತಾರೆ. ಯಾಕೆ ಗೊತ್ತಾ.. ಕೆಂಪು ಬಸ್ ಹತ್ತಿ ಬಂದವನ ಬದುಕು ಹರಿದ ಕೌದಿಯಾಗಿರುತ್ತೆ. ದುಡಿಮೆ ಮತ್ತು ಹೊಂದಾಣಿಕೆ ಅನ್ನೋ ಸೂಜಿದಾರ ಪೋಣಿಸಿ ಅದನ್ನ ಹೊಲಿಯುವ ಕನವರಿಕೆಯಲ್ಲಿರುತ್ತಾನೆ…




Leave a Reply

Your email address will not be published. Required fields are marked *

error: Content is protected !!